ದೂರದ ಮುಂಬೈನಲ್ಲಿ ಕೆಲಸ ಮಾಡಿಕೊಂಡಿದ್ದ ನಿರ್ದೇಶಕ ಜಿ.ಎಸ್.ಮಹೇಶ್ ಅವರಿಗೆ ಎಲ್ಲೋ ಒಂದು ಕಡೆ ನನ್ನ ಮೊದಲ ನಿರ್ದೇಶನದ ಚಿತ್ರ ಕನ್ನಡದಲ್ಲೆ ಆಗಬೇಕು ಎಂಬ ಆಸೆ ಇತ್ತಂತೆ. ಆ ಆಸೆ “ಸೇಡ್’ ಚಿತ್ರದ ಮೂಲಕ ಈಡೇರಿದೆ. ಈಗಾಗಲೇ ಚಿತ್ರೀಕರಣ ಮುಗಿದು, ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿತು ಚಿತ್ರತಂಡ. ಅಂದಿನ ಹೈಲೆಟ್ ಗುಬ್ಬಿ ವೀರಣ್ಣ ಅವರ ಮೊಮ್ಮಗಳು ಪಂಚಮಿ ಅನ್ಸಾರಿ. ಅವರಿಂದಲೇ ಚಿತ್ರತಂಡ ಹಾಡುಗಳನ್ನು ಬಿಡುಗಡೆ ಮಾಡಿಸಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ ಇತರರು ಹಾಡುಗಳ ಬಿಡುಗಡೆಗೆ ಸಾಕ್ಷಿಯಾದರು.
ನಿರ್ದೇಶಕ ಮಹೇಶ್ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿ ಹೊತ್ತಿದ್ದಾರೆ. ಎಲ್ಲಾ ಸರಿ, ಏನಿದು “ಸೇಡ್’ ಕಥೆ ಎಂಬ ಪ್ರಶ್ನೆಗೆ, “ಇದೊಂದು ಕುಟುಂಬ ಹಿನ್ನೆಲೆಯಲ್ಲಿ ಸಾಗುವ ಚಿತ್ರ. ಮನುಷ್ಯನಿಗೆ ಆಸೆ ಸಹಜ. ಆದರೆ, ಅದು ಅತಿಯಾಸೆ ಆಗಿಬಿಟ್ಟರೆ, ಬದುಕಿನಲ್ಲಿ ಏನೆಲ್ಲಾ ಆಗಿಹೋಗುತ್ತೆ ಎಂಬುದರ ವಿಷಯ ಇಟ್ಟುಕೊಂಡು ಕಥೆ ಹೆಣೆದಿದ್ದೇನೆ’ ಎಂದು ಹೇಳುತ್ತಾರೆ ನಿರ್ದೇಶಕರು.
ನಾಯಕ ವಿಜಯ್ ಕಾರ್ತಿಕ್‌ಗೆ ಒಂದೊಳ್ಳೆಯ ಚಿತ್ರದ ಮೂಲಕ ಕಾಣಿಸಿಕೊಳ್ಳಬೇಕು ಎಂಬ ಆಸೆ ಇತ್ತಂತೆ. ಅದು “ಸೇಡ್’ ಮೂಲಕ ಈಡೇರಿದೆ. ನಾಲ್ಕು ವರ್ಷಗಳ ಶ್ರಮ ಈಗ ಸಾರ್ಥಕವೆನಿಸಿದೆ. ಗೆಳೆಯರೊಬ್ಬರ ಮೂಲಕ ಈ ಚಿತ್ರಕ್ಕೆ ನಿರ್ಮಾಪಕರು ಸಿಕ್ಕರು. ನಾನು ಇದೇ ರಂಗದಲ್ಲಿ ಸಾಧನೆ ಮಾಡಬೇಕು ಅಂತ ನಿರ್ಧರಿಸಿದಾಗ, ಮನೆಯಲ್ಲಿ ಅಪ್ಪ ಬೆಂಬಲವಾಗಿ ನಿಂತರು’ ಎನ್ನುತ್ತಲೇ ಆ ಕ್ಷಣ ಭಾವುಕರಾದರು ವಿಜಯ್ ಕಾರ್ತಿಕ್.
ಅಂದು ಆಡಿಯೋ ಬಿಡುಗಡೆ ಮಾಡಿದ ಗುಬ್ಬಿ ವೀರಣ್ಣ ಮೊಮ್ಮಗಳು ಪಂಚಮಿ, “ಕಲಾ ಕುಟುಂಬದ ಹಿನ್ನೆಲೆಯಿಂದ ಬಂದ ನನಗೆ ಸದಾ ಕಲೆಯ ಬಗ್ಗೆ ತುಡಿತ ಹೆಚ್ಚು. ಈಗಲೂ ಸಹ ಕಲೆ ಬಗ್ಗೆಯೇ ಹೆಚ್ಚು ಮಾತಾಡುತ್ತಿರುತ್ತೇನೆ. ಈ ಚಿತ್ರಕ್ಕೆ ಒಳ್ಳೆಯದಾಗಲಿ, ಕೆಲಸ ಮಾಡಿದ ಪ್ರತಿಯೊಬ್ಬರಿಗೂ ಗೆಲುವು ಸಿಗಲಿ’ ಎಂಬ ಹಾರೈಕೆ ಪಂಚಮಿ ಅವರದು.
ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡ ಅವರು, ಗುಬ್ಬಿ ವೀರಣ್ಣ ಕಂಪೆನಿ ಮೂಲಕ ಡಾ.ರಾಜಕುಮಾರ್ ಚಿತ್ರರಂಗ ಪ್ರವೇಶಿಸಿದ್ದನ್ನು ನೆನಪಿಸಿಕೊಂಡರಲ್ಲದೆ, ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹರಸಿದರು. ಚಿತ್ರಕ್ಕೆ ಸುಲಕ್ಷ ನಾಯಕಿ. ಹೆಚ್ಚು ಮಾತನಾಡದ ಸುಲಕ್ಷ ಅವಕಾಶ ಕೊಟ್ಟಿದ್ದಕ್ಕೆ ಥ್ಯಾಂಕ್ಸ್ ಅಂದರು. ಮತ್ತೂಬ್ಬ ನಾಯಕಿ ಭವ್ಯಾ ಗೈರು ಹಾಜರಿಯಾಗಿದ್ದರು. ಚಿತ್ರಕ್ಕೆ ಎಲ್.ಎನ್.ಶಾಸ್ತ್ರಿ ಸಂಗೀತವಿದೆ. ಅವರ ಪತ್ನಿ ಸುಮಾ ಶಾಸ್ತ್ರಿ ಅವರು, ಈ ಚಿತ್ರಕ್ಕೆ ಕೆಲಸ ಮಾಡುವಾಗಲೇ ಪತಿಯ ಆರೋಗ್ಯ ಏರುಪೇರಾಗಿತ್ತು. ಅವರ ನಂತರ ನಾನು ಹಿನ್ನೆಲೆ ಸಂಗೀತ ನೀಡಿದ್ದಾಗಿ ಹೇಳಿಕೊಂಡರು. ಚಿತ್ರಕ್ಕೆ ಬಿಹಾರ್ ಮೂಲದ ರಿಪಿನ್‌ಕುಮಾರ್ ಗುಪ್ತ ನಿರ್ಮಾಪಕರು.