Advertisement

ರೇವಣ್ಣ “ಕುರ್ಚಿ’ಕಾಲೆಳೆದ ಬಿಜೆಪಿ

11:54 AM Jul 05, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕೇಂದ್ರ ಬಿಂದುವಾಗಿರುವ ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ವಿಧಾನಸಭೆಯಲ್ಲಿ ತಮಗೆ ನೀಡಿದ ಆಸನದಲ್ಲಿ ಕುಳಿತುಕೊಳ್ಳದೇ ಇರುವ ವಿಷಯ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.

Advertisement

ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ಬಿಜೆಪಿಯ ಜಗದೀಶ್‌ ಶೆಟ್ಟರ್‌ ಮಾತನಾಡಿ, ಅಧಿವೇಶನ 10 ದಿನದ ಬದಲು 9 ದಿನ ಮಾಡಿದ್ದಾರೆ. ಇದರ ಹಿಂದೆ ರೇವಣ್ಣ ಅವರ ಜ್ಯೋತಿಷಿಗಳ ಸಲಹೆ ಇರಬಹುದು ಎಂದರು.

ಮಧ್ಯಪ್ರವೇಶಿಸಿದ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ರೇವಣ್ಣ ಇದುವರೆಗೂ ಅವರಿಗೆ ನೀಡಿದ ಆಸನದಲ್ಲಿ ಕುಳಿತುಕೊಂಡಿಲ್ಲ. ಅಲ್ಲಿಯೂ ಏನಾದರೂ ವಾಸ್ತು ದೋಷವಿದೆಯೇ ಎಂಬುದನ್ನು ಸಭಾಧ್ಯಕ್ಷರು ಪರಿಶೀಲಿಸಬೇಕು ಎಂದರು. ಪ್ರತಿಕ್ರಿಯಿಸಿದ ಸ್ಪೀಕರ್‌ ರಮೇಶ್‌ ಕುಮಾರ್‌, ಸದನದಲ್ಲಿ ಹಿರಿತನದ ಆಧಾರದಲ್ಲಿ ಕುರ್ಚಿ ಹಂಚಲಾಗಿದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ನಂತರ ಕಾನೂನು ಸಂಸದೀಯ ವ್ಯವಹಾರಗಳ ಸಚಿವರಿಗೆ ಅವಕಾಶ ನೀಡಲಾಗುತ್ತದೆ. ಆದರೆ, ದೇಶಪಾಂಡೆ ಹಾಗೂ ಡಿ.ಕೆ.ಶಿವಕುಮಾರ್‌ ಹಿರಿಯ ಸದಸ್ಯರಾಗಿರುವುದರಿಂದ ಅವರಿಗೆ ಮೊದಲು ಕುರ್ಚಿ ಹಂಚಿಕೆ ಮಾಡಿ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕೃಷ್ಣ ಬೈರೇಗೌಡಗೆ ಅವಕಾಶ ಕಲ್ಪಿಸಲಾಗಿದೆ. ಅವರ ನಂತರದ ಸ್ಥಾನದಲ್ಲಿ ರೇವಣ್ಣಗೆ ಕುರ್ಚಿ ಹಂಚಲಾಗಿದೆ. ಅವರಿಗೆ ಬೇಸರವಿದ್ದರೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಚರ್ಚಿಸಿ ಹೇಳಿದರೆ ಹಿರಿಯ ನಾಯಕರ ಪಕ್ಕದಲ್ಲಿ ಸ್ಥಳಾವಕಾಶ ಮಾಡಿಕೊಡಲಾಗುವುದು ಎಂದರು.

ಈ ವೇಳೆ ರೇವಣ್ಣ ಸದನದಲ್ಲಿ ಹಾಜರಿರಲಿಲ್ಲ. ನಂತರ ಸದನಕ್ಕೆ ಆಗಮಿಸಿದ ಎಚ್‌.ಡಿ.ರೇವಣ್ಣ ತಮಗೆ ಮೀಸಲಾಗಿದ್ದ ಕುರ್ಚಿಯಲ್ಲಿ ಕೂಡದೇ ಬೇರೆಯವರಿಗೆ ಮೀಸಲಾಗಿದ್ದ ಕುರ್ಚಿಯಲ್ಲಿ ಕುಳಿತುಕೊಂಡರು. ಇದನ್ನು ಗಮನಿಸಿದ ಮಾಧುಸ್ವಾಮಿ, ಸಭಾಧ್ಯಕ್ಷರೇ, ರೇವಣ್ಣ ಬೇರೆ ಕುರ್ಚಿಯಲ್ಲಿ ಕುಳಿತಿದ್ದಾರೆ ಎಂದಾಗ, ರೇವಣ್ಣ ತಮಗೆ ಮೀಸಲಿಟ್ಟ ಕುರ್ಚಿಯಲ್ಲಿ ಕುಳಿತುಕೊಳ್ಳದಿರುವುದಕ್ಕೆ ಕಾರಣ ಹೇಳಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದರು.

