Advertisement

ಕರ್ನಾಟಕ-ಆಂಧ್ರ ಗಡಿ ಗುರುತು ವಿವಾದಕ್ಕೆ ಮರುಜೀವ

03:20 PM Jun 01, 2022 | Team Udayavani |

ಬಳ್ಳಾರಿ: ಅಕ್ರಮ ಗಣಿಗಾರಿಕೆ ವೇಳೆ ಗಡಿ ಗುರುತು ನಾಶದಿಂದ ಆರಂಭವಾದ ಕರ್ನಾಟಕ-ಆಂಧ್ರಪ್ರದೇಶ ಗಡಿ ರೇಖೆ ವಿವಾದ ಇದೀಗ ಪ್ರಧಾನ ಮಂತ್ರಿ ಕಚೇರಿ ಮೆಟ್ಟಿಲು ಹತ್ತುವ ಮೂಲಕ ಪುನಃ ಮುನ್ನೆಲೆಗೆ ಬಂದಿದೆ.

Advertisement

ಈಗಾಗಲೇ ಸರ್ವೇ ಆಫ್‌ ಇಂಡಿಯಾದವರು ನಡೆಸಿರುವ ಗಡಿ ಗುರುತು ಕಾರ್ಯವನ್ನು ಆಕ್ಷೇಪಿಸಿ ರುವ ಗಣಿ ಉದ್ಯಮಿ ಟಪಾಲ್‌ ಗಣೇಶ್‌, ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದಾರೆ. ದೂರು ಆಲಿಸಿರುವ ಪಿಎಂ ಕಚೇರಿ, ದೂರು ಆಧರಿಸಿ ಕ್ರಮ ವಹಿಸುವಂತೆ ಬಳ್ಳಾರಿ ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಗಣಿ ಉದ್ಯಮಿ ಟಪಾಲ್‌ ಗಣೇಶ್‌ ಕರ್ನಾಟಕ-ಆಂಧ್ರ ಗಡಿ ರೇಖೆ ವಿಚಾರ ಕುರಿತು ಪದೇ ಪದೆ ತಗಾದೆ ತೆಗೆಯುತ್ತಲೇ ಬಂದಿದ್ದಾರೆ. ಕೇಂದ್ರದ ಭೂ ಸಮೀಕ್ಷೆ ಇಲಾಖೆ ಅಧಿಕಾರಿಗಳ ತಂಡ ಸಮೀಕ್ಷೆಗೆಂದು ಕರ್ನಾಟಕ-ಆಂಧ್ರ ಗಡಿ ಪ್ರದೇಶದಲ್ಲಿ ಸಮೀಕ್ಷೆ ಕೈಗೊಂಡಾಗ ಅಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಗಡಿ ರೇಖೆ ಗುರುತಿಸಲು ಅನುಸರಿಸುತ್ತಿರುವ ನಕಾಶೆ ಕಾಲ್ಪನಿಕ ವಾಗಿ ಸೃಷ್ಟಿಸಿದ ಒಂದು ಚಿತ್ರವಾಗಿದೆ. ಅದರ ತಯಾರಿಯ ಚಿತ್ರಣ ವಿವರಿಸುವ ಯಾವುದೇ ಪೂರಕ ದಾಖಲೆ ಇಲ್ಲ. ಅದನ್ನು ಆಧರಿಸಿ, ಆಂಧ್ರ- ಕರ್ನಾಟಕ ಗಡಿ ರೇಖೆ ಗುರುತಿಸುವ ಪದ್ಧತಿಯೇ ತಪ್ಪು. ಸಮೀಕ್ಷೆ ವೇಳೆ ಕಾಂಟೂರ್‌ ಮೆಥಡಾಲಜಿಯನ್ನು ಅನುಸರಿಸಿಲ್ಲ ಎಂದು ಆಕ್ಷೇಪಿಸುತ್ತಲೇ ಇರುವ ಟಪಾಲ್‌ ಗಣೇಶ್‌, ಸರ್ವೇ ಅಧಿ ಕಾರಿಗಳ ಕಾರ್ಯವೈಖರಿ ವಿರುದ್ಧ ಅಪಸ್ವರ ತೆಗೆಯುತ್ತಲೇ ಬಂದಿ ದ್ದಾರೆ. ಆದರೆ ಅವರ ಮಾತುಗಳು ಅರಣ್ಯ ರೋದನ ಆಗಿದ್ದವು.

