Advertisement
ಮೂಲ ಸೌಕರ್ಯಕ್ಕೆ ಅತ್ಯುತ್ತಮ ಬಜೆಟ್. ಒಟ್ಟು 600 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ, ಬೆಂಗಳೂರಿನ ಸಬ್ ಅರ್ಬನ್ ರೈಲ್ವೆಗೆ 17 ಸಾವಿರ ಕೋಟಿ ರೂ., ಭಾರತ್ ಮಾಲಾ ಯೋಜನೆಯಡಿ 5.35 ಲಕ್ಷ ಕೋಟಿ ರೂ. ವಿನಿಯೋಗ, ಗ್ರಾಮೀಣ ಭಾಗದ ಪ್ರತಿ ಮನೆಗೆ ವಿದ್ಯುತ್ ಸಂಪರ್ಕಕ್ಕೆ ಹಣ, ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ, ಉಜ್ವಲ ಯೋಜನೆಯಡಿ 8 ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಅಮೃತ ಯೋಜನೆಯಡಿ ನಗರದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕಕ್ಕೆ ಅನುದಾನ, ಗ್ರಾಮೀಣ ಪ್ರದೇಶಗಳಿಗೆ 5 ಲಕ್ಷ ವೈಫೈ- ಹಾಟ್ ಸ್ಪಾಟ್ -ಇವೆಲ್ಲವೂ ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕ.
Related Articles
Advertisement
ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ಆದಾಯ ಕರದ ಮೇಲಿನ ಸೆಸ್ ಅನ್ನು ಶೇ. 3 ರಿಂದ ಶೇ. 4ಕ್ಕೆ ಏರಿಸಲಾಗಿದೆ. ನೌಕರ ವೃಂದಕ್ಕೆ ಕೊಡುಗೆಯಾಗಿ 40 ಸಾವಿರ ರೂ. ವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್‌ನ್ನು ಒದಗಿಸಲಾಗಿದೆ.
ಹಿರಿಯ ನಾಗರಿಕರಿಗೆ ಸಿಗುವ ಬ್ಯಾಂಕಿನ ಬಡ್ಡಿಯ ಮೇಲೆ 50 ಸಾವಿರ ರೂ. ವರೆಗೆ ಟಿಡಿಎಸ್ ಇಲ್ಲ. ಸೆಕ್ಷನ್ 80 ಟಿಟಿಬಿಯ ಪ್ರಕಾರ 50 ಸಾವಿರ ರೂ. ವರೆಗಿನ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಇದೆ.
ಸೆಕ್ಷನ್ 80 ರಡಿ ಮೆಡಿಕ್ಲೇಮ್ ಡಿಡಕ್ಷನನ್ನು 50 ಸಾವಿರ ರೂ. ಗೆ ಏರಿಸಲಾಗಿದೆ. ಹಿರಿಯ ನಾಗರಿಕರ ಬಡ್ಡಿ ಆಧಾರಿತ ಜೀವ ವಿಮಾ ಯೋಜನೆಯಲ್ಲಿ ಹೂಡಿಕೆಯ ಮಿತಿಯನ್ನು 7.50 ಲಕ್ಷ ರೂ. ಗಳಿಂದ 15 ಲಕ್ಷ ರೂ. ಗೆ ಏರಿಸಲಾಗಿದೆ. ಇದು ಹಿರಿಯ ನಾಗರಿಕರಿಗೆ ವರದಾನ.ಈ ಬಾರಿ ದೀರ್ಘಕಾಲದ (1ವರ್ಷದಿಂದ ಮೇಲ್ಪಟ್ಟ) ಶೇರುಗಳು ಹಾಗೂ ಮ್ಯೂಚುವಲ್ ಫಂಡ್‌ನ 1 ಲಕ್ಷ ರೂ. ಕ್ಕಿಂತ ಮೇಲ್ಪಟ್ಟ ಆದಾಯದ ಮೇಲೆ ಶೇ. 10 ತೆರಿಗೆ ವಿಧಿಸಲಾಗಿದೆ. ಇದು ಶೇರು ಹಾಗೂ ಮ್ಯೂಚುವಲ್ ಫಂಡ್ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಎಲೆಕ್ಟ್ರಾನಿಕ್ ಇನ್‌ಕಮ್ ಟ್ಯಾಕ್ಸ್ ಅಸೆಸ್‌ಮೆಂಟನ್ನು ಅಳವಡಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಪಾರದರ್ಶಕತೆ ಹಾಗೂ ಪರಿಣಾಮಕಾರಿ ಆಡಳಿತವನ್ನು ಅಪೇಕ್ಷಿಸಬಹುದು.
ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಲೀಟರಿಗೆ 2 ರೂ. ಇಳಿಸಿರುವುದು ಜನಸಾಮಾನ್ಯರಿಗೆ ನೀಡಿರುವ ಕೊಡುಗೆ. ವಾರ್ಷಿಕ ವಹಿವಾಟು 250 ಕೋಟಿ ರೂ. ಹೊಂದಿರುವ ಕಂಪೆನಿಗಳಿಗೆ ಆದಾಯ ತೆರಿಗೆಯನ್ನು ಶೇ. 25 ಗೆ ಇಳಿಸಲಾಗಿದೆ.
ಶ್ರೀಮಂತರಿಗೆ ಅನನುಕೂಲಕರ ಅಂಶಗಳೂ ಇವೆ. ಕೆಲವು ಸರಕಿನ ಮೇಲೆ ಸೀಮಾ ಶುಲ್ಕವನ್ನು ಏರಿಸಲಾಗಿದೆ. ಬಜೆಟ್‌ನಲ್ಲಿ ಶೇರು ಹಾಗೂ ಮ್ಯೂಚುವಲ್ ಫಂಡ್ಸ್‌ನ ಹೂಡಿಕೆ ಲಾಭದ ಮೇಲೆ ಶೇ. 10 ತೆರಿಗೆ ವಿಧಿಸಲಾಗಿದೆ. ಮೊಬೈಲ್ ಟಿವಿ ಹಾಗೂ ಇನ್ನಿತರ ಕೆಲವು ಉತ್ಪನ್ನಗಳಿಗೆ ಸೀಮಾ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ಆದಾಯ ಕರದ ಮೇಲೆ ಇದ್ದ ಶೇ. 3 ಸೆಸ್ ಅನ್ನು ಶೇ. 4ಗೆ ಏರಿಸಲಾಗಿದೆ.
ಕೃಷಿ ಕ್ಷೇತ್ರವನ್ನೂ ಮರೆತಿಲ್ಲಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅವರ ಉತ್ಪಾದನಾ ವೆಚ್ಚದ ಒಂದೂವರೆಪಟ್ಟು ನಿಗದಿಪಡಿಸಲಾಗಿದೆ. ಕೃಷಿಕರಿಗೆ ನೀಡುವ ಸಾಲದ ಗುರಿ ಏರಿಸಲಾಗಿದೆ. ಹೈನುಗಾರಿಕಾ ಉದ್ಯಮದ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗಿದೆ. ಹತ್ತು ಸಾವಿರ ಕೋಟಿ ರೂ. ಮೀನುಗಾರಿಕಾ ಹಾಗೂ ಅಕ್ವಾಕಲ್ಚರ್ ಉತ್ತೇಜನಕ್ಕಾಗಿ ಇರಿಸಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಮೀನುಗಾರಿಕಾ ಹಾಗೂ ಹೈನುಗಾರಿಕಾ ಉದ್ಯಮಗಳಿಗೆ ವಿಸ್ತರಿಸಿರುವುದು ಸೂಕ್ತ. ಎಸ್. ಎಸ್. ನಾಯಕ್,
ಲೆಕ್ಕಪರಿಶೋಧಕರು, ಮಂಗಳೂರು