ಆತ ಸಖತ್ ಶೋಕಿವಾಲ. ಕೆಲಸ-ಕಾರ್ಯವಿಲ್ಲದಿದ್ದರೂ ಆತನ ಸ್ಟೈಲ್‌ಗೇನೂ ಕೊರತೆ ಇರುವುದಿಲ್ಲ. ಶೋಕಿ ಮಾಡುತ್ತಾ, ತನ್ನ ಹಾಗೂ ಪಕ್ಕದ ಹಳ್ಳಿಯ ಸುಂದರ ಹೆಣ್ಣುಮಕ್ಕಳಿಗೆ ಕಾಳು ಹಾಕುವುದರಲ್ಲಿ ನಿಸ್ಸೀಮ. ಇಂತಹ ಶೋಕಿವಾಲನಿಗೆ ಎದುರಾಗೋದು ಊರ ಗೌಡನ ಮಗಳು. ಅಲ್ಲಿಂದ ಟ್ವಿಸ್ಟ್-ಟರ್ನ್ ಶುರು.
ಹೆಸರಿಗೆ ತಕ್ಕಂತೆ “ಶೋಕಿವಾಲ’ ಒಂದು ಫ್ಯಾಮಿಲಿ ಡ್ರಾಮಾ. ಇಡೀ ಸಿನಿಮಾವನ್ನು ನಗುವಿನಲೆಯಲ್ಲಿ ಕಟ್ಟಿಕೊಡಬೇಕೆಂಬ ಏಕೈಕ ಉದ್ದೇಶ ನಿರ್ದೇಶಕರದ್ದು. ಅದಕ್ಕೆ ಏನೇನು ಮಾಡಬೇಕು ಎಲ್ಲವನ್ನು ಮಾಡಿದ್ದಾರೆ. ಅದರಲ್ಲಿ ಕೆಲವು ಇಷ್ಟವಾದರೆ, ಇನ್ನೊಂದಿಷ್ಟು ಕಷ್ಟ ಕಷ್ಟ…
ಕೆಲಸ ಕಾರ್ಯವಿಲ್ಲದ ಶೋಕಿ ಹುಡುಗನ ಕಥೆ ಕನ್ನಡಕ್ಕೇನೂ ಹೊಸತಲ್ಲ. ಈಗಾಗಲೇ ಅನೇಕ ಸಿನಿಮಾಗಳು ಬಂದು ಹೋಗಿವೆ. ಆದರೆ, “ಶೋಕಿವಾಲ’ ನಿಮಗೆ ಮಜ ಕೊಟ್ಟರೆ ಅದಕ್ಕೆ ಕಾರಣ ನಿರ್ದೇಶಕರ ನಿರೂಪಣೆ ಹಾಗೂ ಅಲ್ಲಲ್ಲಿ ಸಿಗುವ ನಗೆಬುಗ್ಗೆ. ಈ ಕಥೆಯನ್ನು ಮುಂದುವರೆಸಲು ನಿರ್ದೇಶಕರು ಆಯ್ಕೆ ಮಾಡಿಕೊಂಡಿರೋದು ಹಲವು ಪಾತ್ರಗಳನ್ನು. ಚಿತ್ರದಲ್ಲಿ ತುಂಬಾ ಪಾತ್ರಗಳು ಬರುತ್ತವೆ ಮತ್ತು ಬರುವ ಪಾತ್ರಗಳೆಲ್ಲವೂ ನಾಯಕನ ಕಥೆಯನ್ನು ಮುಂದುವರೆಸಿಕೊಂಡು ಹೋಗುತ್ತವೆ.
ಇದನ್ನೂ ಓದಿ:ಸಚಿನ್ ಪುತ್ರಿ Sara Tendulkar ಬ್ಯೂಟಿಫುಲ್ ಫೋಟೋ ಗ್ಯಾಲರಿ
ಈ ಚಿತ್ರದಲ್ಲಿ ಏನಿದೆ ಎಂದು ಕೇಳಿದರೆ ಒಂದು ರೆಗ್ಯುಲರ್ ಕಮರ್ಷಿಯಲ್ ಸಿನಿಮಾದಲ್ಲಿರಬೇಕಾದ ಎಲ್ಲಾ ಅಂಶಗಳು ಇವೆ. ಹಾಡು, ಫೈಟ್, ಟಪ್ಪಾಂಗುಚ್ಚಿ ಡ್ಯಾನ್ಸ್ ಎಲ್ಲವೂ ಇದೆ. ಇವೆಲ್ಲವೂ ಮಾಸ್ ಪ್ರೇಕ್ಷಕರಿಗೆ ಖುಷಿಕೊಡುತ್ತದೆ. ಬಹುತೇಕ ಎಲ್ಲಾ ಸಿನಿಮಾಗಳಂತೆ ಇಲ್ಲೂ ಚಿತ್ರದ ಮೊದಲರ್ಧ ನಾಯಕನ ಇಂಟ್ರೊಡಕ್ಷನ್, ಆತನ ಗುಣಗಾನ ಸೇರಿದಂತೆ ಇನ್ನಿತರ ಅಂಶಗಳಲ್ಲೇ ಮುಗಿದು ಹೋಗುತ್ತದೆ. ಇನ್ನು, ದ್ವಿತೀಯಾರ್ಧದಲ್ಲಿ ಸಿನಿಮಾದ ಪ್ರಮುಖ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.
ಮೊದಲೇ ಹೇಳಿದಂತೆ ಪ್ರೇಕ್ಷಕರನ್ನು ನಗಿಸುವುದೊಂದೇ ನಿರ್ದೇಶಕರ ಪರಮ ಉದ್ದೇಶವಾಗಿದ್ದರಿಂದ ಅದಕ್ಕೆ ನ್ಯಾಯ ಒದಗಿಸಿದ್ದಾರೆ. ಒಮ್ಮೆ ರಿಲ್ಯಾಕ್ಸ್ ಮಾಡಲು “ಶೋಕಿವಾಲ’ನ ದರ್ಶನ ಮಾಡಲು ಅಡ್ಡಿಯಿಲ್ಲ.
ನಾಯಕ ಅಜೇಯ್ ರಾವ್ ಸಿನಿಮಾದಲ್ಲಿ ಸಖತ್ ಕಲರ್‌ಫುಲ್ ಆಗಿ ಕಾಣಿಸಿಕೊಂಡಿದ್ದಾರೆ ಮತ್ತು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ನಾಯಕಿ ಸಂಜನಾ ಇಲ್ಲಿ ಕ್ಯೂಟ್ ಬೆಡಗಿ. ಉಳಿದಂತೆ ಪ್ರಮೋದ್ ಶೆಟ್ಟಿ, ಅರುಣಾ ಬಾಲರಾಜ್, ಗಿರಿ ಸೇರಿದಂತೆ ಇತರರು ನಟಿಸಿದ್ದಾರೆ.
ರವಿ ರೈ