ಬೆಳಗಾವಿ ರಾಜ್ಯ ಸರಕಾರವು 2023ರ ವಾಣಿಜ್ಯ ತೆರಿಗೆ ಸಂಗ್ರಹಣೆ ಗುರಿಯನ್ನು 79,010 ಕೋಟಿ ರೂ.ಗೆ ಪರಿಷ್ಕರಿಸಿದ್ದು, ಪ್ರಸಕ್ತ ಸಾಲಿನ ಪ್ರಥಮಾರ್ಧದಲ್ಲಿ ವಾಣಿಜ್ಯ ತೆರಿಗೆಯಲ್ಲಿ 47,568 ಕೋಟಿ ರೂ.ಗಳ ರಾಜಸ್ವ ಸಂಗ್ರಹವಾಗಿದೆ.
ವಾಣಿಜ್ಯ ತೆರಿಗೆ ಸಂಗ್ರಹ ಪ್ರಮಾಣ ಆಯವ್ಯಯ ಅಂದಾಜಿನ ಶೇ.62ರಷ್ಟಿದ್ದು, ಈ ಸಾಲಿನಲ್ಲಿ ರಾಜ್ಯದ ಜಿಎಸ್‌ಟಿ ಸಂಗ್ರಹವು ಉತ್ತಮವಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆ ಸಂಗ್ರಹವು ಆಯವ್ಯಯ ಅಂದಾಜಿನ ಗುರಿಗೆ ಹೋಲಿಸಿದರೆ ಹೆಚ್ಚು ಸ್ವೀಕೃತವಾಗಿದೆ. ಹಾಗಾಗಿ ವಾಣಿಜ್ಯ ತೆರಿಗೆ ಸಂಗ್ರಹದ ಗುರಿಯನ್ನು ಪರಿಷ್ಕರಿಸಿದೆ ಎಂದು ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ ವರದಿಯಲ್ಲಿ ವಿವರಿಸಲಾಗಿದೆ.
ವಿಧಾನಸಭೆಯಲ್ಲಿ ಸೋಮವಾರ ವರದಿ ಮಂಡಿಸಿದ್ದು, ವರ್ಷದ ಪ್ರಥಮಾರ್ಧದಲ್ಲಿ 28,656 ಕೋಟಿ ರೂ.ಗಳಷ್ಟು ಜಿಎಸ್‌ಟಿ ಸಂಗ್ರಹವಾಗಿದೆ, ಅದರ ಹಿಂದಿನ ವರ್ಷ 22,039 ಕೋಟಿ ರೂ. ಜಿಎಸ್‌ಟಿ ಸಂಗ್ರಹವಾಗಿದ್ದು ಸೆಪ್ಟಂಬರ್ ಅಂತ್ಯಕ್ಕೆ ಕೇಂದ್ರ ಸರಕಾರದಿಂದ 8,633 ಕೋಟಿ ರೂ. ಜಿಎಸ್‌ಟಿ ಪರಿಹಾರದ ಬಾಕಿ ಸ್ವೀಕರಿಸಿದೆ ಎಂದು ತಿಳಿಸಲಾಗಿದೆ.
ರಾಜ್ಯದ ಅಬಕಾರಿ ಸುಂಕ ಸಂಗ್ರಹವು ಹಿಂದಿನ ಸಾಲಿನ ಪ್ರಥಮಾರ್ಧ 12,396 ಕೋಟಿ ರೂ. ಸಂಗ್ರಹವಾಗಿದ್ದು, ಶೇ. 19ರ ಬೆಳವಣಿಗೆಯೊಂದಿಗೆ 14,711 ಕೋಟಿ ರೂ.ಗೆ ಏರಿಕೆಯಾಗಿದೆ. ಮೋಟಾರು ವಾಹನಗಳಿಂದ ಸಂಗ್ರಹವಾದ ತೆರಿಗೆ ಶೇ.58ರ ಬೆಳವಣಿಗೆಯೊಂದಿಗೆ 4,479 ಕೋಟಿ ರೂ.ಗೆ ಏರಿಕೆಯಾಗಿದೆ, ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹವು ಹಿಂದಿನ ಸಾಲಿಗೆ ಹೋಲಿಸಿದರೆ ಶೇ.39ರಷ್ಟು ಬೆಳವಣಿಗೆಯೊಂದಿಗೆ 8,229 ಕೋಟಿ ರೂ.ಗೇರಿದೆ. 2023ನೇ ಸಾಲಿನಲ್ಲಿ ಬಂಡವಾಳ ಹೂಡಿಕೆಗಾಗಿ ರಾಜ್ಯಗಳಿಗೆ ನೀಡಲಾಗುವ ವಿಶೇಷ ಧನಸಹಾಯಕ್ಕೆ ರಾಜ್ಯ ಸರಕಾರ ಪಾತ್ರವಾಗಿದ್ದು, 50 ವರ್ಷಗಳ ಅವಧಿಗೆ ಬಡ್ಡಿರಹಿತ ಸಾಲದ ರೂಪದಲ್ಲಿ ಬಂಡವಾಳ ಹೂಡಿಕೆ ಉಪಯೋಗಕ್ಕಾಗಿ 2,918 ಕೋಟಿ ರೂ. ಮೊತ್ತವನ್ನು ಅನುಮೋದಿಸಿದೆ.
ಸ್ವಾಯತ್ತ ಸಂಸ್ಥೆಗಳಾದ ನಿಗಮ, ಮಂಡಳಿ ಇತ್ಯಾದಿಗಳನ್ನು ವಿಲೀನಗೊಳಿಸುವುದು, ಮುಚ್ಚು ವುದು ಮತ್ತು ಅನುತ್ಪಾದಕ ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಬೇಕು. ಆಸ್ತಿ ನಗದೀಕರಣದ ಪ್ರಕ್ರಿಯೆ ತ್ವರಿತಗೊಳಿಸಬೇಕು ವರದಿಯಲ್ಲಿ ಉಲ್ಲೇಖಿಸಲಾಗಿದೆ.