Advertisement

Revival: ಭಾರತಕ್ಕೆ ಬಾಂಗ್ಲಾದೇಶ ಸೆಡ್ಡು: ಪಾಕಿಸ್ಥಾನ ಜತೆ ವಹಿವಾಟಿಗೆ ಸಜ್ಜು!

03:55 AM Dec 24, 2024 | Team Udayavani |

ಢಾಕಾ/ಹೊಸದಿಲ್ಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹದಗೆಡುತ್ತಿರುವುದರ ನಡುವೆಯೇ ಪಾಕಿಸ್ಥಾನ ಮತ್ತು ಬಾಂಗ್ಲಾ ಸಂಬಂಧ ಗಟ್ಟಿಯಾಗುತ್ತಿರುವುದು ಕಳವಳ ಹೆಚ್ಚಿಸಿದೆ. ಭಾರತಕ್ಕೆ ಸೆಡ್ಡು ಹೊಡೆದಿರುವ ಬಾಂಗ್ಲಾದ ಮಧ್ಯಾಂತರ ಸರಕಾರವು ಪಾಕಿಸ್ಥಾನದ ಜತೆ ವ್ಯವಹಾರವನ್ನು ಹೆಚ್ಚು ಮಾಡಿದೆ.

Advertisement

ಪಾಕಿಸ್ಥಾನದ ಕರಾಚಿಯಿಂದ ಹೊರಟ 2ನೇ ಸರಕು ಸಾಗಣೆ ಹಡಗು ಬಾಂಗ್ಲಾದೇಶವನ್ನು ತಲುಪಲಿದ್ದು, ಇದರಲ್ಲಿ ಬಾಂಗ್ಲಾಕ್ಕೆ ಅಗತ್ಯವಾದ ಸರಕುಗಳು ಮತ್ತು ಶಸ್ತ್ರಾಸ್ತ್ರಗಳನ್ನು ಸಾಗಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿ ಪಾಕ್‌ ಬೆಂಬಲದೊಂದಿಗೆ ಪಶ್ಚಿಮ ಭಾಗದಲ್ಲೂ ಭಯೋತ್ಪಾದನೆ ಮತ್ತೆ ಆರಂಭವಾಗುವ ಭೀತಿ ಎದುರಾಗಿದೆ.

ಪನಾಮ ದೇಶದ ಹಡಗು ಸಾವಿರಕ್ಕೂ ಹೆಚ್ಚು ಕಂಟೈನರ್‌ಗಳನ್ನು ಹೊತ್ತು, ಬಾಂಗ್ಲಾದೇಶದ ಚತ್ತೋಗ್ರಾಮ (ಚಿತ್ತಗಾಂಗ್‌) ಬಂದರು ತಲುಪಲಿದೆ. ಇದರಲ್ಲಿ ಸೋಡಿಯಂ ಕಾಬೋನೇಟ್‌, ಡೋಲೋಮೈಟ್‌, ಮಾರ್ಬಲ್‌ ಕಲ್ಲುಗಳು, ಗಾರ್ಮೆಂಟ್ಸ್‌ ಕಚ್ಚಾವಸ್ತು, ಸಕ್ಕರೆ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ನವೆಂಬರ್‌ನಲ್ಲಿ ಮೊದಲ ಹಡಗು ಚತ್ತೋಗ್ರಾಮ ಬಂದರನ್ನು ತಲುಪಿತ್ತು. ಇದು 50 ವರ್ಷಗಳ ಬಳಿಕ ಪಾಕಿಸ್ಥಾನ ಮತ್ತು ಬಾಂಗ್ಲಾದ ನಡುವೆ ನಡೆದ ವ್ಯವಹಾರವಾಗಿತ್ತು.

