Advertisement
ಚಾ.ನಗರ ತಾಲೂಕಿನ ಕೂಡ್ಲೂರು ಗ್ರಾಪಂ ಕಚೇರಿಯಲ್ಲಿ ಕಂದಾಯ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರ್ಹ ಫಲಾನುಭವಿಗಳಿಗೆ ಆರ್ ಟಿಸಿ, ಐಎಲ್‌ಆರ್, ಅಟ್ಲಾಸ್ ಜಾತಿ ಹಾಗೂ ಆದಾಯ ಪ್ರಮಾಣ ಪತ್ರವನ್ನು ಉಚಿತವಾಗಿ ವಿತರಿಸಲಾಯಿತು. ನಂತರ ಎಡೀಸಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ ಮಾತನಾಡಿ, ಕಂದಾಯ ದಾಖಲೆ ಜನರ ಮನೆ ಬಾಗಿಲಿಗೆ ಕಾರ್ಯಕ್ರಮ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಜನಸಾಮಾನ್ಯರು ತಮಗೆ ಅವಶ್ಯವಾಗಿರುವ ದಾಖಲೆಗಳನ್ನು ಪಡೆಯಲು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವುದೇ ಯೋಜನೆಯ ಉದ್ದೇಶವಾಗಿದೆ ಎಂದರು.
Related Articles
Advertisement
ಗ್ರಾಪಂ ಜನಪ್ರತಿನಿಧಿಗಳು ಯೋಜನೆಯ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಬೇಕೆಂದು ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಮನವಿ ಮಾಡಿದರು. ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ ಮಾತನಾಡಿ, ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮವು ರಾಜ್ಯ ಸರ್ಕಾರದ ವಿನೂತನ ಕಾರ್ಯಕ್ರಮವಾಗಿದೆ. ರಾಜ್ಯಾದ್ಯಂತ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತಿದೆ. ತಾಲೂಕಿನಲ್ಲಿ 1.35 ಲಕ್ಷ ರೈತರಿದ್ದು ಈ ಕಾರ್ಯಕ್ರಮ ಅನುಕೂಲವಾಗಲಿದೆ ಎಂದರು.
ಕೂಡ್ಲೂರು ಗ್ರಾಪಂ ಅಧ್ಯಕ್ಷೆ ಯೋಗೇಶ್ವರಿ, ಸದಸ್ಯರಾದ ನಾರಾಯಣಸ್ವಾಮಿ, ಮಹದೇವಸ್ವಾಮಿ, ವಿನೋದಾ, ಬಸಮ್ಮಣ್ಣಿ, ಚಂದ್ರು, ಮಂಜುಳಾ ಕಂದಾಯ ನಿರೀಕ್ಷಕ ಧೂಳಪ್ಪ, ಗ್ರಾಮ ಲೆಕ್ಕಾಧಿಕಾರಿ ರಮೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಂಜಿತಾ ಇತರರು ಇದ್ದರು.
ಗ್ರಾಮಸ್ಥರ ದೂರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸ್ಪಂದನೆ : ಕೂಡ್ಲೂರು ಗ್ರಾಮಕ್ಕೆ ಆಗಮಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ ಅವರಿಗೆ ಗ್ರಾಮಸ್ಥರು ಗ್ರಾಮದಲ್ಲಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದು ಪರಿಹರಿಸಿಕೊಡುವಂತೆ ಮನವಿ ಮಾಡಿಕೊಂಡರು.
ಗ್ರಾಮಸ್ಥರ ದೂರುಗಳನ್ನು ಆಲಿಸಿದ ಕಾತ್ಯಾಯಿನಿದೇವಿ, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಅದಾಲತ್ ಕಾರ್ಯಕ್ರಮ ಆಯೋಜಿಸಬೇಕು. ಜೊತೆಗೆ ಜಮೀನುಗಳಿಗೆ ರಸ್ತೆ ನಿರ್ಮಾಣ ಸಂಬಂಧ ಪರಿಶೀಲಿಸಬೇಕು. ಜೊತೆಗೆ ಸರ್ಕಾರಿ ಜಾಗವಿದ್ದರೆ ಅದನ್ನು ಗುರ್ತಿಸಿ ಸ್ಮಶಾನಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.