ಯಾದಗಿರಿ: ಜಿಲ್ಲೆಯಲ್ಲಿ ಸಾಕಷ್ಟು ಜಮೀನು ಇದ್ದರೂ ಸ್ಮಶಾನಗಳಿಗೆ ಏಕೆ ಕೊರತೆ ಎಂದು ಕಂದಾಯ ಸಚಿವ ಆರ್.ಅಶೋಕ ಅಧಿಕಾರಿಗಳನ್ನು ಪ್ರಶ್ನಿಸಿ ಪ್ರತಿಯೊಂದು ಗ್ರಾಮದಲ್ಲಿಯೂ ಸಾರ್ವಜನಿಕ ರುದ್ರಭೂಮಿಗಳಿಗೆ 1 ಎಕರೆ ಜಮೀನು ಮೀಸಲಿರಿಸಲು ನಿರ್ದೇಶಿಸಿದರು. ಇಲ್ಲಿನ ಜಿಪಂ ಕಾರ್ಯಾಲಯದಲ್ಲಿ ಮಳೆ ಹಾನಿ ಪರಿಹಾರ ಕಾರ್ಯ ಸಂಬಂಧ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಯಾವುದೇ ಜಾತಿ,
ಧರ್ಮದ ಹೆಸರಿಗೆ ಸೀಮಿತವಾಗಿಡದೇ ಸಾರ್ವಜನಿಕ ಸ್ಮಶಾನಗಳಿಗೆ ಜಮೀನು ಗುರುತಿಸುವಂತೆ ನಿರ್ದೇಶಿಸಿದ ಸಚಿವರು, ಯಾವುದೇ ಕಾರಣಕ್ಕೆ ನದಿ ಪಾತ್ರಗಳಲ್ಲಿ ಶವ ಸಂಸ್ಕಾರ ಮಾಡದಂತೆ ಕ್ರಮ ವಹಿಸಲು ಸೂಚಿಸಿದರು. ಕೋವಿಡ್ ಮಧ್ಯೆಯೇ ಅಭಿವೃದ್ಧಿ ಸಾಧಿಸಬೇಕಿದೆ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಸಚಿವರು, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರ ಕಾರ್ಯಕ್ಕೆ ಅಭಿನಂದಿಸಿದರು.
ಪ್ರವಾಹದಿಂದ ಹಾನಿಗೀಡಾದವರಿಗೆ ಪರಿಹಾರ ಮೊತ್ತ ಪಾವತಿಸಬೇಕು. ಹಾನಿಯಾದ ಮನೆಗಳ ಗುರುತಿಸುವಿಕೆಯಲ್ಲಿ ಬಡವ, ಶ್ರೀಮಂತನೆಂಬ ಬೇಧವಿರಬಾರದು. ಮುಂದಿನ ತಿಂಗಳು ನಡೆಯುವ ಅಧಿವೇಶನದೊಳಗೆ ಪ್ರವಾಹದಿಂದ ಹಾನಿಗೀಡಾದ ಮನೆಗಳಲ್ಲಿ ಎಷ್ಟು ಮನೆ ನಿರ್ಮಿಸಲಾಗಿದೆ. ಬಾಕಿ ಉಳಿದ ಮನೆಗಳೆಷ್ಟು ಎಂಬ ವಿವರವನ್ನು ಸಲ್ಲಿಸಬೇಕು ಎಂದು ಸೂಚಿಸಿದ ಅವರು, ಇನ್ನೂ ಕೂಡ ಮಳೆ ಬರುವ ಸಾಧ್ಯತೆ ಇರುತ್ತದೆ. ಒಂದು ವೇಳೆ ಪ್ರವಾಹ ಉಂಟಾಗಿ ವಿವಿಧ ರೀತಿಯ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಇಲಾಖೆಗೆ ಆಪಾದನೆ ಬಾರದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು. ಜಿಲ್ಲೆಯ ತಾಲೂಕುವಾರು ಗ್ರಾಮಗಳಲ್ಲಿ ಸಾರ್ವಜನಿಕರ ಸ್ಮಶಾನಗಳ ಕುರಿತು ವಿವರಣೆ ಪಡೆದರು. ಯಾದಗಿರಿ ತಾಲೂಕಿನಲ್ಲಿ ಗ್ರಾಮಗಳಲ್ಲಿ 20 ಕಡೆ, ಶಹಾಪುರ ಮತ್ತು ವಡಗೇರಾ ವ್ಯಾಪ್ತಿಯಲ್ಲಿ 10 ಕಡೆ ಹಾಗೂ ಸುರಪುರದಲ್ಲಿ 11 ಕಡೆ ಸ್ಮಶಾನಗಳಲ್ಲಿ ದರ ಕುರಿತು ತಹಶೀಲ್ದಾರರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಅಂದಾಜು 27 ಸಾವಿರ ಎಕರೆಯಷ್ಟು ಸರ್ಕಾರಿ ಜಮೀನು ಇರುವ ಕುರಿತು ಜಿಲ್ಲಾಧಿಕಾರಿ ಕೂರ್ಮಾರಾವ ಮಾಹಿತಿ ನೀಡಿದರು. ಸರ್ಕಾರಿ ಜಮೀನುಗಳು ದೂರ ಇರುವುದರಿಂದ ಸಾರ್ವಜನಿಕರು ತಮಗೆ ಹತ್ತಿರ ಸ್ಥಳವನ್ನು ಬೇಡಿಕೆಯಿಡುತ್ತಾರೆ ಎಂದು ವಿವರಿಸಿದರು.
ಮಳೆ ಅವಾಂತರದಿಂದ ಜಿಲ್ಲೆಯಲ್ಲಿ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ಕೆಲ ಬ್ರಿಡ್ಜ್ಗಳಿಗೂ ಧಕ್ಕೆಯಾಗಿದೆ. ಆಲಿಕಲ್ಲು ಮಳೆಯಿಂದ ಭತ್ತ, ಹತ್ತಿ ಹಾನಿಯಾಗಿದ್ದು 16 ಸಾವಿರ ಹೆಕ್ಟೇರ್ ಅಂದಾಜಿಸಲಾಗಿದೆ. ಜಿಲ್ಲೆಯಲ್ಲಿ ಹೆಸರು ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ಮಳೆಯಾಗಿರುವುದು ಹೆಸರು ಬೆಳೆ ಹಾನಿಯಾಗಿದ್ದು, ಸೂಕ್ತ ಪರಿಹಾರಕ್ಕೆ ರೈತರ ಬೇಡಿಕೆಯಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.
ಆಲಿಕಲ್ಲು ಮಳೆಯಿಂದಾಗಿ ಬೆಳೆಹಾನಿಯಾದ 1450 ರೈತರಿಗೆ 1.51 ಕೋಟಿ ಪರಿಹಾರ ನೀಡಲಾಗಿದ್ದು, 313 ಮನೆಗಳಿಗೆ ಹಾನಿ ಸಂಭವಿಸಿದ್ದು 307 ಮನೆಗಳಿಗೆ ಸಿ ದರ್ಜೆಯ ಹಾನಿಯಾಗಿದೆ. ಅಲ್ಲದೇ 4 ಶಾಲೆ ಹಾಗೂ 6 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಹಾನಿಯಾಗಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ರಾಜುಗೌಡ, ಈಶಾನ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜಕುಮಾರ ಪಾಟೀಲ್ ತೆಲಕರ್, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ದತ್ತಾತ್ರೆಯ ಪಾಟೀಲ್ ಸಿ.ರೇವೂರ, ಜಿಪಂ ಅಧ್ಯಕ್ಷ ಬಸವನಗೌಡ ಪಾಟೀಲ್ ಯಡಿಯಾಪುರ, ಪ್ರಾದೇಶಿಕ ಆಯುಕ್ತ ಮಂಜುನಾಥ ಪ್ರಸಾದ, ಎಸ್‌ಪಿ ಋಷಿಕೇಶ್ ಸೋನಾವಣೆ, ಜಿಪಂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ, ಪ್ರಭಾರಿ ಎಡಿಸಿ ಶಂಕರಗೌಡ ಎಸ್.ಸೋಮನಾಳ ಸೇರಿದಂತೆ ಅಧಿಕಾರಿಗಳು ಇದ್ದರು.