Advertisement

ಪರಿಷ್ಕೃತ ಜೇಷ್ಠತಾ ಪಟ್ಟಿ,ಪ್ರಮಾಣಪತ್ರ ಸಲ್ಲಿಸಲು ಸರ್ಕಾರ ಸಿದ್ಧತೆ

06:25 AM Jan 09, 2018 | Team Udayavani |

ಬೆಂಗಳೂರು:ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಜ.15 ರಂದು ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪರಿಷ್ಕೃತ ಜೇಷ್ಠತಾ ಪಟ್ಟಿಯೊಂದಿಗೆ  ಪ್ರಮಾಣಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದೆ.

Advertisement

ಬಡ್ತಿ ಮೀಸಲಾತಿ ಪಡೆದಿರುವವರ ಹಿತಾಸಕ್ತಿ ಕಾಪಾಡುವ ಉದ್ದೇಶದ ವಿಧೇಯಕ ರಾಷ್ಟ್ರಪತಿ ಅಂಗಳದಲ್ಲಿದ್ದು, ಜ.15 ರೊಳಗೆ ಅಲ್ಲಿಂದ ಸಂದೇಶ ಬಾರದಿದ್ದರೆ ಪರಿಷ್ಕೃತ ಜೇಷ್ಠತಾ ಪಟ್ಟಿಯೊಂದಿಗೆ ಪ್ರಮಾಣಪತ್ರ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ.

ಈಗಾಗಲೇ ಎಲ್ಲ ಇಲಾಖೆಗಳ ಜೇಷ್ಠತಾ ಪಟ್ಟಿ ಸಿದ್ಧವಾಗಿದ್ದು, ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಬಳಿ ಇದ್ದು, ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸುವ ಸಂಬಂಧ ಸಿದ್ಧತೆ ಮಾಡಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.

ಇಲಾಖಾವಾರು ಪರಿಷ್ಕೃತ ಜೇಷ್ಠತಾ ಪಟ್ಟಿ ಸಿದ್ಧಗೊಂಡು ವೈಬ್‌ಸೈಟ್‌ನಲ್ಲೂ ಕೆಲವು ಇಲಾಖೆಗಳು ಪ್ರಕಟಿಸಿವೆ. ಆದರೆ, ಅದರಲ್ಲಿ ಯಾರಿಗೆ ಮುಂಬಡ್ತಿ, ಯಾರಿಗೆ ಹಿಂಬಡ್ತಿ ಎಂಬುದರ ಸ್ಪಷ್ಟತೆ ಇಲ್ಲ. 1978 ರಿಂದ ಜೇಷ್ಠತಾ ಪಟ್ಟಿ ಸಿದ್ಧವಾಗಿದ್ದು ಕೆಲವರು ನಿವೃತ್ತಿಯಾಗಿದ್ದಾರೆ.

ರಾಜ್ಯ ಸರ್ಕಾರ, ನ್ಯಾಯಾಲಯದ ತೂಗುಕತ್ತಿಯಿಂದ ಪಾರಾಗಲು ಪರಿಷ್ಕೃತ ಜೇಷ್ಠತಾ ಪಟ್ಟಿ ಜತೆ ಪ್ರಮಾಣ ಪತ್ರ ಸಲ್ಲಿಸಲಿದೆ. ಆ ನಂತರ ನ್ಯಾಯಾಲಯದ ಸೂಚನೆ ಮೇರೆಗೆ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗಿದೆ.
ಮತ್ತೂಂದೆಡೆ ವಿಧೇಯಕ ಸಂಬಂಧ ಕೇಂದ್ರ ಗೃಹ ಇಲಾಖೆ ಸೂಚನೆ ಮೇರೆಗೆ ಆಡಳಿತ ಮತ್ತು ಸಿಬ್ಬಂದಿ ಸುಧಾರಣೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅನಿಲ್‌ಕುಮಾರ್‌ ಝಾ ಅವರು ದೆಹಲಿಗೆ ಹೋಗಿ ವಿವರಣೆ ನೀಡಿ ಬಂದಿದ್ದಾರೆ.

Advertisement

ಈಮಧ್ಯೆ, ಸುಪ್ರೀಂಕೋರ್ಟ್‌ನಲ್ಲಿ ಬಡ್ತಿ ಮೀಸಲಾತಿಗೆ ಸಂಬಂಧಿಸಿದಂತೆ ಕರ್ನಾಟಕದಿಂದಲೇ 25 ಕ್ಕೂ ಹೆಚ್ಚು ಮೇಲ್ಮನವಿಗಳು ಸಲ್ಲಿಕೆಯಾಗಿದ್ದು, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಬಡ್ತಿ ಮೀಸಲಾತಿ ಸಂಬಂಧದ ಪ್ರಕರಣಗಳನ್ನೂ ಸುಪ್ರೀಂಕೋರ್ಟ್‌ನಲ್ಲಿ ಒಂದೇ ಪೀಠಕ್ಕೆ ವರ್ಗಾಯಿಸಲಾಗಿದೆ.

ಕರ್ನಾಟಕದ ಪ್ರಕರಣದಲ್ಲಿ ವಿಧೇಯಕ ರಾಷ್ಟ್ರಪತಿಯವರ ಅಂಗೀಕಾರಕ್ಕೆ ಹೋಗಿದೆ. ಹೀಗಿರುವಾಗ ನ್ಯಾಯಾಲಯ ದಿಢೀರ್‌ ತೀರ್ಮಾನ ಕೈಗೊಳ್ಳುವುದಿಲ್ಲ. ವಿಷಯ ರಾಷ್ಟ್ರಪತಿಯವರ ಮುಂದೆ ಇರುವುದರಿಂದ ಬಹುತೇಕ ನ್ಯಾಯಾಲಯವು ಕರ್ನಾಟಕದ ವಿಚಾರದಲ್ಲಿ ತಕ್ಷಣಕ್ಕೆ ಮಧ್ಯಪ್ರವೇಶ ಮಾಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next