ಬೆಂಗಳೂರು: ಲಾಕ್‌ಡೌನ್ ತೆರವಾಗಿ ಸುಮಾರು ಆರು ತಿಂಗಳು ಕಳೆದಿವೆ. ಆದರೆ, ಬಿಎಂಟಿಸಿಯ ವೋಲ್ವೊ ಬಸ್‌ಗಳು ಮಾತ್ರ ಇನ್ನೂ ಟೇಕ್‌ಆಫ್ ಆಗಿಲ್ಲ. ಇದು ಸಂಸ್ಥೆಯ ನಿದ್ದೆಗೆಡಿಸಿದ್ದು, ಪರ್ಯಾಯ ಆದಾಯ ಮೂಲಗಳತ್ತ ಹುಡುಕಾಟ ನಡೆಸಿದೆ. ವೋಲ್ವೊ ಬಸ್‌ಗಳ ಬಹುತೇಕ ಕಾರ್ಯಾಚರಣೆ ನಗರದ ಐಟಿ ಹಬ್‌ಗ ಆಗುತ್ತಿತ್ತು. ಆದರೆ, ಶೇ.90ರಷ್ಟು ಐಟಿ ಕಂಪನಿಗಳು ಈಗಲೂ ವರ್ಕ್‌ಫ್ರಂ ಹೋಂ (ಮನೆಯಿಂದಲೇ ಕೆಲಸ) ಪದ್ಧತಿ ಅನುಸರಿಸುತ್ತಿವೆ.
ಭವಿಷ್ಯದಲ್ಲಿ ಈ ವ್ಯವಸ್ಥೆ ಮುಂದುವರಿಸುವ ಲಕ್ಷಣಗಳೂ ಕಂಡುಬರುತ್ತಿವೆ. ಆದರೆ, ಇದರ ತಕ್ಷಣದ ನೇರ ಪರಿಣಾಮ ಈ ಕ್ಷೇತ್ರವನ್ನೇ ಅವಲಂಬಿಸಿದ್ದ ವೋಲ್ವೊ ಬಸ್‌ಗಳ ಮೇಲೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಬಿಎಂಟಿಸಿ ಪರ್ಯಾಯ ಕ್ಷೇತ್ರಗಳ ಹುಡುಕಾಟದಲ್ಲಿ ತೊಡಗಿದೆ.
ಪ್ರವಾಸೋದ್ಯಮ, ಹಾಸ್ಪಿಟ್ಯಾಲಿಟಿ (ಹೋಟೆಲ್, ಲಾಡ್ಜಿಂಗ್ ಇತ್ಯಾದಿ), ಕೈಗಾರಿಕೆ, ಹೈಟೆಕ್ ಶಾಲಾ-ಕಾಲೇಜುಗಳು ಸೇರಿದಂತೆ ಮತ್ತಿತರ ಕ್ಷೇತ್ರಗಳಲ್ಲಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಿದೆ. ಇದು ಸಾಧ್ಯವಾದರೆ, ಕೈಗೆಟಕುವ ದರದಲ್ಲಿ ವೋಲ್ವೊ ಬಸ್‌ಗಳ ಸೇವೆ ದೊರೆಯುತ್ತದೆ. ಬಿಎಂಟಿಸಿಗೆ ಹೊಸ ಪ್ರಯಾಣಿಕರ ವರ್ಗ ಸೃಷ್ಟಿಯಾಗುವುದರ ಜತೆಗೆ ಮತ್ತೂಂದು ಆದಾಯದ ಮೂಲ ತೆರೆದುಕೊಳ್ಳುತ್ತದೆ. ಮಾರ್ಚ್ ನಂತರದಲ್ಲಿ ಹಂತ-ಹಂತವಾಗಿ ಈ ನಿಟ್ಟಿನಲ್ಲಿ ಪ್ರಯೋಗ ನಡೆಯಲಿದೆ ಎಂದು ಬಿಎಂಟಿಸಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
“ಕೋವಿಡ್-19ರಿಂದ ಹವಾನಿಯಂತ್ರಿತ ಬಸ್ ಗಳಿಗೆ ಬೇಡಿಕೆ ಕಡಿಮೆ ಆಗಿದೆ. ಇದಕ್ಕೆ ಬಿಎಂಟಿಸಿ ವೋಲ್ವೊ ಬಸ್‌ಗಳು ಕೂಡ ಹೊರತಾಗಿಲ್ಲ. ಈ ಮಧ್ಯೆ ಐಟಿ ಕ್ಷೇತ್ರದಲ್ಲಿ ಈಗಲೂ ಮನೆಯಿಂದಲೇ ಕೆಲಸ ಮಾಡುವ ವ್ಯವಸ್ಥೆ ಮುಂದುವರಿದಿದೆ. ಹಾಗಂತ, ಅಲ್ಲಿ ಹಿಂದಿನ ವ್ಯವಸ್ಥೆ ಬರುವವರೆಗೆ ಕಾದುಕುಳಿತರೆ ನಿತ್ಯ ಲಕ್ಷಾಂತರ ರೂ. ನಷ್ಟವಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ, ಕೈಗಾರಿಕೆ, ಹೈಟೆಕ್ ಶಾಲಾ-ಕಾಲೇಜಿನಂತಹ ಕಡೆ ಪರಿಚಯಿಸಲು ಸಾಧ್ಯವಿದೆಯೇ ಎಂಬುದರ ಸಮೀಕ್ಷೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಪ್ರಯೋಗಗಳೂ ಆಗಲಿವೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಮಾಹಿತಿ ನೀಡಿದರು.
