ಹಾಸನ: ಅಪಹರಣ ಪ್ರಕರಣದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ತವರು ಜಿಲ್ಲೆ ಹಾಸನಕ್ಕೆ ಆಗಮಿಸುವುದನ್ನು ದಿಢೀರ್ ರದ್ದು ಮಾಡಿದ್ದಾರೆ.
ಬುಧವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿನಿಂದ ಜಿಲ್ಲೆಯ ಗಡಿಭಾಗ ಹಿರೀಸಾವೆಗೆ ಬರುವ ರೇವಣ್ಣ ಅವರನ್ನು ಸ್ವಾಗತ ಮಾಡಲು ಪಕ್ಷದ ಮುಖಂಡರು, ಕಾರ್ಯಕರ್ತರು ಅಣಿಯಾಗಿದ್ದರು. ಈ ವೇಳೆ ನನಗೆ ಹಾರ-ತುರಾಯಿ ಹಾಕಬೇಡಿ, ಸಂಭ್ರಮಾಚರಣೆ ಮಾಡಬೇಡಿ ಎಂದು ಸ್ವತಃ ರೇವಣ್ಣ ಅವರೇ ಮನವಿ ಮಾಡಿದ್ದರು. ಆದರೆ ನಿನ್ನೆ ಸಂಜೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಅನಂತರ ಹಾಸನ ಪ್ರವಾಸ ದಿಢೀರ್ ರದ್ದು ಮಾಡಿದ್ದಾರೆ.
ರೇವಣ್ಣ ಅವರಿಗೆ ಷರತ್ತುಬದ್ಧ ಜಾಮೀನು ನೀಡುವ ಮುನ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹಲವು ಷರತ್ತುಗಳನ್ನು ವಿಧಿಸಿತ್ತು.
ಈ ನಡುವೆ ಮಾಜಿ ಸಚಿವರಿಗೆ ಮಂಜೂರು ಮಾಡಿರುವ ಜಾಮೀನು ಪ್ರಶ್ನಿಸಿ ಎಸ್‌ಐಟಿ ಹೈಕೋರ್ಟ್ ಮೊರೆ ಹೋಗಲು ಯೋಜಿಸುತ್ತಿದೆ ಎನ್ನಲಾಗಿದೆ. ಹೀಗಾದರೆ ಏನು ಮಾಡಬೇಕು ಎಂಬಿತ್ಯಾದಿ ವಿಷಯಗಳ ಕುರಿತು ಬೆಂಗಳೂರಿನಲ್ಲಿದ್ದುಕೊಂಡೇ ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಡಿ ಇಡುವಂತೆ ಪಕ್ಷದ ಹಿರಿಯರು ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರೇವಣ್ಣ ಅವರು ಬೆಂಗಳೂರಿನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಶೃಂಗೇರಿ ಮಠಕ್ಕೂ ಭೇಟಿ ನೀಡುವುದನ್ನೂ ರೇವಣ್ಣ ಮುಂದೂಡಿದ್ದಾರೆ.