ರಾಮನಗರ: ತಾಲೂಕಿನ ಕೈಲಾಂಚ ಹೋಬಳಿ ಅವ್ವೇರಹಳ್ಳಿಯ ಶ್ರೀ ರೇವಣ ಸಿದ್ದೇಶ್ವರ ಸ್ವಾಮಿ (ಎಸ್‌ಆರ್‌ಎಸ್) ಜಾತ್ರೆ ಮಹೋತ್ಸವದ ನಿಮಿತ್ತ ಮೇ 18ರಂದು ಮಹಾರಥೋತ್ಸವ ನಡೆಯಲಿದೆ.
ರಥೋತ್ಸಕ್ಕೆ ಸಾವಿರಾರು ಮಂದಿ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು, ಹೀಗೆ ಬರುವ ಭಕ್ತಾಧಿಗಳಿಗೆ ಕುಡಿಯುವ ನೀರು, ವಸತಿ, ಮೂಲ ಸೌಲಭ್ಯಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಕ್ಷೇತ್ರದ ಪರಿಚಯ: ರಾಜ್ಯಾದ್ಯಂತ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧ ಹೊಂದಿರುವ ಎಸ್‌ಆರ್‌ಎಸ್ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಇದೇ ಮೇ 18ರಂದು ರಥೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಬಗ್ಗೆ ಕಿರು ಪರಿಚಯವಿದೆ. ಜಿಲ್ಲಾ ಕೇಂದ್ರ ರಾಮನಗರದಿಂದ 15 ಕಿಮೀ ದೂರದಲ್ಲಿರುವ ಶ್ರೀ ರೇವಣಸಿದ್ದೇಶ್ವರ ಬೆಟ್ಟವು ಅತ್ಯಂತ ಪ್ರಾಚೀನ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ. ಬೆಟ್ಟದ ತಪ್ಪಲಿನಲ್ಲಿ ಶ್ರೀ ರೇಣುಕಾಂಭ ದೇಗುಲ ವಿದ್ದು, ಮಧ್ಯ ಬೆಟ್ಟದಲ್ಲಿ ಶ್ರೀ ಭೀಮೇಶ್ವರ ಮತ್ತು ಶ್ರೀ ವೀರಭದ್ರೇಶ್ವರಸ್ವಾಮಿ ದೇವಾಲಯಗಳಿವೆ. ಬೆಟ್ಟದ ಮೇಲ್ಬಾಗದಲ್ಲಿರುವ ಗುಹೆಯಲ್ಲಿ ಶ್ರೀ ರೇವಣ ಸಿದ್ಧೇಶ್ವರ ಸ್ವಾಮೀಜಿ ನೆಲೆಸಿದ್ದರು ಎಂದು ಹಿರಿಯರು ಹೇಳುತ್ತಾರೆ.
ಸಿದ್ದೇಶ್ವರ ಪ್ರತೀತಿಗಳು: ಕಲಿಯುಗದ ಆದಿ ಭಾಗದಲ್ಲಿ ಲೋಕ ಕಲ್ಯಾಣಕ್ಕಾಗಿ ಶ್ರೀ ಜಗದ್ಗುರು ರೇಣುಕಾಚಾರ್ಯರು ತೆಲಂಗಾಣದ ಕೊಲ್ಲಿಪಾಕಿಯ ಶ್ರೀ ಸೋಮೇಶ್ವರ ಲಿಂಗದಿಂದ ಉದ್ಭಸಿ 700 ವರ್ಷಗಳ ಕಾಲ ಲೋಕ ಸಂಚಾರ ನಡೆಸಿ, ನಂತರ ಈ ಬೆಟ್ಟದ ಮೇಲಿರುವ ಗುಹೆಯಲ್ಲಿ ತಪಸ್ಸು ಆಚರಿಸಿ, ಲಿಂಗ ರೂಪದಲ್ಲಿ ಇಲ್ಲಿ ನೆಲೆಸಿದ್ದಾರೆ ಎಂದು ಈ ಕ್ಷೇತ್ರದ ಭಕ್ತರ ಅಭಿಪ್ರಾಯ. ಹೀಗಾಗಿಯೇ ಬೆಟ್ಟಕ್ಕೆ ರೇವಣ ಸಿದ್ದೇಶ್ವರ ಬೆಟ್ಟವೆಂದು ಖ್ಯಾತಿಯಾಗಿದೆ.
