ಕೋಲಾರ: ತಾಲೂಕಿನ ವೇಮಗಲ್‌ನಲ್ಲಿ ಯಾವುದೇ ಪ್ರಚಾರವಿಲ್ಲದೆ, ಸಾರ್ವಜನಿಕರಿಗೆ ಮಾಹಿತಿ ನೀಡದೆ ಕಂದಾಯ ಅದಾಲತ್ ಏರ್ಪಡಿಸಿರುವುದನ್ನು ಖಂಡಿಸಿ ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು. ತಾಲೂಕಿನ ವೇಮಗಲ್ ಹೋಬಳಿ ಕಂದಾಯ ಅದಾಲತ್‌ಅನ್ನು ಗ್ರಾಮದ ಸ್ತ್ರೀಶಕ್ತಿ ಭವನದಲ್ಲಿ ಹಮ್ಮಿಕೊಂಡಿರುವುದರ ಬಗ್ಗೆ ಜನರಿಗೆ ಮಾಹಿತಿಯೇ ಇಲ್ಲ.
ಇದಕ್ಕೆ ಅದಾಲತ್‌ನಲ್ಲಿ ಭಾಗವಹಿಸಿದ್ದ ಬೆರಳೇಣಿಕೆ ಜನರೇ ಸಾಕ್ಷಿ. ಕಚೇರಿಗೆ ಬಂದಾಗ ಜನರ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡದ ಅಧಿಕಾರಿಗಳು, ಕನಿಷ್ಠ ಅದಾಲತ್ ಬಗ್ಗೆಯಾದ್ರೂ ಮಾಹಿತಿ ನೀಡುತ್ತಿಲ್ಲ ಎಂದು ರಾಜಸ್ವ ನಿರೀಕ್ಷಕ ಹಾಗೂ ಉಪ ತಹಶೀಲ್ದಾರ್ ಸ್ಥಾನದಲ್ಲಿರುವ ರಮೇಶ್ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ದುಡ್ಡು ಕೊಟ್ರೆ ಬೇಗ ಕೆಲಸ ಆಗುತ್ತೆ: ತಾಲೂಕಿನ ಚೋಳಗಟ್ಟ, ಇರಗಸಂದ್ರ, ಮಣಿಯನಹಳ್ಳಿ, ಗ್ರಾಮಗಳ ಪಿಂಚಣಿದಾರರಿಗೆ ಸರಿಯಾಗಿ ಹಣ ಕೊಡುತ್ತಿಲ್ಲ. ಸರಿಯಾದ ರೀತಿ ಸ್ಪಂದನೆ ನೀಡುತ್ತಿಲ್ಲ. ಎರಡು ಮೂರು ಬಾರಿ ಅರ್ಜಿ ಹಾಕಿದರೂ, ದಾಖಲೆಗಳೆಲ್ಲ ಸರಿಯಾಗಿ ಇದ್ದರೂ ಸರಿ ಇಲ್ಲವೆಂದು ಹೇಳಿ ಅರ್ಜಿ ತಿರಸ್ಕೃತ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ, ಸಿಬ್ಬಂದಿಗೆ ಹಣ ನೀಡಿದ್ರೆ ಮಾತ್ರ ಕೆಲಸಗಳು ಆಗುತ್ತವೆ ಎಂದು ದೂರಿದರು.
ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿಯಲ್ಲೇ ಇರಲ್ಲ: ಯಾವುದೇ ದಾಖಲೆಯನ್ನು ಪಡೆಯಲು ಅರ್ಜಿ ಹಾಕಿದ್ರೆ ತಿಂಗಳು ಗಟ್ಟಲೇ ಕಾಯಬೇಕಾಗುವ ಸ್ಥಿತಿ ಬಂದಿದೆ. ಇದನ್ನೆಲ್ಲ ಕಂಡು ಕಾಣದಂತೆ ವರ್ತಿಸುತ್ತಿರುವ ರಾಜಸ್ವ ನಿರೀಕ್ಷಕ ಹಾಗೂ ಉಪ ತಹಶೀಲ್ದಾರ್ ರಮೇಶ್ ಅವರ ಕ್ರಮ ಸರಿಯಲ್ಲ. ವೇಮಗಲ್ ಹೋಬಳಿಯ ಕೆಲವು ಗ್ರಾಮ ಲೆಕ್ಕಾಧಿಕಾರಿಗಳು ಕಚೇರಿಯಲ್ಲಿ ಇರಲ್ಲ. ಅವರಿಗೆ ವಹಿಸಿರುವ ಗ್ರಾಮದಲ್ಲಿ ಏನೇನು ಸಮಸ್ಯೆಗಳಿವೆ ಎಂಬುದನ್ನು ನೋಡುವುದು ಬಿಟ್ಟು, ಇಷ್ಟ ಬಂದಾಗ ಕಚೇರಿಗೆ ಬರುವುದು,
ಇಲ್ಲ ಅಂದರೆ ಗೈರಾಗುವುದು ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಇಲ್ಲಿ ನಡೆಯುವ ಕಂದಾಯ ಅದಾಲತ್ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ತಿಳಿಸದೇ ನಿರ್ಲಕ್ಷ್ಯವಹಿಸಿದ್ದಾರೆ. ಸಾರ್ವಜನಿಕರ ಸಮಸ್ಯೆಗಳು ಅವರಿಗೆ ಕಣ್ಣಿಗೆ ಕಾಣುವುದಿಲ್ಲ. ಸರ್ಕಾರ ನಿಮಗೆ ಅಧಿ ಕಾರ ಏಕೆ ನೀಡಿದೆ ಎಂದು ರಮೇಶ್ ಅವರನ್ನು ಪ್ರಶ್ನಿಸಿದರು.
ಇದನ್ನೆಲ್ಲ ತಿಳಿದ ತಾಪಂ ಸದಸ್ಯ ವಿ.ಎಂ.ಮುನಿಯಪ್ಪ, ಪ್ರತಿಭಟನಾಕಾರರ ಸಮಾಧಾನ ಪಡಿಸಿ, ಮುಂದೆ ಹೀಗೆ ನಡೆಯದಂತೆ ಎಚ್ಚರ ವಹಿಸಬೇಕು. ಅಧಿ ಕಾರ ಇದೆ ಎಂದು ಬಡವರಿಗೆ ಮೋಸ ಮಾಡುವುದು ಕಂಡು ಬಂದರೇ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗೆ ಎಚ್ಚರಿಕೆ ನೀಡಿದರು. ದಲಿತ ಪರ ಸಂಘಟನೆಗಳ ಜಿಲ್ಲಾಧ್ಯಕ್ಷ ಮೇಡಿಹಾಳ ಮುನಿಆಂಜಿನಪ್ಪ, ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಪುರಹಳ್ಳಿ ಯಲ್ಲಪ್ಪ ಉಪಸ್ಥಿತರಿದ್ದರು.