Advertisement

Karnataka: ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ

11:40 PM Sep 30, 2023 | Team Udayavani |

ಬೆಂಗಳೂರು: ಗ್ಯಾರಂಟಿ ಯೋಜನೆಗಳಿಂದ ಬೊಕ್ಕಸದ ಮೇಲಾಗುವ ಭಾರ ಇಳಿಸಿಕೊಳ್ಳಲು ಬಜೆಟ್‌ನಲ್ಲಿ ಪ್ರಸ್ತಾವಿ ಸಿದಂತೆ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೊಂಡಿದ್ದು, ಅ.1ರಿಂದ ಪರಿಷ್ಕೃತ ಮಾರ್ಗಸೂಚಿ ದರ ಜಾರಿಗೆ ಬರಲಿದೆ.

Advertisement

ಆದರೆ ಅ.1ರ ರವಿವಾರ ಹಾಗೂ ಅ.2ರ ಸೋಮವಾರ ಸರಕಾರಿ ರಜೆ ಇರುವ ಕಾರಣ ಅ.3 ರಿಂದ ಅಧಿಕೃತವಾಗಿ ಪರಿಷ್ಕೃತ ದರ ಜಾರಿಗೆ ಬರಲಿದೆ.

2019ರ ಜ.1ರಲ್ಲಿ ಮಾರ್ಗಸೂಚಿ ದರ ಪರಿಷ್ಕರಣೆಗೊಂಡಿದ್ದು ಬಿಟ್ಟರೆ ಆ ಬಳಿಕ ಈಗ ಪರಿಷ್ಕರಣೆ ಆಗುತ್ತಿದೆ. ಅನಂತರ ಅನೇಕ ಸೊತ್ತುಗಳು ಭೌತಿಕ ಬದಲಾವಣೆಗೆ ಒಳಪಟ್ಟು ಮಾರುಕಟ್ಟೆ ದರಗಳಲ್ಲಿ ವ್ಯತ್ಯಾಸಗಳಾಗಿವೆ. ಕಪ್ಪು ಹಣದ ವಹಿವಾಟಿಗೂ ಇದು ಕಾರಣವಾಗಿದೆ. ಈ ಲೋಪಗಳನ್ನು ಸರಿಪಡಿಸಲು ಮಾರ್ಗಸೂಚಿ ದರ ಪರಿಷ್ಕರಣೆ ಅನಿವಾರ್ಯ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ನೇತೃತ್ವದ ಸಂಪುಟ ಉಪಸಮಿತಿ ಶಿಫಾರಸು ಮಾಡಿತ್ತು. ಇದಕ್ಕೆ ಸಚಿವ ಸಂಪುಟ ಸಭೆಯ ಅನುಮೋದನೆಯೂ ದೊರೆತಿತ್ತು.

25 ಸಾ.ಕೋಟಿ ರೂ. ಸಂಗ್ರಹದ ಗುರಿ
ಕಳೆದ ಬಜೆಟ್‌ನಲ್ಲಿ ಮುದ್ರಾಂಕ ಮತ್ತು ನೋಂದಣಿ ಇಲಾಖೆಗೆ 17 ಸಾವಿರ ಕೋಟಿ ರೂ.ಗಳ ರಾಜಸ್ವ ಸಂಗ್ರಹಣೆ ಗುರಿ ಕೊಟ್ಟಿದ್ದ ಸರಕಾರ, ಈ ಬಾರಿ ಬಜೆಟ್‌ನಲ್ಲಿ ಬರೋಬ್ಬರಿ 25 ಸಾವಿರ ಕೋಟಿ ರೂ.ಗಳ ಗುರಿ ನೀಡಿದೆ. ಕಳೆದ ಬಾರಿಗಿಂತ ಸರಿಸುಮಾರು 8 ಸಾವಿರ ಕೋಟಿ ರೂ.ಗಳ ಹೆಚ್ಚು ಗುರಿ ಇಟ್ಟುಕೊಂಡಿರುವ ಸರಕಾರ, ಉಳಿದಿರುವ ಐದಾರು ತಿಂಗಳಲ್ಲಿ ಗುರಿ ತಲುಪಬೇಕಿದೆ. ಗುರಿ ಮೀರಿ ಸಾಧನೆ ಮಾಡುವಂತೆಯೂ ಅಧಿಕಾರಿಗಳಿಗೆ ಸಿಎಂ ಸೂಚಿಸಿದ್ದಾರೆ. ಇದೇ ಕಾರಣದಿಂದ ಜೂ.25ರಿಂದ ರಾಜ್ಯದ 256 ಉಪನೋಂದಣಾಧಿಕಾರಿ ಕಚೇರಿಗಳಲ್ಲೂ ಕಾವೇರಿ-2 ಸುಧಾರಿತ ತಂತ್ರಾಂಶದಡಿಯೇ ನೋಂದಣಿ, ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, ಸೆ.27ರಂದು ಒಂದೇ ದಿನ 26,058 ನೋಂದಣಿ, ದಸ್ತಾವೇಜು ನಡೆದು 311 ಕೋಟಿ ರೂ. ಸಂಗ್ರಹವಾಗಿತ್ತು.