ದ್ವಾಪರ ಯುಗದಲ್ಲಿ ಪಾಂಡವರು ಅಜ್ಞಾತವಾಸದಲ್ಲಿದ್ದ ಕಾಲದಲ್ಲಿ ಶ್ರೀ ಕ್ಷೇತ್ರ ಕಾಶಿಯಿಂದ ಭೀಮನು ಲಿಂಗವೊಂದನ್ನು ತಂದು ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದನೆಂಬುದು ಇಲ್ಲಿನ ಪ್ರತೀತಿ. ಹೀಗಾಗಿಯೇ ಈ ಕ್ಷೇತ್ರಕ್ಕೆ ಭೀಮೇಶ್ವರ ಎಂಬ ಹೆಸರೂ ಇದೆ ಎಂದು ಕೆಲವರು ಹೇಳುತ್ತಾರೆ.
ಇಷ್ಟಾರ್ಥ ಸಿದ್ಧಿ-ಮೊರೆ ಬಸವ: ಬೆಟ್ಟದ ಮೇಲ್ಬಾಗದಲ್ಲಿರುವ ಮೊರೆ ಬಸವನ ಬಗ್ಗೆ ಭಕ್ತರಿಗೆ ತುಂಬಾ ಗೌರವ. ಭಕ್ತರು ಮಾಡಿಕೊಳ್ಳುವ ಅರಿಕೆಯನ್ನು ಬಸವ ಅವಶ್ಯ ಈಡೇರಿಸುತ್ತಾನೆ ಎಂಬುದು ಭಕ್ತರ ಬಲವಾದ ನಂಬಿಕೆ. ಬಸವನ ಮುಂದೆ ಕೂರಿಸಿ ಅರ್ಚಕರು ತಲೆಯ ಮೇಲೆ ನೀರು ಪ್ರೋಕ್ಷಿಸಿದ ನಂತರ ಭಕ್ತರು ತಮ್ಮ ಹರಕೆಯನ್ನು ಬಸವನಿಗೆ ತಿಳಿಸುವುದು ಇಲ್ಲಿನ ವಾಡಿಕೆ. ಮೊರೆ ಬಸವ ಎಂದೇ ಖ್ಯಾತಿಯಾಗಿರುವ ಬಸವ ಸಂತಾನಭಾಗ್ಯ ಸೇರಿದಂತೆ ಅನೇಕ ಇಷ್ಟಾರ್ಥಗಳು ನೆರೆವೇರಿದ ಬಗ್ಗೆ ಭಕ್ತರು ತಮ್ಮ ಬಳಿ ಸಂತಸ ಹಂಚಿಕೊಂಡಿದ್ದಾರೆ ಎಂದು ಅರ್ಚಕ ಜಯ್ ಹೇಳುತ್ತಾರೆ.
ಪ್ರಸ್ತುತ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಶಾಖಾ ಕಚೇರಿಯು ಬೆಟ್ಟದಲ್ಲಿ ಕಾರ್ಯ ನಿರ್ವಸುತ್ತಿದೆ. ಸರ್ಕಾರದ ವತಿಯಿಂದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಸಹ ನೇಮಕ ಮಾಡಲಾಗಿದೆ.
ದಾಸೋಹ ವ್ಯವಸ್ಥೆ: ಧಾರ್ಮಿಕ ದತ್ತಿ ಇಲಾಖೆ, ಶ್ರೀ ರೇವಣ ಸಿದ್ದೇಶ್ವರಸ್ವಾಮಿ ಅಭಿವೃದ್ಧಿ ಸೇವಾ ಟ್ರಸ್ಟ್ ಮತ್ತು ಶ್ರೀ ರೇವಣ ಸಿದ್ದೇಶ್ವರ ಬೆಟ್ಟದ ಮಠದ ಶ್ರೀ ಬಸವಲಿಂಗರಾಜ ಸ್ವಾಮಿಗಳು, ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮಿಗಳವರು ಜಾತ್ರಾ ಮಹೋತ್ಸವದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ.
● ಬಿ.ವಿ.ಸೂರ್ಯ ಪ್ರಕಾಶ್