Advertisement

ಲಕ್ಷದ್ವೀಪದಿಂದ ಮಂಗಳೂರಿಗರು ವಾಪಸ್‌

09:43 AM May 29, 2020 | mahesh |

ಮಂಗಳೂರು: ವಿವಿಧ ಕಾರಣಗಳಿಗೆ ಲಕ್ಷದ್ವೀಪಕ್ಕೆ ತೆರಳಿ ಲಾಕ್‌ಡೌನ್‌ ಪರಿಣಾಮ ಎರಡು ತಿಂಗಳಿಂದ ಅಲ್ಲಿ ಬಾಕಿಯಾಗಿದ್ದ ಮಂಗಳೂರಿನ 19 ಮಂದಿ ಗುರುವಾರ ನಗರಕ್ಕೆ ಮರಳಿದ್ದಾರೆ. ಲಾಕ್‌ಡೌನ್‌ ಘೋಷಣೆ ಬಳಿಕ ಮಂಗಳೂರು- ಲಕ್ಷದ್ವೀಪ ನಡುವಿನ ಪ್ರಯಾಣಿಕರ ಹಡಗು ಸಂಚಾರ ಸ್ಥಗಿತವಾಗಿತ್ತು. ಮೂವರು ಮಹಿಳೆಯರೂ ಸೇರಿದಂತೆ 19 ಮಂದಿ ಲಕ್ಷದ್ವೀಪದ ಕವರತ್ತಿ, ಅಗಟ್ಟಿ ಮತ್ತು ಕಿಲ್ತಾನ್‌ ದ್ವೀಪಗಳಲ್ಲಿ ಬಾಕಿಯಾಗಿದ್ದರು.

Advertisement

ವ್ಯಾಪಾರ ಹಾಗೂ ನಿರ್ಮಾಣ ಕೆಲಸಕ್ಕೆಂದು ತೆರಳಿ ದವರು ಅಲ್ಲಿಗೆ ಕರೆಸಿಕೊಂಡವರ ವಾಸ್ತವ್ಯದಲ್ಲಿ ಹಾಗೂ ಸಂಬಂಧಿಕರ ಮನೆಗೆಂದು ತೆರಳಿದವರು ಅಲ್ಲಿಯೇ ಉಳಿದುಕೊಂಡಿದ್ದರು. ಲಕ್ಷದ್ವೀಪದಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣಗಳಿಲ್ಲ. ಮಂಗಳೂರಿನಲ್ಲಿ ಬಾಕಿಯಾಗಿದ್ದ ಲಕ್ಷದ್ವೀಪದ 89 ಮಂದಿಯನ್ನು ಮೇ 11ರಂದು ಜಿಲ್ಲಾಧಿಕಾರಿಗಳ ವಿಶೇಷ ಅನುಮತಿಯೊಂದಿಗೆ ಕಳುಹಿಸಿಕೊಡಲಾಗಿತ್ತು. ಲಕ್ಷದ್ವೀಪದಿಂದ ಬಂದವರನ್ನು 7 ದಿನಗಳ ಗೃಹ ನಿಗಾದಲ್ಲಿ ಇರುವಂತೆ ಸೂಚಿಸಲಾಗಿದೆ.

ಹೂ ನೀಡಿ ಸ್ವಾಗತ
ಪ್ರಯಾಣಿಕರನ್ನು ಶಾಸಕರಾದ ವೇದದ್ಯಾಸ ಕಾಮತ್‌, ಐವನ್‌ ಡಿ’ಸೋಜಾ, ಮೇಯರ್‌ ದಿವಾಕರ್‌ ಪಾಂಡೇಶ್ವರ ಹೂ ನೀಡಿ ಸ್ವಾಗತಿಸಿದರು. ಎಲ್ಲರನ್ನೂ ಹಡಗಿನಿಂದ ಇಳಿಯುವ ಮುನ್ನ ತಪಾಸಣೆಗೊಳಪಡಿಸಲಾಯಿತು. ಮಂಗಳೂರಿನ ಪಿಎಲ್‌ ಶಿಪ್ಪಿಂಗ್‌ ಆ್ಯಂಡ್‌ ಲಾಜಿಸ್ಟಿಕ್ಸ್‌ ಲಿ.ನ ಶ್ರೀನಿವಾಸ್‌ ಕುಲಾಲ್‌ ಅವರು ಶಿಪ್‌ ಆಗಮನದ ಜವಾಬ್ದಾರಿ ನಿರ್ವಹಿಸಿದ್ದರು. ಹಳೆ ಬಂದರಿನ ಅಧಿಕಾರಿ ಗೌಸ್‌ ಆಲಿ, ಸಹಾಯಕ ಅಧಿಕಾರಿ ನಿರಂಜನ ಮೂರ್ತಿ ಉಪಸ್ಥಿತರಿದ್ದರು.

ಸಾಮಾಜಿಕ ಅಂತರ ನಿರ್ಲಕ್ಷ್ಯ
ವಾಪಸಾದವರನ್ನು ಸ್ವಾಗತಿಸಲು ಶಾಸಕರು, ಅಧಿಕಾರಿಗಳು, ಕೆಲವು ಮಂದಿ ಜನಪ್ರತಿನಿಧಿಗಳ ಬೆಂಬಲಿಗರು ಸೇರಿದಂತೆ 50ಕ್ಕೂ ಅಧಿಕ ಮಂದಿ ಹಳೆ ಬಂದರಿನಲ್ಲಿ ನೆರೆದಿದ್ದರು. ಆದರೆ ಈ ವೇಳೆ ಸಾಮಾಜಿಕ ಅಂತರ ಪಾಲನೆ ಆಗಿಲ್ಲ ಎನ್ನುವ ಆರೋಪವೂ ಕೇಳಿಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next