ಬಿಎಂಟಿಸಿಯಲ್ಲಿ 770-780 ವೋಲ್ವೊ ಸೇರಿ 6,100 ಬಸ್‌ಗಳಿದ್ದು, ಇವುಗಳಿಂದ ಕೋವಿಡ್ ಪೂರ್ವದಲ್ಲಿ ನಿತ್ಯ 3.50ರಿಂದ 4 ಕೋಟಿ ರೂ. ಆದಾಯ ಬರುತ್ತಿತ್ತು. ಈಗ 5,200-5,300 ಬಸ್‌ಗಳು ಕಾರ್ಯಾಚರಣೆ ಮಾಡುತ್ತಿದ್ದು, 2.5ರಿಂದ 3 ಕೋಟಿ ರೂ. ಆದಾಯ ಬರುತ್ತಿದೆ. ಇದರಲ್ಲಿ ಬಹುತೇಕ ಆದಾಯ ಸಾಮಾನ್ಯ ಬಸ್‌ಗಳದ್ದಾಗಿದೆ. ಇನ್ನು 160-180 ವೋಲ್ವೊ ಬಸ್‌ಗಳು ಮಾತ್ರ ಸದ್ಯ ಸಂಚರಿಸುತ್ತಿದ್ದು, 17 ಲಕ್ಷ ರೂ. ಆದಾಯ ಹರಿದುಬರುತ್ತಿದೆ. ಅಂದರೆ ಶೇ. 20ರಷ್ಟು ಬಸ್‌ಗಳು ಸಂಚರಿಸುತ್ತಿದ್ದು, ಶೇ. 20ರಷ್ಟು ಆದಾಯ ಬರುತ್ತಿದೆ. ಮೊದಲು ಈ ಬಸ್‌ಗಳಿಂದ 90 ಲಕ್ಷ ರೂ. ಬರುತ್ತಿತ್ತು ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಐಟಿ ಕಂಪನಿಗಳ ಲೆಕ್ಕಾಚಾರ :
ಐಟಿ ಕಂಪನಿಗಳಲ್ಲಿ ಕಡಿಮೆ ನಿರ್ವಹಣೆ, ಸಂಚಾರ ಸಮಯ ಉಳಿತಾಯ, ಮಹಿಳಾ ಉದ್ಯೋಗಿಗಳಿಗೆ ಪೂರಕ ವಾತಾವರಣ, ಹೆಚ್ಚು ಪರಿಣಾಮಕಾರಿ ಕೆಲಸ ಪಡೆಯಲು ಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ನಂತರವೂ ವರ್ಕ್ ಫ್ರಂ ಹೋಮ್ ವ್ಯವಸ್ಥೆ ಅನುಸರಿಸುತ್ತಿವೆ. ಭವಿಷ್ಯದಲ್ಲೂ ಇದನ್ನು
ಮುಂದುವರಿಸುವ ಚಿಂತನೆ ನಡೆಸಿವೆ. ಒಂದು ವೇಳೆ ಪುನಾರಂಭಗೊಂಡರೂ ಕನಿಷ್ಠ ಸಿಬ್ಬಂದಿಯನ್ನು ಕಚೇರಿಗಳಿಗೆ ಕರೆಸುವ ಆಲೋಚನೆ ಇದೆ ಎಂದು ಐಟಿ ಉದ್ಯೋಗಿಗಳು ತಿಳಿಸುತ್ತಾರೆ. 780 ಬಿಎಂಟಿಸಿ ವೋಲ್ವೊ ಬಸ್‌ಗಳಲ್ಲಿ 220 ಬಸ್‌ಗಳು ಐಟಿ ಕಾರಿಡಾರ್‌ಗೆ ನಿಯೋಜಿಸಲಾಗಿದೆ. ಉಳಿದಂತೆ ನಗರದ ನಾನಾ ಭಾಗಗಳಿಂದ ಐಟಿ ಎಲೆಕ್ಟ್ರಾನಿಕ್ ಸಿಟಿ, ವೈಟ್ ಫೀಲ್ಡ್ ಸೇರಿದಂತೆ ವಿವಿಧೆಡೆ ಸಂಚರಿಸುತ್ತಿದ್ದವು. ಪ್ರಸ್ತುತ ಸುಮಾರು 100 ಬಸ್‌ಗಳು ರಸ್ತೆಗಿಳಿದಿದ್ದು, ಈ ಪೈಕಿ ಬಹುತೇಕ ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಾರ್ಯಾಚರಣೆ ಮಾಡುತ್ತಿವೆ.
- 5,300 ಬಿಎಂಟಿಸಿ ಬಸ್‌ಗಳು ಪ್ರಸ್ತುತ : ಕಾರ್ಯಾಚರಣೆ
- 3 ಕೋಟಿ ರೂ. ನಿತ್ಯದ ಆದಾಯ
- 6,100 ಬಸ್‌ಗಳು ಕೋವಿಡ್ ಪೂರ್ವದಲ್ಲಿದ್ದದ್ದು
- 4 ಕೋಟಿ ರೂ. ಈ ಮೊದಲು ನಿತ್ಯ ಬರುತ್ತಿದ್ದ ಆದಾಯ
- 180 ವೋಲ್ವೊ ಬಸ್‌ಗಳು ಪ್ರಸ್ತುತ ಸಂಚಾರ
- 17 ಲಕ್ಷ ವೋಲ್ವೊ ಬಸ್‌ಗಳ ನಿತ್ಯದ ಆದಾಯ
- 780 ಕೋವಿಡ್ ಪೂರ್ವ ಸಂಚರಿಸುತ್ತಿದ್ದ ವೋಲ್ವೊ ಬಸ್‌ಗಳು
- 90 ಲಕ್ಷ ರೂ. ದಿನದ ಆದಾಯ ಬರುತ್ತಿತು
-ವಿಜಯಕುಮಾರ ಚಂದರಗಿ