Advertisement

ಬಿಟ್‌ ಕಾಯಿನ್‌ ದಂಧೆ ಬಹಿರಂಗಪಡಿಸಿ; ಡಾ|ಜಿ. ಪರಮೇಶ್ವರ

01:05 PM Nov 11, 2021 | Team Udayavani |

ಹುಬ್ಬಳ್ಳಿ: ರಾಜ್ಯ ಸರ್ಕಾರ ಬಿಟ್‌ ಕಾಯಿನ್‌ (ಕ್ರಿಪ್ಟೊ ಕರೆನ್ಸಿ)ದಲ್ಲಿ ಕಾಂಗ್ರೆಸ್‌ನವರು ಯಾರು ಇದ್ದಾರೆ ಎಂದು ತಿಳಿಸಿದರೆ ಪಕ್ಷ ಅವರ ಮೇಲೆ ಕ್ರಮಕೈಗೊಳ್ಳುತ್ತದೆ. ಒಂದು ವೇಳೆ ಬಿಜೆಪಿಯವರಿದ್ದರೆ ಅವರ ಹೆಸರನ್ನು ರಾಜ್ಯ ಮತ್ತು ರಾಷ್ಟ್ರದ ಜನರಿಗೆ ಬಹಿರಂಗ ಪಡಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಡಾ| ಜಿ. ಪರಮೇಶ್ವರ ಆಗ್ರಹಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಟ್‌ ಕಾಯಿನ್‌ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಯಾರೋ ಒಬ್ಬನನ್ನು ಬಂಧಿಸಿದ್ದು ಏಕೆ? ಈ ದಂಧೆಯಲ್ಲಿ ಸುಮಾರು 12 ಸಾವಿರ ಕೋಟಿ ರೂ. ಅಕ್ರಮ ವರ್ಗಾವಣೆಯಾಗಿದೆ. ಇದರಲ್ಲಿ ರಾಜಕಾರಣಿಗಳಿದ್ದಾರೆ ಎನ್ನುವ ಆರೋಪವಿದೆ. ಕಾಂಗ್ರೆಸ್‌ನವರು ಇದ್ದಾರೆಂಬುದು ಗೊತ್ತಿದ್ದರೆ ಅವರ ಹೆಸರನ್ನು ಬಹಿರಂಗಪಡಿಸಲಿ. ಬಿಜೆಪಿಯವರು ಯಾರಾದರೂ ಇದ್ದರೆ ಅವರ ಹೆಸರನ್ನು ಸಹ ಹೇಳಲಿ ಎಂದರು.

ತನಿಖೆಯಲ್ಲಿ ಯಾರನ್ನೂ ರಕ್ಷಣೆ ಮಾಡದೆ ರಾಜ್ಯದ ಜನರೆದುರು ಸತ್ಯ ತೆರೆದಿಡಿ. ತಪ್ಪಿತಸ್ಥರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಬಿಟ್‌ ಕಾಯಿನ್‌ನಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದಾರೆಂದು ಯಾರೋ ಹೇಳಿದ್ದಾರೆ. ಆದರೆ ಈ ಬಗ್ಗೆ ಅವರೇ ಸ್ಪಷ್ಟಪಡಿಸಲಿ. ಸತ್ಯ ಮುಚ್ಚಿಟ್ಟರೆ ಒಂದಲ್ಲ ಒಂದು ದಿನ ಹೊರಗಡೆ ಬರುತ್ತದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಲೇ ಹೆಸರು ಬಹಿರಂಗ ಪಡಿಸಲಿ. ಸರ್ಕಾರದ ಹತ್ತಿರ ಎಲ್ಲಾ ಮಾಹಿತಿ ಇದೆ. ನನಗೂ ಎರಡೂ¾ರು ಹೆಸರು ಗೊತ್ತಿವೆ. ಆದರೆ ಪೂರಕ ದಾಖಲೆ ಇಲ್ಲದೇ ಹೇಳ್ಳೋದು ತಪ್ಪು ಎಂದರು.

ರಾಜ್ಯದಲ್ಲಿ ದುರಾಡಳಿತ ಮುಂದುವರಿಕೆ: ಅತೀ ಭ್ರಷ್ಟಾಚಾರ ಕಾರಣದಿಂದ ಬಿಜೆಪಿಯವರು ಬಿ.ಎಸ್‌. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದರು. ಅವರ ಜಾಗದಲ್ಲಿ ಬಸವರಾಜ ಬೊಮ್ಮಾಯೊ ತಂದರು. ಅವರಾದರೂ ಜನತೆಗೆ ಒಳ್ಳೆಯ ಕೆಲಸ ಮಾಡುತ್ತಾರೆ ಅಂತ ಅಂದುಕೊಂಡಿದ್ದೇವು. ಆದರೆ ಬಿಎಸ್‌ವೈ ರೀತಿ ಇವರ ಸರ್ಕಾರದಲ್ಲೂ ಭ್ರಷ್ಟಾಚಾರ ಮುಂದುವರೆದಿದೆ. ವಿಧಾನಸೌಧದ ಯಾವುದೇ ಸಚಿವಾಲಯದಲ್ಲಿ ಪರ್ಸೆಂಟೇಜ್‌ ಕೊಟ್ಟರೆ ಮಾತ್ರ ಕೆಲಸ ಆಗುತ್ತವೆ. ದುರಾಡಳಿತ ನಡೆದಿದೆ ಎಂದು ಆರೋಪಿಸಿದರು.

