ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ನರ್ಸಿಂಗ್ ಹಾಗೂ ಆರೋಗ್ಯ ವಿಜ್ಞಾನಗಳ ಕಾಲೇಜುಗಳಿಗೆ ಮೂಲಸೌಕರ್ಯಗಳಿಲ್ಲದಿದ್ದರೂ ಅನುಮತಿ ನೀಡಿರುವ ಬಗ್ಗೆ ಪರಿಶೀಲಿಸಲು ವಿಶೇಷ ಜಂಟಿ ಸದನ ಸಮಿತಿ ರಚನೆಯನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಜಂಟಿ ಸದನ ಸಮಿತಿ ರಚನೆ ಪ್ರಶ್ನಿಸಿ ಹೈದರಾಬಾದ್ ಕರ್ನಾಟಕ ನರ್ಸಿಂಗ್ ಮ್ಯಾನೇಜ್‌ಮೆಂಟ್ ಸಂಘ ಸಹಿತ ಇನ್ನಿತರ ಸಂಘಗಳು ಸಲ್ಲಿಸಿದ್ದ ತಕಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ| ಎಂ.ಐ ಅರುಣ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಸಮಿತಿಯ ರಚನೆಯನ್ನು ಎತ್ತಿಹಿಡಿದು, ನರ್ಸಿಂಗ್ ಕಾಲೇಜು ಹಾಗೂ ಆರೋಗ್ಯ ವಿಜ್ಞಾನ ಸಂಸ್ಥೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸುವ ಅಧಿಕಾರ ವಿಶೇಷ ಜಂಟಿ ಸದನ ಸಮಿತಿಗೆ ಇದೆ ಎಂದು ಆದೇಶಿಸಿದೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಕರ್ನಾಟಕ ವಿಧಾನಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮ 242 (ಎ) (1) ಪ್ರಕಾರ ವಿಶೇಷ ಜಂಟಿ ಸದನ ಸಮಿತಿ ರಚನೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್, ಭಾರತೀಯ ನರ್ಸಿಂಗ್ ಮಂಡಳಿಯ ನಿರ್ದೇಶನಗಳಿಗೆ ಅನುಗುಣವಾಗಿ ನರ್ಸಿಂಗ್ ಕಾಲೇಜುಗಳು ನಡೆಯುತ್ತಿದೆಯೇ ಇಲ್ಲವೇ ಎಂದು ಹಾಗೂ ಅಗತ್ಯ ಮೂಲಸೌಕರ್ಯ ಮತ್ತಿತರ ಸೌಕರ್ಯಗಳು ಇವೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಲು ಸದನ ಸಮಿತಿಗೆ ಅಧಿಕಾರವಿದೆ. ಕಾಲೇಜುಗಳು ಮತ್ತು ಸಂಸ್ಥೆಗಳು ನಿಯಮ ಬದ್ಧವಾಗಿ ನಡೆಯುತ್ತಿವೆಯೇ ಇಲ್ಲವೇ ಎಂಬ ಬಗ್ಗೆಯೂ ಸಮಿತಿ ದಾಖಲೆಗಳನ್ನು ಪರಿಶೀಲಿಸಬಹುದಾಗಿದೆ ಎಂದು ಹೇಳಿದೆ.
ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್ ಹಾಗೂ ಇತರೆ ಸಂಬಂಧಿತ ಆರೋಗ್ಯ ವಿಜ್ಞಾನಗಳ ಕಾಲೇಜುಗಳಿಗೆ ಮೂಲಸೌಕರ್ಯಗಳಿಲ್ಲದಿದ್ದರೂ ಅನುಮತಿ ನೀಡಿ ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಮಾರ್ಗಸೂಚಿಗಳನ್ನು ಉಲ್ಲಂ ಸಲಾಗಿದೆ ಎಂದು ವಿಧಾನಪರಿಷತ್ತಿನ ಅಧಿವೇಶನದಲ್ಲಿ ಬಿಜೆಪಿ ಸದಸ್ಯ ಎನ್. ರವಿಕುಮಾರ್ 2021ರ ಮಾ.18ರಂದು ವಿಷಯ ಪ್ರಸ್ತಾಪಿಸಿದ್ದರು. ಈ ಬಗ್ಗೆ ಚರ್ಚೆ ನಡೆದ ಬಳಿಕ ಅವರದೇ ನೇತೃತ್ವದಲ್ಲಿ ವಿಧಾನಪರಿಷತ್ ಹಾಗೂ ವಿಧಾನಸಭೆ ಸದಸ್ಯರು ಸೇರಿ ಒಟ್ಟು 15 ಮಂದಿಯ ವಿಶೇಷ ಜಂಟಿ ಸಮಿತಿಯನ್ನು 2021ರ ಏ.16ರಂದು ರಚಿಸಲಾಗಿತ್ತು. ಇದನ್ನು ಅರ್ಜಿದಾರರು ಪ್ರಶ್ನಿಸಿದ್ದರು.