ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಗೌಳಿ ಸಿದ್ದಿ ಇನ್ನಿತರ ಹಿಂದುಳಿದ ಸಮುದಾಯದ ಬಗ್ಗೆ ಅರಿತುಕೊಂಡಿದ್ದೇನೆ. ನಮ್ಮ ಕಲ್ಪನೆಯ ಗ್ರಾಮವಾಸ್ತವ್ಯ ಸಮಾಜದ ಕಟ್ಟಕಡೆಯ ಜನರ ಹತ್ತಿರ ಹೋಗಿ ಸಮಸ್ಯೆಗಳನ್ನು ಆಲಿಸಿ ಸಾಮಾಜಿಕ ನ್ಯಾಯ ಕೊಡುವ ಸಲುವಾಗಿ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು.
ಅವರು ಶನಿವಾರ ತಾಲೂಕಿನ ಕಿರವತ್ತಿಯ ಹೊಸಳ್ಳಿಯಲ್ಲಿ ಕಂದಾಯ ಸಚಿವರ ಗ್ರಾಮ ಭೇಟಿ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾಧ್ಯಮದೊಂದಿಗೆ ಮಾತನಾಡಿದರು.
ಅಧಿಕಾರಿಗಳು ಕೇವಲ ಕಾನೂನಿನಂತೆ ಎಲ್ಲಾ ಆಗಬೇಕೆಂದು ಬಯಸುತ್ತಾರೆ. ಕಾನೂನು ತಿದ್ದುಪಡಿ ಮಾಡಿ ಸರಳೀಕರಣ ಆಗದ ಹೊರತು, ಸಾಮಾನ್ಯರಿಗೆ ನ್ಯಾಯ ಸಿಗುವುದಿಲ್ಲ. ರಾಜ್ಯದಲ್ಲಿ 250 ಕಡೆ ಅಧಿಕಾರಿಗಳು ಗ್ರಾಮದೆಡೆಗೆ ತೆರಳಿ ಜನರ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಮನೆ ಬಾಗಿಲಿಗೆ ಪಿಂಚಣಿ ಕೊಡುವ ವ್ಯವಸ್ಥೆ ಮಾಡಿದ್ದು,ಇದಕ್ಕೂ ಒಂದು ಹೆಜ್ಜೆ ಮುಂದೆಹೋಗಿ, ದೂರವಾಣಿ ಉಚಿತ ಕರೆ ಮಾಡಿದ 72 ಗಂಟೆಯಲ್ಲಿ ಪಿಂಚಣಿ ದೊರಕಿಸಿ ಕೊಡುವಂತೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 15 ಲಕ್ಷ ಎಕರೆ ಡಿಮ್ಡ್ ಪಾರೆಸ್ಟ್ ಮಾಡಿ ಜನರಿಗೆ ನೀಡಲಾಗುತ್ತಿದೆ. ಸಿದ್ದಿ. ಗೌಳಿ ಸಮುದಾಯದವರು ಸಮಾಜದ ಮುಖ್ಯವಾಹಿನಿಗೆ ಬರುವಂತಾಗಬೇಕು. ಅರಣ್ಯ ಅತಿಕ್ರಮಣ ಭೂಮಿ ಸಕ್ರಮಕ್ಕೆ ಇರುವ ಕಾನೂನು ಸರಳೀಕರಣಗೊಳಿಸಿ ಸಾಮಾಜಿಕ ನ್ಯಾಯ ಕೊಡಲು ಬದ್ದ ಇರುವುದಾಗಿ ಹೇಳಿದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಕಾನೂನು ತಿದ್ದುಪಡಿ ಮಾಡಿ ಸಾಮಾಜಿಕ ನ್ಯಾಯ ಕೊಡಲು ಸರಕಾರ ಅಶೋಕ ನೇತೃತ್ವದಲ್ಲಿಮುಂದಾಗಿದೆ ಎಂದರು.
ಶಾಸಕಿ ರೂಪಾಲಿ ನಾಯ್ಕ,ಎಂಎಲ್ಸಿ ಶಾಂತಾರಾಮ ಸಿದ್ದಿ,ಪ್ರಮೋದ ಹೆಗ್ಡೆ,ಜಿಲ್ಲಾಧಿಕಾರಿ ಮುಲ್ಲೈಮುಗಿಲನ್,ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ್ ,ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್ ಹಾಗೂ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗವಹಿಸಿದ್ದರು.