ಉಪ ಚುನಾವಣೆಯಲ್ಲಿ ಸೋತಿದ್ದಕ್ಕೆ ಬಿಜೆಪಿಯವರು ಪೆಟ್ರೋಲ್‌ ಮತ್ತು ಡೀಸೆಲ್‌ ದರ 10 ರೂ. ಇಳಿಸಿದರು. ಇಷ್ಟು ದಿನ ಈ ತೈಲಗಳಿಂದ ಸಂಗ್ರಹವಾಗಿದ್ದ ಹಣ ಎಷ್ಟು. ಅದು ಎಲ್ಲಿಗೆ ಹೋಯಿತು? ಯಾವುದಕ್ಕೆ ಖರ್ಚು ಮಾಡಲಾಯಿತು ಎಂಬುದರ ಲೆಕ್ಕಪತ್ರ ಕೊಡಲಿ. ಸುಮ್ಮನೆ ಜನರಿಗೆ ಮೋಸ ಮಾಡಿ, ಸುಳ್ಳು ಹೇಳುವ ಕೆಲಸ ಮಾಡುತ್ತಾ ಇದ್ದಾರೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹೆಚ್ಚಾಗಿದೆ, ಇದನ್ನು ಕಡಿಮೆ ಮಾಡುವವರು ಯಾರು? ಇದನ್ನು ನಿಯಂತ್ರಿಸಲು ನಿಮ್ಮಿಂದ ಏಕೆ ಸಾಧ್ಯವಾಗುತ್ತಿಲ್ಲ. ಈ ಸರ್ಕಾರದ ಆಡಳಿತ ಸರಿಯಿಲ್ಲ ಎಂಬುದಕ್ಕೆ ಇದೇ ನಿದರ್ಶನ ಎಂದರು.

Advertisement

ಭ್ರಷ್ಟ ಮತ್ತು ದುರಾಡಳಿತ ಬಿಜೆಪಿ ಸರ್ಕಾರದ ವಿರುದ್ಧ ಪಕ್ಷದಿಂದ ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆ ಮೂಲಕ ಹಳ್ಳಿ ಹಳ್ಳಿಗೂ ತೆರಳಿ ಸರ್ಕಾರದ ಕಾರ್ಯ ವೈಖರಿ ಜನರಿಗೆ ತಿಳಿಸಲಾಗುವುದು. ಶೀಘ್ರವೆ ಕಾರ್ಯಕ್ರಮದ ದಿನಾಂಕ ನಿಗದಿಪಡಿಸಲಾಗುವುದು ಎಂದರು. ಶಾಸಕ ಪ್ರಸಾದ ಅಬ್ಬಯ್ಯ, ಮುಖಂಡರದ ಪ್ರೊ| ಸನದಿ, ನಾಗರಾಜ ಛಬ್ಬಿ, ಶಿವಾನಂದ ಇದ್ದರು.

ದಲಿತ ಸಿಎಂ ಬಗ್ಗೆ ಚರ್ಚೆ ಮಾಡಲ್ಲ
ದಲಿತ ಮುಖ್ಯಮಂತ್ರಿ ಮಾಡುವ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡಿಲ್ಲ, ಮಾಡುವುದಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು 113 ಕ್ಷೇತ್ರಗಳಲ್ಲಿ ಗೆದ್ದ ನಂತರ ಆ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಮೊದಲು ನಮ್ಮೆಲ್ಲರ ಗುರಿ 2023ರಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ತರುವುದು ಆಗಿದೆ. ಆ ಮೇಲೆ ಪಕ್ಷದ ಹೈಕಮಾಂಡ್‌, ಶಾಸಕಾಂಗ ಸಭೆಯಲ್ಲಿ ತೀರ್ಮಾನ ಮಾಡಲಾಗುತ್ತದೆ. ನಾವು ಬಹಿರಂಗವಾಗಿ ಚರ್ಚೆ ರೂಪದಲ್ಲಿ ಇದನ್ನು ತೆಗೆದುಕೊಂಡು ಹೋಗುವುದಿಲ್ಲ. ದಲಿತ ಎಂಬ ಹೆಸರಿನಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ದಲಿತರಿಗೆ ಕಾಂಗ್ರೆಸ್‌ ಅತೀ ಹೆಚ್ಚು ಕಾರ್ಯಕ್ರಮ ನೀಡಿದೆ. ಅದಕ್ಕೆ ಅತೀ ಹೆಚ್ಚು ದಲಿತರು ಕಾಂಗ್ರೆಸ್‌ ಜತೆಗಿದ್ದಾರೆ. ರಾಜಕೀಯಗೋಸ್ಕರ ಸಿದ್ದರಾಮಯ್ಯ ಮೇಲೆ ಗೂಬೆ ಕುರಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಹೊಟ್ಟೆ ಪಾಡಿಗಾಗಿ ಕೆಲವರು ಬಿಜೆಪಿಗೆ ಹೋಗಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಯನ್ನು ಅದು ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಅವರು ಈಗಾಗಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next