ಗಣೇಶ್‌ ಮಾಡುವ ಆರೋಪದಂತೆ ಸರ್ವೇ ಆಫ್‌ ಇಂಡಿಯಾ ತಂಡ ಮಾಜಿ ಸಚಿವ ಜನಾರ್ದನ ರೆಡ್ಡಿ ಮೇಲಿರುವ ಅಕ್ರಮ ಗಣಿಗಾರಿಕೆ ಆರೋಪಗಳನ್ನು ಮರೆಮಾಚುವ ರೀತಿಯಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳುತ್ತಿದೆ. ಇದರಿಂದ ನಮ್ಮ ರಾಜ್ಯಕ್ಕೆ ಅನ್ಯಾಯ ಆಗುವುದು ಮಾತ್ರವಲ್ಲ, ಆಗಿರುವ ಅಕ್ರಮ ಗಣಿಗಾರಿಕೆ ಸಕ್ರಮ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಾರೆ. ಸುಪ್ರೀಂಕೋರ್ಟ್‌ ಸೂಚನೆಯಂತೆ ಬಳ್ಳಾರಿ ಜಿಲ್ಲಾಧಿಕಾರಿ, ಆಂಧ್ರದ ಅನಂತಪುರ ಜಿಲ್ಲಾಧಿಕಾರಿಗಳೊಂದಿಗೆ ಸರ್ವೇ ಆಫ್‌ ಇಂಡಿಯಾದವರು ನಡೆಸಿರುವ ಸರ್ವೇ ಕಾರ್ಯದ ವರದಿ ಈಗಾಗಲೇ ಸುಪ್ರೀಂಕೋರ್ಟ್‌ಗೆ ಸಲ್ಲಿಕೆಯಾಗಿದೆ ಎನ್ನಲಾಗಿದೆ. ಇದರಿಂದ ನ್ಯಾಯ ಸಿಗುವುದು ಅನುಮಾನ ಎಂದರಿತ ಟಪಾಲ್‌ ಗಣೇಶ್‌, ಇದೀಗ ಪಿಎಂ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಪಿಎಂಒ ಕಚೇರಿಯಿಂದ ಬಂದ ಪತ್ರದ ಕುರಿತು ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಅರಣ್ಯಾಧಿ ಕಾರಿಗೆ ಕೇಳಿದರೆ ನಾನು ಈ ಕುರಿತು ಮಾತನಾಡುವ ಸರಿಯಾದ ಅಧಿಕಾರಿ ಅಲ್ಲ. ಈ ಕುರಿತು ಮಾತನಾಡಲು ಜಿಲ್ಲಾಧಿಕಾರಿಗಳು ಮಾತ್ರ ಅಧಿಕಾರ ಹೊಂದಿದವರು ಎಂದು ಹೇಳಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳನ್ನು ಈ ಕುರಿತು ಕೇಳಿದರೆ ನನಗೆ ಆ ತರಹದ ಯಾವುದೇ ಪತ್ರ ಬಂದಿಲ್ಲ ಎಂದು ಒಮ್ಮೆ ಹೇಳಿದರೆ, ಪತ್ರ ಬಂದಿದ್ದರೂ ನನಗೆ ಈವರೆಗೆ ಅದು ತಲುಪಿಲ್ಲ ಎಂದಷ್ಟೇ ಹೇಳಿದ್ದಾರೆ.