ವಾಸ್ತು ಸರಿಯಾಗೇ ಇದೆ: ರೇವಣ್ಣ ತಮಗೆ ಮೀಸಲಿಟ್ಟ ಆಸನದಲ್ಲಿ ಕುಳಿತುಕೊಳ್ಳದ ಬಗ್ಗೆ ಬೆಳಗ್ಗೆಯೂ ಚರ್ಚೆ ನಡೆಯಿತು. ಕೊನೆಯ ಸಾಲಿನಲ್ಲಿ ರೇವಣ್ಣ ಕುಳಿತಿದ್ದುದನ್ನು ಗಮನಿಸಿದ ಸ್ಪೀಕರ್‌, ಮೀಸಲಿಟ್ಟ ಸ್ಥಾನಕ್ಕೆ ಹೋಗುವಂತೆ ಸಲಹೆ ಮಾಡಿದರು. ಆದರೆ, ನನಗೆ ಹಿಂದಿನ ಸಾಲಿನಲ್ಲೇ ಕುರ್ಚಿ ಕೊಡಿ ಎಂದು ರೇವಣ್ಣ ಕೇಳಿದಾಗ, ಅದೆಲ್ಲಾ ಸಾಧ್ಯವಿಲ್ಲ. ನಿಮಗೆ ಕೊಟ್ಟಿರುವ ಸ್ಥಾನ ವಾಸ್ತು ಪ್ರಕಾರವೇ ಇದೆ. ಅಲ್ಲೇ ಕುಳಿತುಕೊಳ್ಳಿ ಎಂದರು.

Advertisement

ಸಿದ್ದು ದನಿ ಮಿಮಿಕ್ರಿ ಮಾಡಿದ್ದಾರೆ: ಅಪ್ಪಾಜಿಗೌಡ
ವಿಧಾನ ಪರಿಷತ್ತು: ಧರ್ಮಸ್ಥಳದ ಶಾಂತಿವನದಲ್ಲಿ ಸಮ್ಮಿಶ್ರ ಸರ್ಕಾರದ ಬಗ್ಗೆ ಹೊರಬಂದ ವಿಡಿಯೋದಲ್ಲಿ ಇರುವುದು ಸಿದ್ದರಾಮಯ್ಯ ಅವರ ಧ್ವನಿ ಅಲ್ಲ, ಯಾರೋ ಮಿಮಿಕ್ರಿ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದಾರೆ ಎಂದು ಜೆಡಿಎಸ್‌ ಸದಸ್ಯ ಅಪ್ಪಾಜಿಗೌಡ ಹೇಳಿದರು.

ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, 37 ಸ್ಥಾನ ಗೆದ್ದರೂ ಪ್ರಜಾಪ್ರಭುತ್ವದಲ್ಲಿ ಇರುವ ಅವಕಾಶವನ್ನು ಬಳಸಿಕೊಂಡು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಈ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ. ಅಸೂಯೆ ಬಿಟ್ಟು ರಚನಾತ್ಮಕ ಪ್ರತಿಪಕ್ಷವಾಗಿ ಕೆಲಸ ಮಾಡಿ ಎಂದು ಬಿಜೆಪಿಯವರಿಗೆ ಕಿವಿಮಾತು ಹೇಳಿದರು.

ನಾವು ಅಸೂಯೆ ಪಟ್ಟುಕೊಳ್ಳುತ್ತಿಲ್ಲ. ಸರ್ಕಾರದ ಅಸ್ತಿತ್ವ, ಆಯಸ್ಸು ಮತ್ತು ಬಜೆಟ್‌ ಮಂಡನೆ ಬಗ್ಗೆ ಶಾಂತಿವನದಲ್ಲಿ ಸಿದ್ದರಾಮಯ್ಯನವರೇ ಹೇಳಿದ್ದಾರೆ ಎಂದು ಬಿಜೆಪಿ ಸದಸ್ಯರು ತಿರುಗೇಟು ನೀಡಿದರು. “ಅದು ಸಿದ್ದರಾಯ್ಯನವರ ಧ್ವನಿ ಅಲ್ಲ, ಯಾರೋ ಮಿಮಿಕ್ರಿ ಮಾಡಿ ವಿಡಿಯೋ ರಿಲೀಸ್‌ ಮಾಡಿದ್ದಾರೆ ಎಂದು ಅಪ್ಪಾಜಿಗೌಡ ಹೇಳುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲರೂ ಜೋರಾಗಿ ನಕ್ಕರು.

ಶಾಸಕರ ಭವನಕ್ಕೆ ಸಮಯ ನಿಗದಿಗೆ ಸ್ಪೀಕರ್‌ ಸಮರ್ಥನೆ ಶಾಸಕರ ಭವನಕ್ಕೆ ಸಾರ್ವಜನಿಕರ ವಾಹನ ಮತ್ತು ಸಾರ್ವಜನಿಕರ ಪ್ರವೇಶಕ್ಕೆ ಸಮಯ ನಿಗದಿ ಮಾಡಿರುವ ನಿರ್ಬಂಧ ತೆರವುಗೊಳಿಸುವಂತೆ ಶಾಸಕರ ಕೋರಿಕೆಯನ್ನು ಸ್ಪೀಕರ್‌ ರಮೇಶ್‌ಕುಮಾರ್‌ ತಳ್ಳಿಹಾಕಿದ್ದಾರೆ. ಬುಧವಾರ ಈ ಕುರಿತಂತೆ ಶಾಸಕರು ಮಾಡಿಕೊಂಡ ಮನವಿಗೆ ಪ್ರತಿಕ್ರಿಯಿಸಿದ ಸ್ಪೀಕರ್‌, ಶಾಸಕರ ಭವನದಲ್ಲಿ ಅನೇಕ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿವೆ. 

ಎಲ್ಲವನ್ನೂ ಗಮನದಲ್ಲಿಟ್ಟುಕೊಂಡೇ ನಿರ್ಬಂಧ ಹೇರಿದ್ದೇನೆ. ಜನಪ್ರತಿನಿಧಿಗಳಾದ ನಮಗೆ ಖಾಸಗಿತನ ಇರಬೇಕು. ಹಾಗಾಗಿ ಜನರು ಬೆಳಗ್ಗೆ 9 ಗಂಟೆ ನಂತರ ಬಂದರೆ ತೊಂದರೆಯಿಲ್ಲ ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next