ವ್ಯಾಪಾರಿಗಳಿಗೆ ಒತ್ತಡ
ಪಾಕಿಸ್ಥಾನದಿಂದಲೇ ಸರಕು ಆಮದು ಮಾಡಿಕೊಳ್ಳಬೇಕು ಎಂದು ಬಾಂಗ್ಲಾದ ಮಧ್ಯಾಂತರ ಸರಕಾರ ವ್ಯಾಪಾರಿಗಳ ಮೇಲೆ ಒತ್ತಡ ಹೇರುತ್ತಿದೆ ಎಂದೂ ವರದಿಗಳು ತಿಳಿಸಿವೆ. ಇದು ಭಾರತವನ್ನು ವ್ಯಾಪಾರದಿಂದ ಸಂಪೂರ್ಣವಾಗಿ ದೂರವಿಟ್ಟು ಪಾಕಿಸ್ಥಾನವನ್ನು ಮತ್ತೆ ಅವಲಂಬಿಸುವ ನೀತಿಯಾಗಿದೆ ಎನ್ನಲಾಗಿದೆ.

ಭಾರತಕ್ಕೆ ಅಪಾಯ?:
ಶೇಖ್‌ ಹಸೀನಾ ಸರಕಾರವಿದ್ದಾಗ ಭಾರತ ಈ ಬಂದರಿನ ಮೂಲಕ ಬಂಗಾಳಕೊಲ್ಲಿಯ ಪೂರ್ವ ಭಾಗದ ಮೇಲೆ ಕಣ್ಣಿಟ್ಟಿತ್ತು. ಹೀಗಾಗಿ ಚೀನದಿಂದ ಒದಗಬಹುದಾದ ಸಂಭಾವ್ಯ ಅಪಾಯ ತಪ್ಪುತ್ತಿತ್ತು. ಆದರೆ ಈ ಅವಕಾಶ ಈ ಭಾರತಕ್ಕೆ ಕೈತಪ್ಪಲಿದೆ. ಪೂರ್ವ ಭಾಗದಲ್ಲೂ ಶತ್ರುಗಳು ಭಯೋತ್ಪಾದನ ಕೃತ್ಯದಲ್ಲಿ ತೊಡಗಲು ಅನುಕೂಲ ಒದಗಿಸಲಿದೆ.

Advertisement

ಭಾರತಕ್ಕೆ ಚತ್ತೋಗ್ರಾಮ ಬಂದರು ಬಂದ್‌?
ಬಂಗಾಳ ಕೊಲ್ಲಿಯ ಪ್ರಮುಖ ಬಂದರು ಎಂದು ಗುರುತಿಸಿಕೊಂಡಿರುವ ಬಾಂಗ್ಲಾದೇಶದ ಚತ್ತೋಗ್ರಾಮ ಬಂದರಿಗೆ ಭಾರತದ ಪ್ರವೇಶವನ್ನು ತಡೆಯಲು ಬಾಂಗ್ಲಾದ ಮಧ್ಯಾಂತರ ಸರಕಾರ ಚಿಂತನೆ ನಡೆಸಿದೆ. ಪಾಕ್‌ ಜತೆ ವ್ಯವಹಾರವನ್ನು ಹೆಚ್ಚಿಸಿರುವ ಬಾಂಗ್ಲಾದೇಶ, ಭಾರತದೊಂದಿಗಿನ ವಾಣಿಜ್ಯ ಒಪ್ಪಂದಗಳ ಪರಿಶೀಲನೆ ನಡೆಸಲು ಅಧಿಕಾರಿಗಳಿಗೆ ಸೂಚಿಸಿದೆ.

ಅಧಿಕಾರ ವಹಿಸಿಕೊಂಡಾಗಿನಿಂದಲೂ ಭಾರತ ವಿರೋಧಿ ನಿಲುವುಗಳನ್ನು ತಾಳುತ್ತಿರುವ ಮಧ್ಯಾಂತರ ಸರಕಾರದ ಮುಖ್ಯಸ್ಥ ಮೊಹಮ್ಮದ್‌ ಯೂನುಸ್‌, ಭಾರತವನ್ನು ಬಾಂಗ್ಲಾದೇಶದ ಬಂದರುಗಳನ್ನು ದೂರ ಇಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next