ಬೆಂಗಳೂರು: ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿರುವುದರ ಜತೆ ತಂತ್ರಜ್ಞಾನದ ತವರುಮನೆ ಕೂಡ ಆಗಿದೆ. ಕೃಷಿ ಮತ್ತು ತಂತ್ರಜ್ಞಾನ ಒಟ್ಟಾದರೆ ಅಭಿವೃದ್ಧಿಗೆ ಇನ್ನಷ್ಟು ವೇಗ ದೊರೆಯುತ್ತದೆ ಎಂದು ಡಿಆರ್‌ಡಿಓ ವಿಶ್ರಾಂತ ಪ್ರಧಾನ ನಿರ್ದೇಶಕ ಡಾ. ಕೆ.ಡಿ.ನಾಯಕ್ ತಿಳಿಸಿದರು.
ನಗರದ ಕಟ್ಟಿಗೇನಹಳ್ಳಿಯ ರೇವಾ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ರೇವಾ ಪ್ರಾಜೆಕ್ಟ್ ಎಕ್ಸ್‌ಪೋ-2018 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿಗಳ ತಾಂತ್ರಿಕ ಕ್ರಿಯಾಶೀಲತೆ ಅವರ ಪ್ರಾತ್ಯಕ್ಷಿಕೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಪ್ರದರ್ಶನಗೊಂಡಿರುವ ಪ್ರತಿಯೊಂದು ಯೋಜನೆ ಗಮನಿಸಿದಾಗ ಇದೊಂದು ನವ್ಯ ತಂತ್ರಜ್ಞಾನದ ಜಾತ್ರೆ ಎನಿಸುತ್ತದೆ ಎಂದರು.
ಕುಲಪತಿ ಡಾ. ಶ್ಯಾಮರಾಜು ಮಾತನಾಡಿ, ರೇವಾ ಎಕ್ಸ್‌ಪೋ ವಿದ್ಯಾರ್ಥಿಗಳ ಸಾಧನೆಯ ವಿಚಾರಧಾರೆಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಇಲ್ಲಿ ಪ್ರದರ್ಶನಗೊಂಡಿರುವ ಪ್ರಾತ್ಯಕ್ಷಿಕೆಗಳು ಸಮಾಜಕ್ಕೆ ಉಪಯುಕ್ತವೆನಿಸುತ್ತವೆ. ಪ್ರತಿ ವರ್ಷ ಒಂದು ವಿಷಯವನ್ನು ಆಧಾರವಾಗಿಟ್ಟುಕೊಂಡು ಪ್ರರ್ದಶನ ಏರ್ಪಡಿಸಲಾಗುತ್ತದೆ.
ಈ ವರ್ಷ ಡಿಜಿಟಲ್ ರೇವಾ ವಿಷಯ ಆಯ್ಕೆ ಮಾಡಲಾಗಿದೆ. ವಿಜ್ಞಾನ, ತಂತ್ರಜ್ಞಾನದ ಮೂಲಕ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯುವುದಕ್ಕೆ ಸಾಧ್ಯವಿದೆ ಎನ್ನುವುದನ್ನು ರೇವಾ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ ಎಂದು ನುಡಿದರು.
ಎರಡು ದಿನಗಳ ಮೇಳದಲ್ಲಿ ವಿದ್ಯಾರ್ಥಿಗಳು ಸಿದ್ಧಪಡಿಸಿರುವ 500 ಮಾದರಿಗಳನ್ನು ಪ್ರದರ್ಶಿಸಲಾಯಿತು. ಇಸ್ರೋ, ಎನ್‌ಎಎಲ್, ಬಿಇಎಲ್, ಬಿಎಚ್‌ಇಎಲ್ ಸೇರಿದಂತೆ ಸರ್ಕಾರಿ ಹಾಗೂ ಖಾಸಗಿ ತಾಂತ್ರಿಕ ಕಂಪನಿಗಳ ಸಹಭಾಗಿತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಎಂಜಿನಿಯರಿಂಗ್, ಮೆಕ್ಯಾನಿಕಲ್, ಕಂಪ್ಯೂಟರ್, ಸಿವಿಲ್ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶನದಲ್ಲಿ ಪಾಲ್ಗೊಂಡು ನೂತನ ಅನ್ವೇಷಣೆಗಳನ್ನು ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಉಪಕುಲಪತಿ ಡಾ. ಎಸ್.ವೈ. ಕುಲಕರ್ಣಿ, ರಿಜಿಸ್ಟಾರ್ ಡಾ. ಎಂ. ಧನಂಜಯ್, ತರಬೇತಿ ಮತ್ತು ಯೋಜನಾ ವಿಭಾಗ ಡೀನ್ ಡಾ.ಎನ್. ರಮೇಶ್ ಒಳಗೊಂಡು ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.