ಬೆಂಗಳೂರು: ರಾಜ್ಯದ ಮದ್ರಸಗಳಲ್ಲಿ ನೀಡುತ್ತಿರುವ ಶಿಕ್ಷಣದ ಗುಣಮಟ್ಟ, ಮೂಲಸೌಕರ್ಯ ಮತ್ತು ಶಿಕ್ಷಣದ ಸ್ವರೂಪ ತಿಳಿಯುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಮದ್ರಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ 15 ದಿನಗಳಲ್ಲಿ ವರದಿ ನೀಡುವಂತೆ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸೂಚಿಸಿದ್ದಾರೆ.
ರಾಜ್ಯದ ಮದ್ರಸಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲವೆಂದು ಹಲವು ಪೋಷಕರು ದೂರು ನೀಡಿರುವ ಹಿನ್ನೆಲೆಯಲ್ಲಿ ಬುಧವಾರ ಸಮಗ್ರ ಶಿಕ್ಷಣ ಕರ್ನಾಟಕ ಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಸಭೆ ಬಳಿಕ ಮಾತನಾಡಿದ ಸಚಿವ ಬಿ.ಸಿ. ನಾಗೇಶ್, ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲನೆಗೆಂದು ಮದ್ರಸಗಳಿಗೆ ತೆರಳಿದಾಗ ಸಹಕರಿಸುವುದಿಲ್ಲ ಎಂಬ ದೂರುಗಳು ಇಲಾಖೆಗೆ ಬಂದಿವೆ.
ಹೀಗಾಗಿ, ಕೆಲವು ಮದ್ರಸಗಳಿಗೆ ತೆರಳಿ ಪರಿಶೀಲನೆ ನಡೆಸಿ ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸ್ಥಿತಿ-ಗತಿ ಬಗ್ಗೆ ಮಾಹಿತಿ ತೆಗೆದುಕೊಂಡ ಅನಂತರ ಶಿಕ್ಷಣ ತಜ್ಞರು, ಮದ್ರಸ ನಡೆಸುತ್ತಿರುವವರ ಜತೆ ಸಭೆ ನಡೆಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ| ಎಸ್. ಸೆಲ್ವಕುಮಾರ್, ಪ.ಪೂ. ಶಿಕ್ಷಣ ಇಲಾಖೆಯ ನಿರ್ದೇಶಕ ಆರ್. ರಾಮಚಂದ್ರನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ ಬಂದ ಬಳಿಕ ಮಂಡಳಿ ನಿರ್ಧಾರ
ಮದ್ರಸಗಳಲ್ಲಿನ ಸ್ಥಿತಿಗತಿ ಕುರಿತು ಅಧಿಕಾರಿಗಳು ಭೇಟ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಅದಾದ ನಂತರ ಮಂಡಳಿ ಆವಶ್ಯಕತೆ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಚರ್ಚಿಸಲಾಗುತ್ತದೆ. ಆವಶ್ಯಕತೆ ಇದ್ದರೆ ಮಂಡಳಿ ರಚನೆ ಮಾಡಲಾಗುತ್ತದೆ, ಅಗತ್ಯವಿಲ್ಲದಿದ್ದಲ್ಲಿ ಮೂಲಸೌಕರ್ಯ ಕಲ್ಪಿಸಲು ಮತ್ತು ಗುಣಮಟ್ಟದ ಶಿಕ್ಷಣದ ಕಡೆಗೆ ಒತ್ತು ನೀಡಲಾಗುತ್ತದೆ ಎಂದು ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.