ಬೆಂಗಳೂರು : ಹಾಸನ ಪದವಿ ಕಾಲೇಜಿನಲ್ಲಿ ಹೊಸ ಕೋರ್ಸ್ ಆರಂಭಿಸುವುದಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡಿಲ್ಲದೇ ಇರುವುದನ್ನು ಖಂಡಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಏಕವ್ಯಕ್ತಿ ಪ್ರತಿಭಟನೆ ನಡೆಸಿದ್ದಾರೆ.
ಹಾಸನದ ಕಾಲೇಜಿನಲ್ಲಿ ಎಂಎಸ್‌ಇ ಫುಡ್ ನ್ಯೂಟ್ರೇಶನ್ ಹಾಗೂ ಎಂಎಸ್‌ಇ ಸೈಕಾಲಜಿ ಸ್ನಾತಕೋತ್ತರ ಕೋರ್ಸ್ ಆರಂಭಕ್ಕೆ ರೇವಣ್ಣ ಮನವಿ ಸಲ್ಲಿಸಿದ್ದರು. ಆದರೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ.ಅಶ್ವತ್ಥ ನಾರಾಯಣ ಅನುಮೋದನೆ ನೀಡಿರಲಿಲ್ಲ. ಉನ್ನತ ಶಿಕ್ಷಣ ಇಲಾಖೆ ಆರಂಭದಲ್ಲಿ ಅನುಮತಿ ನೀಡಿದ್ದರು ಬಳಿಕ ತಾಂತ್ರಿಕ ಕಾರಣ ಹಿನ್ನೆಲೆಯಲ್ಲಿ ನಿರಾಕರಿಸಲಾಗಿತ್ತು.
ಈ ಸಂಬಂಧ ರೇವಣ್ಣ ಎರಡು ಬಾರಿ ಸಚಿವರಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. ಹೀಗಾಗಿ ಸಿಎಂ ಗೃಹ ಕಚೇರಿಯ ಎದುರು ಪ್ರತಿಭಟನೆಗೆ ಆಗಮಿಸಿದ್ದರು.
ರೇವಣ್ಣ ದೊಡ್ಡಮಟ್ಟದಲ್ಲಿ ಪ್ರತಿಭಟನೆ ನಡೆಸಬಹುದೆಂದು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಬಿಗಿಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಆದರೆ ಲೆಕ್ಕಾಚಾರ ತಲೆಕೆಳಗೆ ಮಾಡಿರುವ ರೇವಣ್ಣ “ನಾನು ಕೊರೋನಾ ನಿಯಮ ಪಾಲನೆಗಾಗಿ ಒಬ್ಬನೇ ಪ್ರತಿಭಟನೆ ಮಾಡುತ್ತೇನೆ’’ ಎಂದು ಹೇಳಿದ್ದಾರೆ.
ರೇವಣ್ಣ ಪ್ರತಿಭಟನೆಗೆ ಬಂದಿರುವ ಮಾಹಿತಿ ಪಡೆದಿರುವ ಸಿಎಂ ಬಸವರಾಜ್ ಬೊಮ್ಮಾಯಿ ತಮ್ಮ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಅವರನ್ನು ಕಳುಹಿಸಿಕೊಡುತ್ತೇನೆ. ಅವರಿಗೆ ಮನವಿ ಪತ್ರ ನೀಡಿ ಎಂದು ದೂರವಾಣಿ ಮೂಲಕ ಸಮಾಧಾನ ಮಾಡಿದ್ದಾರೆ. ಸಿಎಂ ಕಚೇರಿಯಲ್ಲಿ ಒಬ್ಬಂಟಿಯಾಗಿ ಕುಳಿತ ರೇವಣ್ಣ ಅವರಿಂದ ಮಂಜುನಾಥ್ ಪ್ರಸಾದ್ ಮನವಿ ಸ್ವೀಕರಿಸಿದ್ದಾರೆ.