Advertisement

ಕಾಗೋಡು ತವರಲ್ಲೇ ಕಂದಾಯ ಇಲಾಖೆ ಹುದ್ದೆಗಳು ಖಾಲಿ!

01:58 PM Jul 24, 2017 | |

ಶಿವಮೊಗ್ಗ: ರಾಜ್ಯದಲ್ಲಿ ಕಂದಾಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಭಾರೀ ಪ್ರಮಾಣದ ಹುದ್ದೆಗಳು ಖಾಲಿ ಇದ್ದು, ಮುಖ್ಯವಾಗಿ ಕಂದಾಯ ಸಚಿವರ ತವರಿನಲ್ಲೇ ಕಂದಾಯ ಇಲಾಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ! ಸರ್ಕಾರದ ಸರ್ವ ಇಲಾಖೆಗೂ ಮಾತೃ
ಇಲಾಖೆಯಾಗಿರುವ ಜಿಲ್ಲಾ ಕಂದಾಯ ಇಲಾಖೆಯಲ್ಲಿ ನೂರಾರು ಹುದ್ದೆಗಳು ಖಾಲಿ ಇರುವುದರಿಂದ ಯಾವುದೇ ಕೆಲಸಗಳು ಸಕಾಲದಲ್ಲಿ ಆಗುತ್ತಿಲ್ಲ. ಈ ಹುದ್ದೆಗಳನ್ನು ಭರ್ತಿ ಮಾಡಲು ಕೂಡ ಸರ್ಕಾರದಿಂದ ಆಗುತ್ತಿಲ್ಲ.

Advertisement

ವಯೋಸಹಜ ನಿವೃತ್ತಿ ಹಾಗೂ ಬಡ್ತಿಯಿಂದ ತೆರವಾಗುವ ಹುದ್ದೆಗಳನ್ನು ಸರ್ಕಾರ ನಿಗದಿತ ಸಮಯದೊಳಗೆ ಭರ್ತಿ ಮಾಡದ ಕಾರಣ ಕಂದಾಯ ಇಲಾಖೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹುದ್ದೆಗಳು ಬಾಕಿ ಉಳಿದುಕೊಳ್ಳುತ್ತಾ ಬಂದಿದೆ. ನೇಮಕ ಹಾಗೂ ನಿವೃತ್ತಿ ವೇಗ ತಾಳೆಯಾಗದ ಕಾರಣ
ಇವುಗಳ ನಡುವಿನ ಅಂತರ ಹೆಚ್ಚುತ್ತಲೇ ಇವೆ.

ಹೆಚ್ಚಿದ ಒತ್ತಡ: ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿಗಳ ಮಂಜೂರಾತಿ, ಸಕಾಲ ಯೋಜನೆಯಡಿ ಅರ್ಜಿಗಳ ವಿಲೇವಾರಿ, ಅತಿವೃಷ್ಟಿ, ಅನಾವೃಷ್ಟಿ ಸಮೀಕ್ಷೆ, ಬಗರ್‌ ಹುಕುಂ ಅರ್ಜಿ, ಅರಣ್ಯ ಹಕ್ಕು ಸಮಿತಿ, ಬೆಳೆ ನಷ್ಟ ಪರಿಹಾರ ವಿತರಣೆ, ಪಡಿತರ ಸೇರಿದಂತೆ ಹತ್ತಾರು ಕೆಲಸದ ಒತ್ತಡದ ನಡುವೆ ಕಂದಾಯ ಇಲಾಖೆ ನೌಕರರು ಕೆಲಸ ಮಾಡುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿಗಳಿಲ್ಲದೇ ಇರುವುದರಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ.

ಕಂದಾಯ ಇಲಾಖೆ ಸಚಿವ ಕಾಗೋಡು ತಿಮ್ಮಪ್ಪ ಅವರು ಬಗರ್‌ಹುಕುಂ, ಅರಣ್ಯ ಹಕ್ಕು ಸಮಿತಿ ಸೇರಿದಂತೆ ತಮ್ಮ ಇಲಾಖೆಗೆ ಸೇರಿದ ಅನೇಕ ಕಾರ್ಯಕ್ರಮ ಮತ್ತು ಯೋಜನೆಯ ಪ್ರಗತಿಯನ್ನು ಆಗಾಗ ಪರಿಶೀಲಿಸುತ್ತಿರುತ್ತಾರೆ. ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗದಿದ್ದರೆ ಆಕ್ರೋಶ
ವ್ಯಕ್ತಪಡಿಸುತ್ತಾರೆ. ಶಿಸ್ತುಕ್ರಮದ ಎಚ್ಚರಿಕೆಯನ್ನೂ ನೀಡುತ್ತಾರೆ. ಹಾಗಾಗಿ ಇರುವ ಸಿಬ್ಬಂದಿ ಮೇಲೆಯೇ ಕೆಲಸದ ಹೆಚ್ಚಿನ ಒತ್ತಡ ಬೀಳುತ್ತದೆ. ಕೆಲಸ ಆಗದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಸಚಿವರು, ತೆರವಾಗಿರುವ ಹುದ್ದೆಗಳ ಭರ್ತಿಗೆ ಏಕೆ ಗಮನ ಹರಿಸುತ್ತಿಲ್ಲ ಎಂಬುದು ಹೆಸರು
ಹೇಳಲು ಇಚ್ಛಿಸದ ಅಧಿಕಾರಿಯೊಬ್ಬರ ಪ್ರಶ್ನೆ.

