Advertisement

ಹಾಸನ ಕ್ಷೇತ್ರದಲ್ಲಿ ಸ್ವರೂಪ್‌ಗೆ ರೇವಣ್ಣ ಶ್ರೀರಕ್ಷೆ

05:35 PM Apr 19, 2023 | Team Udayavani |

ಹಾಸನ: ಜೆಡಿಎಸ್‌ ಟಿಕೆಟ್‌ಗಾಗಿ ನಡೆದ ಪೈಪೋಟಿಯಿಂದ ರಾಜ್ಯದಲ್ಲಿ ಗಮನ ಸೆಳೆದಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಈಗ ಚುನಾವಣಾ ಕಣದ ಚಿತ್ರಣ ಸ್ಪಷ್ಟವಾಗಿದೆ. ಹಾಲಿ ಶಾಸಕ ಬಿಜೆಪಿಯ ಜೆ.ಪ್ರೀತಂಗೌಡ ಎರಡನೇ ಬಾರಿ ವಿಧಾನಸಭೆ ಚುನಾವಣೆ ಎದುರಿಸಲು ಸಜ್ಜಾಗಿದ್ದರೆ, ಅವರೆದುರು ಸ್ಪರ್ಧೆಗಿಳಿಯುತ್ತಿರುವ ಅಭ್ಯರ್ಥಿಗಳೆಲ್ಲರೂ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಎದುರಿಸುತ್ತಿದ್ದಾರೆ.

Advertisement

ಬಿಜೆಪಿ ಜೆ.ಪ್ರೀತಂಗೌಡಗೆ ಜೆಡಿಎಸ್‌ನ ಎಚ್‌ .ಪಿ.ಸ್ವರೂಪ್‌ ನೇರ ಎದುರಾಳಿ ಎಂದು ಸಹಜವಾಗಿ ಬಿಂಬಿತರಾಗಿದ್ದರೆ. ಸ್ಪರ್ಧಾಕಣದಲ್ಲಿ ಉಳಿಯುವ ಕಾಂಗ್ರೆಸ್‌ನ ಬನವಾಸೆ ರಂಗಸ್ವಾಮಿ , ಎಎ ಪಿಯ ಅಗಿಲೆ ಯೋಗೀಶ್‌ ಅವರು ಯಾವ ಪ್ರಮಾಣದಲ್ಲಿ ಮತದಾರರನ್ನು ಸೆಳೆಯುತ್ತಾರೆ ಎಂಬುದಕ್ಕಿಂತ, ಜೆಡಿಎಸ್‌ ನಾಯಕ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಕುಟುಂಬದವರ ನಿಲುವು ಹಾಸನ ಕ್ಷೇತ್ರದ ನೂತನ ಪ್ರತಿನಿಧಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಸನ ಕ್ಷೇತ್ರದಲ್ಲಿ ಈಗ ಇದೇ ಪ್ರಮುಖ ಚರ್ಚೆಯಾಗಿದೆ.

ಜೆಡಿಎಸ್‌ ಟಿಕೆಟ್‌ಗಾಗಿ ಭವಾನಿ ರೇವಣ್ಣ ಮತ್ತು ಎಚ್‌.ಪಿ.ಸ್ವರೂಪ್‌ ನಡುವೆ ನಡೆಯತ್ತಿದ್ದ ಪೈಪೋಟಿಯ ನಡುವೆಯೇ ಶಾಸಕ ಪ್ರೀತಂಗೌಡ ಭರ್ಜರಿ ಚುನಾವಣೆ ಸಿದ್ಧತೆ ಮಾಡಿಕೊಂಡರು. ಜೆಡಿಎಸ್‌ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಘೋಷಣೆಯ ಮೊದಲೇ ಪ್ರೀತಂಗೌಡ ಹಾಸನದಲ್ಲಿ ಸಾವಿರಾರು ಜನರನ್ನು ಸೇರಿಸಿ ಶಕ್ತಿ ಪ್ರದರ್ಶನವನ್ನೂ ನಡೆಸಿದರು. ಆದರೆ, ಪ್ರೀತಂಗೌಡ ಶಕ್ತಿ ಪ್ರದಶನ ನಡೆಸಿದ ದಿನವೇ ಕಾಕತಾಳೀಯ ಎಂಬಂತೆ ಎಚ್‌.ಪಿ.ಸ್ವರೂಪ್‌ ಜೆಡಿಎಸ್‌ ಅಭ್ಯರ್ಥಿ ಎಂದು ಘೋಷಣೆ ಆದರು. ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬನವಾಸೆ ರಂಗಸ್ವಾಮಿ ಅವರ ಘೋಷಣೆಯೂ ಆಗಿದೆ.