ಮಾರುಕಟ್ಟೆ ದರ ಮತ್ತು ಮಾರ್ಗಸೂಚಿ ದರಕ್ಕೆ ಸಾಮ್ಯತೆ ಇರುವ ಪ್ರದೇಶಗಳಲ್ಲಿ ಶೇ.10ರಷ್ಟು ಮಾರ್ಗಸೂಚಿ ದರ ಏರಿಕೆ ಆಗಲಿದೆ. ಮಾರ್ಗಸೂಚಿ ದರಕ್ಕಿಂತ 200 ಪಟ್ಟು ಮಾರುಕಟ್ಟೆ ದರವಿದ್ದರೆ ಶೇ.20 ರಿಂದ 25ರಷ್ಟು ಮಾರ್ಗಸೂಚಿ ದರದಲ್ಲಿ ಹೆಚ್ಚಳ ಆಗಲಿದೆ. ಮಾರ್ಗಸೂಚಿಗಿಂತ 500 ಪಟ್ಟು ಮಾರುಕಟ್ಟೆ ದರ ಇರುವ ಬೆಂಗಳೂರಿನ ಕೆಲವು ಪ್ರದೇಶಗಳು, ರಾಷ್ಟ್ರೀಯ ಹೆದ್ದಾರಿ ಬದಿಯ ಸೊತ್ತುಗಳಿಗೆ ಶೇ.50ರ ವರೆಗೆ ಮಾರ್ಗಸೂಚಿ ದರ ಪರಿಷ್ಕರಣೆ ಆಗಲಿದೆ. ಒಟ್ಟಾರೆ ಸ್ಥಿರಾಸ್ತಿಗಳ ಮಾರುಕಟ್ಟೆ ದರದಲ್ಲಿ ಸರಾಸರಿ ಶೇ.30ರಷ್ಟು ಹೆಚ್ಚಳವಾಗಿದ್ದು, ಗರಿಷ್ಟ ಶೇ.50ರ ವರೆಗೆ ಏರಿಕೆ ಆಗಲಿದೆ.
ಪ್ರತಿ ಎಕ್ರೆ ಖುಷ್ಕಿ ಜಮೀನಿನ ಮಾರ್ಗಸೂಚಿ ದರವೂ 1 ಲಕ್ಷ ರೂ. ಆಗಲಿದೆ. ನಗರಸಭೆ, ಪುರಸಭೆ ವ್ಯಾಪ್ತಿಯ ನಿವೇಶನಗಳ ಪ್ರತಿ ಚದರ ಮೀಟರ್‌ಗೆ ಕನಿಷ್ಠ 5 ಸಾವಿರ ರೂ., ಗ್ರಾಮ ಠಾಣ ನಿವೇಶನದ ಪ್ರತಿ ಚದರ ಮೀಟರ್‌ಗೆ 1 ಸಾವಿರ ರೂ., ಸಕ್ಷಮ ಪ್ರಾಧಿಕಾರದಿಂದ ಅನುಮೋದನೆಗೊಂಡ ವಸತಿ ನಿವೇಶನಗಳ ಪ್ರತಿ ಚದರ ಮೀಟರ್‌ಗೆ 2,500 ರೂ. ಮಾರ್ಗಸೂಚಿ ನಿಗದಿಯಾಗಲಿದೆ.

Advertisement

8.66 ಲಕ್ಷ ನೋಂದಣಿ, 7 ಸಾವಿರ ಕೋಟಿ ರೂ. ಸಂಗ್ರಹ
ಕಾವೇರಿ-2 ತಂತ್ರಾಂಶದ ಮೂಲಕ ಆಸ್ತಿಗಳ ನೋಂದಣಿ, ದಸ್ತಾವೇಜು ಪ್ರಕ್ರಿಯೆ ಜೂನ್‌ 25ರಂದು ಆರಂಭಿಸಿದ ಅಂದಿನಿಂದ ಈವರೆಗೆ ರಾಜ್ಯಾದ್ಯಂತ 8.66 ಲಕ್ಷ ದಾಖಲೆಗಳ ನೋಂದಣಿ, ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 7 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗಿದೆ. ಕಳೆದ ಬಾರಿ ಇದೇ ಸಮಯಕ್ಕೆ 8.63 ಲಕ್ಷ ದಾಖಲೆಗಳ ನೋಂದಣಿ, ದಸ್ತಾವೇಜು ಪ್ರಕ್ರಿಯೆಯಿಂದ 5,373 ಕೋಟಿ ರೂ. ಸಂಗ್ರಹವಾಗಿತ್ತು. ಕಳೆದ ಬಾರಿಗಿಂತ ಈ ಬಾರಿ 2,963 ದಾಖಲೆಗಳ ನೋಂದಣಿ, ದಸ್ತಾವೇಜು ಪ್ರಕ್ರಿಯೆ ನಡೆದಿದ್ದು, 1,627 ಕೋಟಿ ರೂ. ಹೆಚ್ಚುವರಿ ಸಂಗ್ರಹವಾಗಿದೆ. ಕಳೆದ 1 ವಾರದಲ್ಲಿ ಸುಮಾರು 1,500 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ ಎಂದು ನೋಂದಣಿ ಮಹಾಪರಿವೀಕ್ಷಕಿ ಮತ್ತು ಮುದ್ರಾಂಕ ಆಯುಕ್ತೆ ಡಾ| ಬಿ.ಆರ್‌. ಮಮತಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next