ನೂರಾರು ಹುದ್ದೆ ಖಾಲಿ: ಜಿಲ್ಲೆಯಲ್ಲಿ 7 ತಾಲೂಕುಗಳಿಗೆ 9 ಗ್ರೇಡ್‌ 1 ತಹಶೀಲ್ದಾರ್‌ ಹುದ್ದೆ ಮಂಜೂರಾಗಿದ್ದು , ಪ್ರಸ್ತುತ 7 ಜನ ಕೆಲಸ ಮಾಡುತ್ತಿದ್ದಾರೆ. 10 ಜನ ಗ್ರೇಡ್‌ 2 ತಹಶೀಲ್ದಾರ್‌ ಇರಬೇಕಾಗಿದ್ದು, 6 ಜನ ಇದ್ದಾರೆ. 57 ಜನ ಶಿರಸ್ತೇದಾರರ ಪೈಕಿ 30 ಜನ ಕೆಲಸ ಮಾಡುತ್ತಿದ್ದು, 27 ಹುದ್ದೆ ಖಾಲಿ ಇದೆ. 68 ಜನ ಪ್ರಥಮ ದರ್ಜೆ ಸಹಾಯಕರಿರಬೇಕಾದೆಡೆ 56 ಜನರಿದ್ದು, 12 ಹುದ್ದೆ ತೆರವಾಗಿದೆ. ದ್ವಿತೀಯ ದರ್ಜೆ ಸಹಾಯಕರ 38 ಹುದ್ದೆ ಮಂಜೂರಾಗಿದ್ದು, 34 ಜನ ಕೆಲಸ ಮಾಡುತ್ತಿದ್ದಾರೆ. 4 ಹುದ್ದೆ ಬಾಕಿ ಇದೆ. 376 ಜನ ಗ್ರಾಮಲೆಕ್ಕಿಗರು ಇರಬೇಕಾದೆಡೆ 361 ಜನರಿದ್ದು 15 ಹುದ್ದೆ
ತೆರವಾಗಿದೆ. ಅದೇ ರೀತಿ 4 ಜನ ಶೀಘ್ರ ಲಿಪಿಗಾರರ ಬದಲಿಗೆ ಇಬ್ಬರು ಕೆಲಸ ಮಾಡುತ್ತಿದ್ದು, 2 ಹುದ್ದೆ ತೆರವಾಗಿದೆ. 31 ಜನ ಬೆರಳಚ್ಚುಗಾರರು ಇರಬೇಕಾದೆಡೆ 11 ಜನರಿದ್ದು, 21 ಹುದ್ದೆ ಬಾಕಿ ಇದೆ. ಇನ್ನು 15 ಜನ ವಾಹನ ಚಾಲಕರ ಹುದ್ದೆ ಮಂಜೂರಾಗಿದ್ದರೂ 7 ಜನ ಕೆಲಸಮಾಡುತ್ತಿದ್ದು 8 ಹುದ್ದೆ ತೆರವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ 110 ಜನ “ಡಿ’ ವೃಂದ, ದಫೇದಾರ್‌ ಮತ್ತು ಆರ್‌ಆರ್‌ ಅಟೆಂಡರ್‌ ಬೇಕಾದೆಡೆ ಕೇವಲ 54 ಸಿಬ್ಬಂದಿ ಇದ್ದು 56ಹುದ್ದೆ ಭರ್ತಿಯಾಗಬೇಕಿದೆ.

Advertisement

ಹುದ್ದೆ ಭರ್ತಿಗೆ ಸುಪ್ರೀಂ ಆದೇಶ ಸಮಸ್ಯೆ
ಈ ನಡುವೆ ಬಡ್ತಿ ಸಂಬಂಧ ಸುಪ್ರೀಂ ಕೋರ್ಟ್‌ ನೀಡಿರುವ ಆದೇಶವೂ ಎಲ್ಲ ಇಲಾಖೆಯಂತೆ ಕಂದಾಯ ಇಲಾಖೆ ಮೇಲೂ ಪರಿಣಾಮ ಬೀರಿದೆ. ಬಡ್ತಿ ಸಂಬಂಧಿಸಿದಗೊಂದಲ ನಿವಾರಣೆ ಆಗದೆ ಅರ್ಹತೆ ಇರುವವರಿಗೆ ಬಡ್ತಿ ನೀಡುವಂತಿಲ್ಲ. ಇದು ಸಾಧ್ಯವಾಗಿದ್ದರೆ “ಡಿ’ ದರ್ಜೆಯಿಂದ ಗ್ರೇಡ್‌ 1 ತಹಶೀಲ್ದಾರ್‌ ತನಕದ ಹುದ್ದೆಯನ್ನು ಬಡ್ತಿ ಆಧಾರದ ಮೇಲೆ ಭರ್ತಿ ಮಾಡಬಹುದು. ಆದರೆ ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಸದ್ಯಕ್ಕೆ ಇದ್ಯಾವುದೂ ಸಾಧ್ಯವಿಲ್ಲದಂತಾಗಿದೆ ಎಂದು ಕಂದಾಯ ಇಲಾಖೆಯ ಅಧಿಕಾರಿಯೊಬ್ಬರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next