ದಳಕ್ಕೆ ಹಾಸನ ಗೆಲುವಿನ ಪ್ರತಿಷ್ಠೆ: ಟಿಕೆಟ್‌ ಘೋಷಣೆಯಾದ ನಂತರವೂ ಎಚ್‌.ಡಿ.ರೇವಣ್ಣ ಅವರಾಗಲಿ, ಭವಾನಿ ರೇವಣ್ಣ ಅವರಾಗಲಿ ಸ್ವರೂಪ್‌ ಪರ ನಿಲ್ಲುವ ಯಾವುದೇ ಸೂಚನೆ ನೀಡಿಲ್ಲ. ಭವಾನಿ ಅವರಿಗೆ ಟಿಕೆಟ್‌ ಕೈ ತಪ್ಪಿದ ಬೇಸರದಿಂದ ಇನ್ನೂ ರೇವಣ್ಣ ಅವರ ಕುಟುಂಬ ಹೊರ ಬಂದಿಲ್ಲ. ಆದರೆ, ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂಬ ಹೇಳಿಕೆ ಸ್ವರೂಪ್‌ ಮತ್ತು ಹಾಸನ ಕ್ಷೇತ್ರದ ಜೆಡಿಎಸ್‌ ಕಾರ್ಯಕರ್ತ ರಿಗೆ ಸಮಾಧಾನ ತಂದಿದೆ. ಹಾಸನ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್‌ ಮುಖಂಡರ ನಕಾರಾತ್ಮಕ ನಡವಳಿಕೆಗಳಿಂದಲೇ ಬಿಜೆಪಿ ಪಾಲಾಯಿತು. ಮತ್ತೆ ಕೈ ತಪ್ಪಿ ದರೆ ಮರಳಿ ಪಡೆಯಲು ದಶಕಗಳೇ ಕಳೆಯಬೇಕಾದೀತು ಎಂಬ ಅರಿವು ಜೆಡಿಎಸ್‌ಗೆ ವಿಶೇಷವಾಗಿ ಎಚ್‌.ಡಿ.ರೇವಣ್ಣ ಅವರಿಗೆ ಇದ್ದೇ ಇದೆ.

ಸವಾಲಿನ ಶೂರನ ಸೊಕ್ಕಡಿಗಿಸಲು ರೇವಣ್ಣ ರಣತಂತ್ರ?: ರೇವಣ್ಣ ಅವರಿಗೆ ಸ್ವರೂಪ್‌ ಅವರಿಗಿಂತ ಪ್ರೀತಂಗೌಡ ರಾಜಕೀಯದಲ್ಲಿ ಬಹುದೊಡ್ಡ ಶತ್ರು. ಕಳೆದ ಮೂರುವರೆ ವರ್ಷಗಳಲ್ಲಿಯೇ ಅದರ ಅನುಭವ ರೇವಣ್ಣ ಅವರಿಗೂ ಆಗಿದೆ. ಹಾಸನದಲ್ಲಿ ರೇವಣ್ಣ ಅವರ ಅಭಿವೃದ್ಧಿ ಕನಸುಗಳನ್ನೆಲ್ಲಾ ಪ್ರೀತಂಗೌಡ ಅವರು ನುಚ್ಚುನೂರು ಮಾಡಿದ್ದಾರೆ. ಜೊತೆಗೆ ರೇವಣ್ಣ ಕಟುಂಬದ ಬಗ್ಗೆ ಮಾಡಿದ ಅವಹೇಳನ ಸಹಿಸಲು ರೇವಣ್ಣ ಮತ್ತು ಪುತ್ರರು ಮರೆಯದಿದ್ದರೆ, ಸ್ವರೂಪ್‌ ಅವರ ಮೇಲಿನ ವಿರೋಧವನ್ನು ಮುಂದುವರಿಸಲಾರರು. ಹಾಗಾಗಿ, ಇನ್ನೊಂದು ವಾರದಲ್ಲಿಯೇ ರೇವಣ್ಣ ಮತ್ತು ಕುಟುಂಬದ ನಿಲುವು ಸ್ಪಷ್ಟವಾಗುವ ನಿರೀಕ್ಷೆಯಿದೆ.

