ಜೀವನ ಅಂದ್ರೆ ಕೆಲವೊಮ್ಮೆ ಎಲ್ಲವೂ ಇರುತ್ತದೆ. ನೆಮ್ಮದಿ,ಸುಖ,ಸಂತಸ, ಹೀಗಿರುವಾಗಲೇ ಅಂದೊಮ್ಮೆ ಬದುಕಿಗೆ ಸವಾಲಾಗಿ ಕೆಲವೊಂದು ಸಮಸ್ಯೆಗಳು ಎದುರಾಗಿ ಬರುತ್ತವೆ. ಆ ಸಮಸ್ಯೆಗಳನ್ನು ಎದುರಿಸುತ್ತಲೇ ನೆಮ್ಮದಿಯಿಂದ ಇದ್ದ ಜೀವಗಳು ಕುಗ್ಗಿ ಕರಗಿ, ಸೋತು ಬಿಡುತ್ತವೆ.
ಅಹ್ಮದಾಬಾದ್ ನ ಪೃಥ್ವಿ ಟಹ್ಕಾರ್ ಬದುಕು ಕೂಡ ಹೀಗೆಯೇ. ಮಾಧ್ಯಮ ವರ್ಗದಲ್ಲಿ ಬೆಳೆದು, ಕಷ್ಟ ಪಟ್ಟು ಡ್ರಾಮರ್ ಕಲೆ ಹಾಗೂ ಹಾಡುಗಾರನಾಗಿ ತನ್ನ 21 ವಯಸ್ಸಿನಲ್ಲಿ ಲಂಡನ್ ಗೆ ಪಯಣ ಬೆಳೆಸಿ ಅಲ್ಲಿ ಸಂಜೆಯ ಬಳಿಕ ಡ್ರಾಮರ್ ಹಾಗೂ ಸಿಂಗರ್ ಆಗಿ ತನ್ನ ಬದುಕಿಗೊಂದು ಕೆಲಸ ಹುಡುಕಿ, ಭಾರತದಲ್ಲಿರುವ ತನ್ನ ಹೆಂಡತಿ ಮಕ್ಕಳನ್ನು ನೋಡಿಕೊಳ್ಳುತ್ತಾರೆ.
ಬೆಳಗ್ಗೆಯಿಂದ ಸಂಜೆಯವರೆಗೆ ಯಾವುದೇ ಕೆಲಸ ಇಲ್ಲದಿದ್ದಾಗ, ಪೃಥ್ವಿ ಲಂಡನ್ ನ ಪಬ್ ಗಳಲ್ಲಿ ಪಾರ್ಟ್ ಕೆಲಸ ಹುಡುಕಿ ಅಲ್ಲಿ ವಿವಿಧ ಬಗೆಯ ಬರ್ಗರ್ ಹಾಗೂ ಇತರ ತಿಂಡಿಗಳನ್ನು ಮಾಡಲು ಕಲಿಯುತ್ತಾ, ಕೆಲಸವನ್ನು ಮಾಡುತ್ತಾರೆ. ಈ ಕೆಲಸದಲ್ಲಿ ಪಳಗಿದ ಅನುಭವಿಯಾಗುತ್ತಾರೆ ಪೃಥ್ವಿ.
ಬದುಕಿಗೆ ಕೊಳ್ಳಿಯಿಟ್ಟ ಕೋವಿಡ್ : ಹತ್ತು ವರ್ಷಗಳ ಕಾಲ ಲಂಡನ್ ಹಾಗೂ ಅಮೆರಿಕಾದಲ್ಲಿ ನೆಲೆಸಿದ್ದ ಪೃಥ್ವಿ ಅವರು ಭಾರತಕ್ಕೆ ಬರಲು ಒಂದು ದೊಡ್ಡ ಅಪಘಾತದ ಸುದ್ದಿ ಕಾರಣವಾಗಿತ್ತು. ಅದು ಪೃಥ್ವಿ ಅವರ ಹೆಂಡತಿಗೆ ಸ್ತನ ಕ್ಯಾನ್ಸರ್ ರೋಗ ಆವರಿಸಿಕೊಂಡಿರುವ ಸುದ್ದಿ. ಈ ಕಾರಣದಿಂದ 2020 ಮಾರ್ಚ್ ನಲ್ಲಿ ಭಾರತಕ್ಕೆ ಬಂದ ಪೃಥ್ವಿ ಮತ್ತೆ ಡ್ರಾಮರ್ ನಾಗಿ ವೇದಿಕೆಯಲ್ಲಿ ಮೆರೆಯಲು, ಸಿಂಗರ್ ನಾಗಿ ಮಿಂಚಲು ಕಷ್ಟವಾಗುವ ಪರಿಸ್ಥಿತಿ ಕೋವಿಡ್ ತಂದಿಡುತ್ತದೆ.
ದಿನ ಕಳೆದಂತೆ ಪೃಥ್ವಿ ಹೆಂಡತಿಯ ಚಿಕಿತ್ಸೆಯ ವೆಚ್ಚದ ಖರ್ಚು ಹೆಚ್ಚಾಗುತ್ತಾ ಹೋಗುತ್ತದೆ. ಇದ್ದ ಬದ್ದ ಹಣ ಖಾಲಿಯಾಗುತ್ತಾ ಹೋದಾಗ, ಪೃಥ್ವಿ ಅವರಿಗೆ ಚಿಂತೆ ಕಾಡುತ್ತದೆ. ಅದೊಂದು ದಿನ ಪೃಥ್ವಿ ಅವರ ಮಗಳು ನೀವೊಂದು ಫುಡ್ ಸ್ಟಾಲ್ ತೆರೆಯಿರಿ ಎಂದು ಸಲಹೆ ನೀಡುತ್ತಾಳೆ. ಇದೇ ಮಾತನ್ನು ಗಂಭೀರವಾಗಿ ಚಿಂತಿಸಿದ ಪೃಥ್ವಿ ಮೊದಲು ತಾನು ಯಾವ ಫುಡ್ ಸ್ಟಾಲ್ ನ್ನು ಇಡಬಹುದು ಎಂದು ಯೋಚಿಸಿ, ಕೊನೆಗೆ ಇಲ್ಲೆಲ್ಲೂ ಸುಲಭವಾಗಿ ಸಿಗದ ಬರ್ಗರ್ ನ್ನು ತಯಾರಿಸುವ ಸ್ಟಾಲ್ ವೊಂದನ್ನು ತೆರೆಯುತ್ತಾರೆ. ವ್ಯಾಪಾರ ಆರಂಭಿಸಿದ ಮೂರು ತಿಂಗಳ ಬಳಿಕವೂ ಅಂದುಕೊಂಡ ಮಟ್ಟಿಗೆ ಯಶಸ್ಸು ಸಿಗದೆ ಇದ್ದಾಗ, ಪೃಥ್ವಿ ಹೊಸ ಯೋಚನೆಯೊಂದನ್ನು ಮಾಡುತ್ತಾರೆ. ಅದುವೇ ತನ್ನ ಹಳೆಯ ಕಾರನ್ನು ನವೀಕರಣಗೊಳಿಸಿ ಅದನ್ನು ಸಂಚಾರಿ ಅಡುಗೆ ಮನೆಯನ್ನಾಗಿ ಮಾಡುವುದು.
ತನ್ನ ಕಾರಿನಲ್ಲೇ ಬರ್ಗರ್ ನ್ನು ತಯಾರಿಸಿ, ಐಐಎಂ ಅಹ್ಮದಾಬಾದ್ ನ ಮುಂದೆ ಬೆಳಗ್ಗೆ 9 ಗಂಟೆಗೆ ನಿಂತರೆ ಮನೆಗೆ ಬರುವುದು ಒಂದಿಷ್ಟು ಲಾಭಗಳಿಸಿ ರಾತ್ರಿ 10 ಬಳಿಕವೇ..ಅಮೇರಿಕನ್, ಮೆಕ್ಸಿಕನ್, ಹೀಗೆ ನಾನಾ ಬರ್ಗರ್ ಗಳು 60 ರೂಪಾಯಿಯಿಂದ 250 ರೂಪಾಯಿವರಗಿನ ಫುಡ್ ಗಳು ಇವರ ಸ್ಟಾಲ್ ನಲ್ಲಿ ಸಿಗುತ್ತದೆ.
ಪೃಥ್ವಿ ಅವರಿಂದು ತಮ್ಮ ಬರ್ಗರ್ ವ್ಯಾಪಾರದಿಂದ ಸಂತಸದ ಜೀವನವನ್ನು ನಡೆಸುತ್ತಿದ್ದಾರೆ. ‘ಫಕೀರ್ಸ್ ಬರ್ಗರ್ ವಾಲಾ’ ಇಂದು ಅಹ್ಮದಾಬಾದ್ ನಲ್ಲಿ ಫೇಮಸ್.
– ಸುಹಾನ್ ಶೇಕ್