Advertisement

24 ಗಂಟೆಗಳಲ್ಲಿ ಭಾರತಕ್ಕೆ ಮರಳುವೆ…

01:23 AM Jul 16, 2019 | Lakshmi GovindaRaj |

ಬೆಂಗಳೂರು: ಸೂಕ್ತ ಭದ್ರತೆ ನೀಡಿದರೆ ಇನ್ನು 24 ಗಂಟೆಗಳಲ್ಲಿ ಭಾರತಕ್ಕೆ ಬರಲು ಸಿದ್ಧನಿದ್ದೇನೆ ಎಂದು ಐಎಂಎ ಪ್ರಕರಣದ ವಂಚಕ ಮನ್ಸೂರ್‌ ಖಾನ್‌ ಹೇಳಿದ್ದಾನೆ.

Advertisement

ಆರೋಪಿ ಮನ್ಸೂರ್‌ ಖಾನ್‌ ತನ್ನ “ಐಎಂಎ ಗ್ರೂಪ್‌’ ಎಂಬ ಯುಟ್ಯೂಬ್‌ ಖಾತೆ ಮೂಲಕ ವಿಡಿಯೋ ಬಿಡುಗಡೆ ಮಾಡಿದ್ದು, ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇದೆ. ಮುಂದಿನ 24 ಗಂಟೆಯೊಳಗೆ ಭಾರತಕ್ಕೆ ಬರಲು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದೇನೆ. ಒಂದು ವೇಳೆ ಬೆಂಗಳೂರಿಗೆ ಬಂದರೆ ಪೊಲೀಸರು ಸೂಕ್ತ ಭದ್ರತೆ ನೀಡುತ್ತಾರಾ ಎಂದು ಮನ್ಸೂರ್‌ ಖಾನ್‌ ಪ್ರಶ್ನಿಸಿದ್ದಾನೆ.

ಶೀಘ್ರ ವಾಪಸ್‌: ಬಹಳ ದಿನಗಳ ಹಿಂದೆಯೇ ಭಾರತಕ್ಕೆ ವಾಪಸ್‌ ಬರಲು ಪ್ರಯತ್ನಿಸುತ್ತಿದ್ದೇನೆ. ಆದರೆ, ಮಧುಮೇಹ ಹಾಗೂ ಹೃದಯ ಸಂಬಂಧಿ ಕಾಯಿಲೆ ತೀವ್ರವಾಗಿ ಉಲ್ಬಣಗೊಂಡಿದ್ದು, ಹೃದಯದಲ್ಲಿ ಮೂರು ರಂಧ್ರಗಳಾಗಿವೆ.

ಇದರೊಂದಿಗೆ ಮಧುಮೇಹಕ್ಕೂ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದೇನೆ. ಪ್ರಸ್ತುತ ಪರಿಸ್ಥಿಯಲ್ಲಿ ಚಿಕಿತ್ಸಾ ವೆಚ್ಚ ಭರಿಸಲು ನನ್ನ ಬಳಿ ಹಣವಿಲ್ಲ. ಸದ್ಯ ಇದೀಗ ಚೇತರಿಸಿಕೊಳ್ಳುತ್ತಿದ್ದರಿಂದ ವಿಡಿಯೋ ಮಾಡುತ್ತಿದ್ದೇನೆ. ಗ್ರಾಹಕರು ದೇವರ ಮೇಲೆ ನಂಬಿಕೆ ಇಡಿ. ಈ ಹಿಂದೆ ವಿಡಿಯೋದಲ್ಲಿ ಹೇಳಿದಂತೆ ಭಾರತಕ್ಕೆ ಬರುತ್ತೇನೆ ಎಂದಿದ್ದಾನೆ.

ದೇಶ ಬಿಟ್ಟಿದ್ದು ತಪ್ಪು: “ದೇಶ ಬಿಟ್ಟು ಹೋಗಿದ್ದು ದೊಡ್ಡ ತಪ್ಪು. ಅದಕ್ಕೆ ಕಾರಣ ರಾಜಕೀಯ ಮುಖಂಡರು, ಸಮಾಜಘಾತುಕ ಶಕ್ತಿಗಳು. ನನ್ನ ಕುಟುಂಬ ಸದಸ್ಯರು ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ಯಾರಿಂದ ಹಣ ಬರಬೇಕಿದೆ(ರಿಕವರಿ) ಎಂಬ ಪಟ್ಟಿಯೊಂದನ್ನು ಸಿದ್ದಪಡಿಸಿದ್ದೇನೆ.

Advertisement

ಅದನ್ನು ನ್ಯಾಯಾಂಗಕ್ಕೆ ಕೊಡುತ್ತೇನೆ. ನನ್ನ ಬಳಿಯಿರುವ ಸ್ಥಿರಾಸ್ತಿ ಮತ್ತು ಚರಾಸ್ತಿ ಮಾರಾಟ ಮಾಡಿ ಹೂಡಿಕೆದಾರರಿಗೆ ಅವರ ಹಣವನ್ನು ನ್ಯಾಯಾಂಗದ ಮೂಲಕವೇ ವಾಪಸ್‌ ನೀಡುತ್ತೇನೆ. ಐಎಂಎ ಆಸ್ತಿ ಇರುವ ಪಟ್ಟಿಯೊಂದನ್ನು ತಯಾರಿಸಿದ್ದೇನೆ.