Advertisement

ದಳ ಅಸ್ತಿತ್ವಕ್ಕಾಗಿ ತೀವ್ರ ಪೈಪೋಟಿ: ಜೆಡಿಎಸ್‌ ಕಾರ್ಯಕರ್ತರ ದೃಷ್ಟಿಯಲ್ಲೀಗ ಪ್ರೀತಂ ಎದುರು ಸ್ವರೂಪ್‌ ಇಲ್ಲ. ರೇವಣ್ಣ ಅವರೇ ಇದ್ದಾರೆ ಎಂಬ ಭಾವನೆಯಿದೆ. ಇಂತಹ ಅವಕಾಶಗಳನ್ನು ಕೈ ಚೆಲ್ಲಿ ಕುಳಿತರೆ ಭವಿಷ್ಯದ ಲೋಕಸಭಾ ಚುನಾವಣೆಯಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿಯೂ ಜೆಡಿಎಸ್‌ ಬೆಲೆ ತೆರಬೇಕಾದೀತು ಎಂಬುದನ್ನು ರೇವಣ್ಣ ಮತ್ತು ಕುಟುಂಬದವರಿಗೆ ಮನವರಿಕೆ ಮಾಡಿಕೊ ಡಲು ಜೆಡಿಎಸ್‌ ಮುಖಂಡರು ಪ್ರಯತ್ನ ಆರಂಭಿಸಿದ್ದಾರೆ.

ಸ್ವರೂಪ್‌ಗೆ ಸೌಜನ್ಯ, ಅನುಕಂಪ ಧನಾತ್ಮಕ ಅಂಶ: ಇಷ್ಟರ ನಡುವೆ ಪ್ರೀತಂಗೌಡ ಅವರು ಪಕ್ಷದ ಬಲ ಹಾಗೂ ತಮ್ಮ ಅರ್ಥಿಕ ಬಲದ ಮೇಲೆ ನಿರೀಕ್ಷೆಯಿಟ್ಟುಕೊಂಡಿದ್ದಾರೆ. ಆದರೆ, ಪಕ್ಷದೊಳಗಿನ ವಿರೋಧವನ್ನೂ ಪ್ರೀತಂಗೌಡ ಎದುರಿಸಿ ಪ್ರಬಲ ಸ್ಪರ್ಧಿ ಸ್ವರೂಪ್‌ ಅವರ ಜೊತೆಗೆ ಆಡಳಿತ ವಿರೋಧಿ ಅಲೆ ಎದುರಿಸಬೇಕಾಗಿದೆ. ಆದರೆ, ಸ್ವರೂಪ್‌ ಅವರಿಗೆ ಇದ್ಯಾವ ನಕಾರಾತ್ಮಕ ಅಂಶಗಳೂ ಇಲ್ಲ. ಸೌಮ್ಯ ಸ್ವಭಾವ, ತನ್ನ ಅಪ್ಪ ನಂತೆಯೇ ಪ್ರೀತಿ, ಸ್ನೇಹದ ಮಾತುಗಳು ಹಾಗೂ ತಂದೆ ಮತ್ತು ಚಿಕ್ಕಪ್ಪನನ್ನು ಕಳೆದುಕೊಂಡಿರುವ ಅನುಕಂಪವೂ ಸ್ವರೂಪ್‌ ಅವರಿಗಿದೆ. ಆದರೆ, ಅವರಿಗೆ ಇನ್ನು ಬೇಕಾಗಿರುವುದು ರೇವಣ್ಣ ಅವರ ಸಹಕಾರ ಮಾತ್ರ. ಅದೊಂದೇ ಹಾಸನ ಕ್ಷೇತ್ರದ ಚುನಾವಣಾ ಚಿತ್ರಣವಣವನ್ನೇ ನಿರ್ಧರಿಸಬಹುದಾದ ಪ್ರಧಾನ ಅಂಶ.

