ಬೆಂಗಳೂರು: ಬಿಬಿಎಂಪಿಯ ರೆವಿನ್ಯೂ ಇನ್‌ಸ್ಪೆಕ್ಟರ್(ಆರ್‌ಐ) ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ಕಂಪ್ಯೂಟರ್ ಮಾರಾಟ ಮಳಿಗೆ ಮಾಲೀಕರೊಬ್ಬರಿಗೆ ಲಕ್ಷಾಂತರ ರೂ. ಪಡೆದು ವಂಚಿಸಿದ್ದಾನೆ.
ಈ ಸಂಬಂಧ ವಂಚನೆಗೊಳಗಾದ ರಾಜಾಜಿನಗರ ನಿವಾಸಿ ಸುರೇಶ್ ಎಂಬುವರು ಧನಂಜಯ ಎಂಬಾತನ ವಿರುದ್ಧ ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಜಾಜಿನಗರದ 2ನೇ ಹಂತದ 2ನೇ ಬ್ಲಾಕ್‌ನ ಎಂಕೆಕೆ ರಸ್ತೆಯಲ್ಲಿ ಸುರೇಶ್ ಕಂಪ್ಯೂಟರ್ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಇದೇ ಅಂಗಡಿಯಲ್ಲಿ ಎಂಜಿನಿಯರ್ ಆಗಿರುವ ರಾಮು ಎಂಬುವರ ಮೂಲಕ ಆರೋಪಿ ಧನಂಜಯ ಪರಿಚಯವಾಗಿದ್ದಾನೆ. ಆಗ ತಾನೂ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರ್ ಆಗಿದ್ದೇನೆ. ಜತೆಗೆ ಸರ್ಕಾರದ ವಿವಿಧ ಆಶ್ರಯ ಯೋಜನೆಯಡಿ ತನಗೆ ಗೊತ್ತಿರುವ ಅಧಿಕಾರಿಗಳಿದ್ದು, ಕಡಿಮೆ ಮೊತ್ತಕ್ಕೆ ನಿವೇಶನ ಕೊಡಿಸುತ್ತೇನೆ ಎಂದು ಹೇಳಿದ್ದ. ಅಲ್ಲದೆ, ಕೆಂಗೇರಿ ಬಳಿಯ ಕೊಮ್ಮಘಟ್ಟ ಸಮೀಪದಲ್ಲಿ ಸರ್ಕಾರಿ ಯೋಜನೆ- ಅಂಬೇಡ್ಕರ್ ಅಭಿವೃದ್ಧಿ ನಿಗಮ ಯೋಜನೆ ಅಡಿಯಲ್ಲಿ 50ರಿಂದ 55 ಸಾವಿರ ರೂ.ಗೆ ಖಾಲಿ ನಿವೇಶನ ಕೊಡಲು ಬಿಬಿಎಂಪಿ ನಿರ್ಧರಿಸಿದ್ದು, ನಿಮಗೆ ನಿವೇಶನ ಕೊಡಿಸುತ್ತೇನೆ ಎಂದು ಧನಂಜಯ ನಂಬಿಸಿದ್ದ. ಈತನ ಮಾತು ನಂಬಿದ ಸುರೇಶ್, ತನಗೆ 5 ಹಾಗೂ ತನ್ನೊಂದಿಗೆ ಕೆಲಸ ಮಾಡುವ ಇತರಿಗೆ ಸೇರಿ ಒಟ್ಟು 9 ನಿವೇಶ ಖರೀ ದಿಸುತ್ತೇವೆ ಎಂದಿದ್ದರು. ಜತೆಗೆ ನಿವೇಶನ ಮೌಲ್ಯ ಮತ್ತು ಇತರೆ ಖರ್ಚು ಸೇರಿ 4.18 ಲಕ ರೂ. ಅನ್ನು ಆರೋಪಿಗೆ ಫೋನ್ ಪೇ ಮೂಲಕ ಕಳುಹಿಸಿದ್ದರು. ಹಣ ಪಡೆದ ಆರೋಪಿ, ಬಳಿಕ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಅನುಮಾನಗೊಂಡು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪರಿಶೀಲಿಸಿದಾಗ ಆರೋಪಿ ಸುಳ್ಳು ಹೇಳಿದ್ದಾನೆ ಎಂಬುದು ಗೊತ್ತಾಗಿದೆ.
ಹೀಗಾಗಿ ಕಡಿಮೆ ಮೊತ್ತಕ್ಕೆ ನಿವೇಶನ ಕೊಡಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿದ ಆರೋಪಿ ಧನಂಜಯ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸುರೇಶ್ ದೂರಿನಲ್ಲಿ ಉಲ್ಲೇಖೀಸಿದ್ದಾರೆ. ಆರೋಪಿ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ರಾಜಾಜಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.