ಬೆಂಗಳೂರು: ಕಾಂಗ್ರೆಸ್‌ನಲ್ಲಿ ಟಿಕೆಟ್ ನೀಡಲು ಅನುಸರಿಸುವ ಮಾನದಂಡದ ಬಗ್ಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ಅಸಮಾಧಾನ ಹೊರಹಾಕಿದ್ದಾರೆ.
ಬಿಜೆಪಿಯಿಂದ ನಿನ್ನೆ ಬಂದವರಿಗೆ ಇಂದು ಟಿಕೆಟ್ ನೀಡಲಾಗುತ್ತಿದೆ. ನಾಳೆ ಬರುವವರಿಗೂ ಟಿಕೆಟ್ ನೀಡುವ ಭರವಸೆ ನೀಡಲಾಗುತ್ತಿದೆ. ಆದರೆ, ಪಕ್ಷಕ್ಕೆ ಕೆಲಸ ಮಾಡಿದವರಿಗೆ ಟಿಕೆಟ್ ಖಾತರಿ ಇಲ್ಲದಂತಾಗಿದೆ ಎಂದು ತಿಳಿಸಿದ್ದಾರೆ.
ಕ್ಷೇತ್ರ ಪುನರ್ ವಿಂಗಡಣೆ ನಂತರ ಮಾಗಡಿ ಬಿಟ್ಟು ತಪ್ಪು ಮಾಡಿದೆ. ಹೆಬ್ಟಾಳದಲ್ಲಿ ಸ್ಪರ್ಧಿಸಿ ನಾಲ್ಕು ಸಾವಿರ ಮತಗಳಲ್ಲಿ ಸೋತೆ. ನಂತರ ಚನ್ನಪಟ್ಟಣದಿಂದ ಪಕ್ಷದ ಆದೇಶದ ಮೇರೆಗೆ ಸ್ಪರ್ಧೆ ಮಾಡಿದೆ. ಹೀಗೆ ನನ್ನನ್ನು ಫುಟ್ಬಾಲ್‌ನಂತೆ ಆಡಿದರು ಎಂದು ಹೇಳಿದ್ದಾರೆ.
ಬೆಂಗಳೂರಿನ ದಾಸರಹಳ್ಳಿ, ದಾವಣಗೆರೆಯ ಹರಿಹರ ಹಾಗೂ ಬೆಳಗಾವಿಯ ಸವದತ್ತಿ ಯಲ್ಲಮ್ಮ ಕ್ಷೇತ್ರದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಎರಡು ಪಟ್ಟಿಯಲ್ಲಿ ಟಿಕೆಟ್ ಘೋಷಣೆ ಮಾಡದಿರುವುದು ಬೇಸರ ತರಿಸಿದೆ ಎಂದು ಹೇಳಲಾಗಿದೆ.
ಈ ಮಧ್ಯೆ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಎಚ್.ಎಂ.ರೇವಣ್ಣ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಸಮಾಧಾನ ಮಾಡಿದರು. ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನೂ ರೇವಣ್ಣ ಭೇಟಿ ಮಾಡಿ ಚರ್ಚಿಸಿ ತಮ್ಮ ನೋವು ತೋಡಿಕೊಂಡರು. ಮುಂದಿನ ಲಿಸ್ಟ್‌ನಲ್ಲಿ ಟಿಕೆಟ್ ಕೊಡುವ ಭರವಸೆ ದೊರೆತಿದೆ ಎಂದು ಹೇಳಲಾಗಿದೆ.