ಶಾಸಕ ಪ್ರೀತಂಗೆ ಸ್ವರೂಪ್‌ ಸಮಬಲ ಅಭ್ಯರ್ಥಿ: ಭವಾನಿ ರೇವಣ್ಣ ಅಥವಾ ಎಚ್‌.ಡಿ.ರೇವಣ್ಣ ಜೆಡಿಎಸ್‌ ಅಭ್ಯರ್ಥಿಯಾಗಿದ್ದರೆ ಬಿಜೆಪಿ ಅಭ್ಯರ್ಥಿ ಪ್ರೀತಂಗೌಡ ಅವರಿಗೆ ಚುನಾವಣೆಯಲ್ಲಿ ಜೆಡಿಎಸ್‌ನಿಂದಲೇ ಬಹುದೊಡ್ಡ ಅಸ್ತ್ರ ಕೊಟ್ಟಂ ತಾಗುತಿತ್ತು. ಅದನ್ನು, ಪ್ರೀತಂಗೌಡ ಅವರೂ ನಿರೀಕ್ಷಿಸಿದ್ದರು. ಆದರೆ, ಎಚ್‌.ಪಿ.ಸ್ವರೂಪ್‌ ಅವರು ಜೆಡಿಎಸ್‌ ಅಭ್ಯರ್ಥಿ ಆಗಿರುವುದು ಪ್ರೀತಂಗೌಡ ಅವರಿಗೆ ನಡುಕವನ್ನುಂಟು ಮಾಡಿದೆ. ಸ್ವರೂಪ್‌ ಅವರ ಮೇಲೆ ಹರಿಹಾಯಲು ಅಸ್ತ್ರಗಳೇ ಇಲ್ಲ. ಈಗ ಧನಬಲ ಹೊರತುಪಡಿಸಿದರೆ ಕ್ಷೇತ್ರದಲ್ಲಿ ಸಂಘಟನೆ, ಕಾರ್ಯಕರ್ತರ ಪಡೆ, ಜಾತಿ, ಉಪಜಾತಿ ಬಲ ಸೇರಿದಂತೆ ಪ್ರೀತಂ ಗೌಡ ಅವರಿಗೆ ಇರುವ ಎಲ್ಲ ಧನಾತ್ಮಕ ಅಂಶಗಳೂ ಸ್ವರೂಪ್‌ ಅವರಿಗಿದೆ. ಜೊತೆಗೆ ಎಚ್‌.ಡಿ. ರೇವಣ್ಣ ಅವರ ಸಹಕಾರವೂ ಸ್ವರೂಪ್‌ ಅವರಿಗೆ ಲಭಿಸಿದರೆ ಬಿಜೆಪಿ ಮತ್ತು ಕಾಂಗ್ರೆಸ್‌ ಅಭ್ಯರ್ಥಿಗಳ ಲೆಕ್ಕಾಚಾರಗಳೇ ಬುಡಮೇಲಾಗಲಿವೆ. ಅಂತದ್ದೊಂದು ಬೆಳವಣಿಗೆಯನ್ನು ಜೆಡಿಎಸ್‌ ಕಾರ್ಯಕರ್ತರು ನಿರೀಕ್ಷಿಸುತ್ತಿದ್ದಾರೆ. ರೇವಣ್ಣ ಮತ್ತು ಕುಟುಂಬದ ನಿಲುವು ಸದ್ಯದ ಮಟ್ಟಿಗೆ ಕುತೂಹಲ ಕೆರಳಿಸಿದೆ.

ಎನ್‌.ನಂಜುಡೇಗೌಡ

Advertisement

Udayavani is now on Telegram. Click here to join our channel and stay updated with the latest news.

Next