Advertisement

Revenue: ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆಗೆ ತಯಾರಿ

03:46 AM Jan 08, 2025 | Team Udayavani |

ಬೆಂಗಳೂರು: ಬಸ್‌ ಪ್ರಯಾಣ ದರ ಹೆಚ್ಚಳದ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್‌ ನೀಡುವುದಕ್ಕೆ ರಾಜ್ಯ ಸರಕಾರ ಸದ್ದಿಲ್ಲದೇ ಸಿದ್ಧತೆ ನಡೆಸಿದ್ದು, ಸ್ಥಿರಾಸ್ತಿಗಳ ನೋಂದಣಿ ಶುಲ್ಕ ಪರಿಷ್ಕರಣೆಗೆ ಮುಂದಾಗಿದೆ.

Advertisement

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಂಗಳವಾರ ಹಿರಿಯ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಬಳಿಕ ಈ ಬಗ್ಗೆ ತಮ್ಮ ಅಧಿಕೃತ “ಎಕ್ಸ್‌ ‘ ಖಾತೆಯಲ್ಲಿ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಬಜೆಟ್‌ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಸಂಪನ್ಮೂಲ ಸಂಗ್ರಹಣ ಇಲಾಖೆ ಜತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದರು. ಈ ಸಂದರ್ಭದಲ್ಲಿ ರಾಜಸ್ವ ತೆರಿಗೆ ಸಂಗ್ರಹಣೆಯಲ್ಲಿ ನಿಗದಿತ ಗುರಿ ತಲುಪದೇ ಇರುವ ಬಗ್ಗೆ ಪ್ರಸ್ತಾವವಾಗಿತ್ತು.

ಇದರ ಬೆನ್ನಲ್ಲೇ ಕಂದಾಯ ಸಚಿವ ಕೃಷ್ಣಬೈರೇಗೌಡ ಮಾರ್ಗಸೂಚಿ ಪರಿಷ್ಕರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಾಮಾನ್ಯವಾಗಿ ಬಜೆಟ್‌ನಲ್ಲಿ ಇಂಥ ಪರಿಷ್ಕರಣೆ ಬಗ್ಗೆ ಪ್ರಸ್ತಾವಿಸಲಾಗುತ್ತದೆ. ಆದರೆ ಕಂದಾಯ ಇಲಾಖೆ ಮೂಲಗಳ ಪ್ರಕಾರ ಮುಂದಿನ ತಿಂಗಳಿಂದಲೇ ಪರಿಷ್ಕೃತ ಮಾರ್ಗಸೂಚಿ ದರ ಜಾರಿಗೆ ಬರಲಿದೆ.

4 ತಾಲೂಕುಗಳಲ್ಲಿ ಪ್ರಯೋಗ
ಪ್ರಸ್ತುತ ಒಂದೊಂದು ಗ್ರಾಮದಲ್ಲಿ ಒಂದೊಂದು ರೀತಿಯ ದರ ಇದ್ದು, ಇದನ್ನು ವೈಜ್ಞಾನಿಕವಾಗಿ ನಿರ್ಧರಿಸಲು ಜಿಐಎಸ್‌ ತಂತ್ರಾಂಶ ನೆರವಾಗಲಿದೆ. ಜನವರಿ ಮಾಸಾಂತ್ಯದೊಳಗೆ ನೆಲಮಂಗಲ, ಹೊಸದುರ್ಗ, ಯಳಂದೂರು ಹಾಗೂ ಶಹಾಪುರ ತಾಲೂಕುಗಳಲ್ಲಿ ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.

ಆಸ್ತಿ ನೋಂದಣಿ, ತೆರಿಗೆ, ಪರಿಹಾರದಲ್ಲೂ ವ್ಯತ್ಯಯ
ಮಾರ್ಗಸೂಚಿ ದರ ಪರಿಷ್ಕರಣೆಯಿಂದಾಗಿ ಭವಿಷ್ಯದಲ್ಲಿ ಆಸ್ತಿಗಳ ನೋಂದಣಿ ದರವೂ ಸಹಜವಾಗಿ ಪರಿಷ್ಕರಣೆಗೊಳ್ಳಲಿದ್ದು, ಅದರ ಆಧಾರದ ಮೇಲೆ ಆಸ್ತಿ ತೆರಿಗೆ ಕೂಡ ಪರಿಷ್ಕೃತವಾಗಲಿದೆ. ಎಲ್ಲಕ್ಕಿಂತ ಮಿಗಿಲಾಗಿ ಸರಕಾರದ ಯೋಜನೆಗಳಿಗೆ ಸರಕಾರ ಭೂಸ್ವಾಧೀನ ಮಾಡಿಕೊಳ್ಳುವಾಗ ಸ್ವತ್ತಿನ ಮಾಲಕರು ಹೆಚ್ಚು ಪರಿಹಾರ ಕೇಳುವ ಪರಿಪಾಠಕ್ಕೂ ಕಡಿವಾಣ ಬೀಳಲಿದೆ. ಸ್ವಾಧೀನಪಡಿಸಿಕೊಂಡ ಭೂಮಾಲಕರಿಗೂ ವೈಜ್ಞಾನಿಕ ಪರಿಹಾರ ನಿಗದಿಪಡಿಸಬಹುದು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next