ಹಾಸನ: ಎಚ್.ಡಿ.ರೇವಣ್ಣ ಮತ್ತು ಕುಟುಂಬದವರಿಗೆ ಬಹುಪರಾಕ್ ಹೇಳಲಿಲ್ಲ ಎಂದು ವ್ಯವಸ್ಥಿತ ಸಂಚು ಮಾಡಿ ನನ್ನನ್ನು ಜೆಡಿಎಸ್‌ನಿಂದ ಹೊರ ದಬ್ಬಿದ್ದಾರೆ. ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಅವರೇ ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅರಕಲಗೂಡು ಕ್ಷೇತ್ರದ ಶಾಸಕ ಎ.ಟಿ.ರಾಮಸ್ವಾಮಿ ವಾಗ್ಧಾಳಿ ನಡೆಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಗೆ ಪ್ರಜ್ವಲ್ ರೇವಣ್ಣ ಅವರನ್ನು ಸ್ಪರ್ಧೆಗಿಳಿಸಲು ರೇವಣ್ಣ ಕುಟುಂಬದವರು ನಿರ್ಧರಿಸಿದ್ದರು. ಔಪಚಾರಿಕವಾಗಿ ಅಭ್ಯರ್ಥಿ ಆಯ್ಕೆಗಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ನಾನು ದೇವೇಗೌಡರೇ ಹಾಸನ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಹೇಳಿದ್ದೆ. ಪ್ರಜ್ವಲ್ ರೇವಣ್ಣ ಪರ ಬಹುಪರಾಕ್ ಹೇಳಲಿಲ್ಲ ಎಂದು ಅಲ್ಲಿಂದ ನನ್ನ ವಿರುದ್ಧ ಪಿತೂರಿ ಆರಂಭಿಸಿದರು. ಹಿರಿಯ ರಾಜಕೀಯ ಮುತ್ಸದ್ಧಿ ದೇವೇಗೌಡರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರ ಹಾಕಿದವರು ಈಗ ನನ್ನನ್ನು ಹೊರ ಹಾಕಿದ್ದರಲ್ಲಿ ಅಚ್ಚರಿಯೇನೂ ಇಲ್ಲ ಎಂದರು.
ಪಕ್ಷದಲ್ಲಿ ಗುಂಪುಗಾರಿಕೆ ರೇವಣ್ಣ ಮತ್ತು ಕುಟುಂಬದವರಿಂದಲೇ ನಡೆಯುತ್ತಿದೆ. ಸ್ವಾರ್ಥಕ್ಕಾಗಿ ಬೇರೆಯವರನ್ನು ಬಲಿಕೊಟ್ಟು ಸ್ವಾರ್ಥ ಸಾಧಿಸಿಕೊಳ್ಳುತ್ತಾರೆ. ಈಗ ನನ್ನನ್ನೂ ಹೊರದಬ್ಬಿದ್ದಾರೆ . ನಾನೇನು ಅಪರಾಧ ಮಾಡಿದ್ದೆ ? ಲೂಟಿ ಮಾಡಿದ್ದೆನಾ ? ಪಕ್ಷಕ್ಕೆ ಕೆಟ್ಟ ಹೆಸರು ತಂದಿದ್ದೆನಾ ಎಂದು ಕಿಡಿಕಾರಿದರು.
ನನ್ನನ್ನು ಪಕ್ಷದಿಂದ ಹೊರ ಹಾಕುವ ಸುಳಿವು ಒಂದು ವರ್ಷದ ಹಿಂದೆಯೇ ನನಗೆ ಸಿಕ್ಕಿತ್ತು. ಪ್ರಜ್ವಲ್ ರೇವಣ್ಣ ವಿರುದ್ಧ ಎ.ಮಂಜು ಅವರು ಕೋರ್ಟ್‌ನಲ್ಲಿ ನಡೆಸುತ್ತಿರುವ ಕೇಸ್‌ನಿಂದ ಬಚಾವಾಗಲು ನನ್ನನ್ನು ಬಲಿ ಕೊಟ್ಟರು ಎಂದು ಆರೋಪಿಸಿದರು.
ಅರಕಲಗೂಡಲ್ಲೇ ಸ್ಪರ್ಧಿಸಿ ಗೆಲ್ಲುವೆ: ಜೆಡಿಎಸ್‌ನಿಂದ ಹೊರ ಹಾಕಿದ್ದನ್ನು ಸವಾಲಾಗಿ ಸ್ವೀಕರಿಸಿರುವೆ. ವಿಧಾನಸಭಾ ಚುನಾವಣೆಗೆ ಅರಕಲಗೂಡು ಕ್ಷೇತ್ರದಿಂದಲೇ ಸ್ಪರ್ಧಿಸುವೆ. ಗೆದ್ದೇ ಗೆಲ್ಲುವೆ ಎಂದು ಎ.ಟಿ.ರಾಮಸ್ವಾಮಿ ಅವರು ಶಪಥ ಮಾಡಿದರು.