Advertisement

ಗಡಿ ರೇಖೆ ಸಮೀಕ್ಷೆ ವಿಚಾರ ಸದಾ ಚರ್ಚೆಯಲ್ಲಿದೆ. ಒಂದಿಲ್ಲೊಂದು ವಿವಾದಕ್ಕೆ ಎಡೆಮಾಡಿಕೊಡುತ್ತಲೇ ಇದೆ. ಸರ್ವೇ ಆಫ್‌ ಇಂಡಿಯಾದಿಂದ ಬಂದ ಅಧಿಕಾರಿಗಳ ತಂಡ ಎರಡೂ ರಾಜ್ಯದ ಭೂ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಸಮೀಕ್ಷೆ ಕೈಗೊಂಡು ಸುಪ್ರೀಂಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ವರದಿ ಸಹ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ ಈ ವಿವಾದಗಳನ್ನು ಪರಿಶೀಲಿಸಿ ಅಂತಿಮ ತೀರ್ಪು ನೀಡುತ್ತದೆಯಾ ಎಂಬುದು ಎಲ್ಲರ ಮುಂದಿರುವ ಪ್ರಶ್ನೆ.

ಬಳ್ಳಾರಿಯಿಂದ ಗಣೇಶ್‌ ಎನ್ನುವವರು ದೂರು ನೀಡಿರುವ ಹಿನ್ನೆಲೆಯಲ್ಲಿ ಪಿಎಂ ಕಚೇರಿಯಿಂದ ಸೂಚನೆ ಬಂದಿದೆ. ಆ ಹಿನ್ನೆಲೆಯಲ್ಲಿ ಪೆಟ್ರೋಲಿಂಗ್‌ ಮಾಡಲು ಅಂತಾರಾಜ್ಯ ಗಡಿ ವೀಕ್ಷಣೆಗೆ ಹೋಗಿದ್ದೆ. ಬಳ್ಳಾರಿಗೆ ಬಂದಾಗಿನಿಂದ ಅಲ್ಲಿಗೆ ಹೋಗಿರಲಿಲ್ಲ. ಗಡಿ ವಿಚಾರಕ್ಕೆ ಜಿಲ್ಲಾಧಿಕಾರಿಗಳೇ ನೋಡಲ್‌ ಅಧಿಕಾರಿಗಳು. ಸಂದೀಪ್‌ ಸೂರ್ಯವಂಶಿ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಬಳ್ಳಾರಿ

1896 ಅರಣ್ಯ ಮ್ಯಾಪ್‌ನಲ್ಲಿ ಗುಡ್ಡಗಳಲ್ಲಿ ಗಡಿರೇಖೆ ಹೇಗೆ ಹೋಗಿದೆ ಎಂಬುದರ ಕುರಿತ ಸ್ಪಷ್ಟ ಚಿತ್ರಣಗಳಿವೆ. ಅದೇ ನಕ್ಷೆಯನ್ನು ಆಧರಿಸಿ, ಪ್ರಪೋಜ್ಡ್ ನಕ್ಷೆಯನ್ನು ಮಾಡಿ, ಕಾಂಟೂರ್‌ಗಳನ್ನು ಗಣನೆಗೆ ತೆಗೆದುಕೊಳ್ಳದೆ ಗಡಿ ಗುರುತುಗಳನ್ನು ನಿರ್ಮಿಸಿದ್ದಾರೆ. ಇದಕ್ಕೆ ಆಕ್ಷೇಪಿಸಿ ಪಿಎಂ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದೆ. ಅಲ್ಲಿಂದ ಬಳ್ಳಾರಿ ಡಿಸಿಎಫ್‌ಗೆ ಪತ್ರ ಬಂದಿದ್ದು, ಅದರಂತೆ ಶುಕ್ರವಾರ ಅವರು ಸ್ಥಳ ಪರಿಶೀಲನೆ ನಡೆಸಿದ್ದಾರೆ. –ಟಪಾಲ್‌ ಗಣೇಶ್‌, ಗಣಿ ಉದ್ಯಮಿ, ಬಳ್ಳಾರಿ

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next