ಅದನ್ನು ಪೊಲೀಸ್‌ ಇಲಾಖೆಗೆ ಕೊಡುತ್ತೇನೆ. ಈ ಆಸ್ತಿಯನ್ನು ಮಾರಾಟ ಮಾಡಿ ಹೂಡಿಕೆದಾರರಿಗೆ ಸಂಪೂರ್ಣ ಹಣ ವಾಪಸ್‌ ಮಾಡುತ್ತೇನೆ. ನಾನು ಮತ್ತೆ ವಾಪಸ್‌ ಬರುತ್ತಿರುವುದು ಹಣ ಹಿಂದಿರುಗಿಸಲು” ಎಂದು ಹೇಳಿ ಕಣ್ಣೀರು ಸುರಿಸಿದ್ದಾನೆ.

“ಕಾನೂನು ಹೋರಾಟ ಮಾಡಲು ನಾನು ಸಿದ್ಧನಿದ್ದು, ಸದ್ಯ ನನ್ನ ಪರ ವಕಾಲತ್ತು ವಹಿಸಲು ವಕೀಲರು ಇಲ್ಲದಂತಾಗಿದೆ. ಭಾರತಕ್ಕೆ ಬಂದಾಗ ಅದರ ವ್ಯವಸ್ಥೆ ಆಗುತ್ತದೆ ಎಂದು ನಂಬಿದ್ದೇನೆ. ಆಸ್ತಿ ಹಾಗೂ ಹಣವನ್ನೆಲ್ಲ ಜಪ್ತಿ ಮಾಡಿಸಿ, ಗ್ರಾಹಕರ ಖಾತೆಗೆ ನೇರವಾಗಿ ಜಮೆ ಮಾಡುತ್ತೇನೆ.’ ಎಂದು ಮನ್ಸೂರ್‌ ಖಾನ್‌ ತಾನು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ.

ಕಳೆದ ಜೂನ್‌ 23 ರಂದು ಬಿಡುಗಡೆ ಮಾಡಿದ್ದ ವಿಡಿಯೋದಲ್ಲಿ ಆರೋಪಿ ಶೀಘ್ರದಲ್ಲೇ ಬೆಂಗಳೂರಿಗೆ ವಾಪಸ್‌ ಆಗಲಿದ್ದು, ವಿಶೇಷ ತನಿಖಾ ತಂಡದ (ಎಸ್‌ಐಟಿ) ತನಿಖೆಗೆ ಸಹಕಾರ ನೀಡುವುದಾಗಿ ಹೇಳಿದ್ದ ಎಂದು ಎಸ್‌ಐಟಿ ತಿಳಿಸಿದೆ.

ಭದ್ರತೆ ಕೊಡಿ ಈಗಲೇ ಬರ್ತೇನೆ: ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಚುರುಕು ಗೊಳಿಸುತ್ತಿರುವ ಬೆನ್ನಲ್ಲೇ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್‌ ಖಾನ್‌ ಅಜ್ಞಾತ ಸ್ಥಳದಲ್ಲೇ ಕುಳಿತು ಸೋಮವಾರ ಮತ್ತೂಂದು ವಿಡಿಯೋ ಬಿಡುಗಡೆ ಮಾಡಿದ್ದು, “ಬೆಂಗಳೂರು ಪೊಲೀಸರು ಭದ್ರತೆ ನೀಡಿದರೆ 24 ಗಂಟೆಗಳಲ್ಲಿ ನಾನು ಭಾರತಕ್ಕೆ ಬರಲು ಸಿದ್ದನಿದ್ದೇನೆ’ ಎಂದು ಹೇಳುವ ಮೂಲಕ ಹೂಡಿಕೆದಾರರು ಹಾಗೂ ಪೊಲೀಸರಲ್ಲಿ ಅಚ್ಚರಿ ಮೂಡಿಸಿದ್ದಾನೆ.

ಆದರೆ, ಆರೋಪಿ ಬಿಡುಗಡೆ ಮಾಡಿರುವ ವಿಡಿಯೋ ಪರಿಶೀಲಿಸುತ್ತಿರುವ ಎಸ್‌ಐಟಿ ಅಧಿಕಾರಿಗಳು, ಆತ ಯಾವುದೇ ಕಾರಣಕ್ಕೂ ಭಾರತಕ್ಕೆ ಬರುವುದಿಲ್ಲ. ಸುಳ್ಳು ಹೇಳುತ್ತಿದ್ದಾನೆ. ಈ ಹಿಂದೆಯೂ ಬರುವುದಾಗಿ ಹೇಳಿ ತಪ್ಪಿಸಿಕೊಂಡಿದ್ದಾನೆ ಎಂದು ತನಿಖಾ ತಂಡದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next