ಬೆಂಗಳೂರು: ರಾಜ್ಯದ ವಿವಿಧೆಡೆ ನಡೆದಿದ್ದ ರೈತ ಹೋರಾಟ, ಮತೀಯ ಗಲಭೆಗಳು, ಗುಂಪು ಘರ್ಷಣೆ ಸೇರಿದಂತೆ ವಿವಿಧ ಹೋರಾಟಗಾರರ ಮೇಲೆ ದಾಖಲಿಸಿದ್ದ 127 ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆಯಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಹಿಂತೆಗೆದುಕೊಂಡ 127 ಪ್ರಕರಣಗಳ ಪೈಕಿ 60 ಪ್ರಕರಣಗಳು ರೈತರ ಹೋರಾಟಕ್ಕೆ ಸಂಬಂಧಿಸಿದ್ದಾಗಿದ್ದು, ಮಹದಾಯಿ ನದಿ ನೀರು ವಿಚಾರಕ್ಕೆ ಸಂಬಂಧಿಸಿದಂತೆ ನರಗುಂದ, ನವಲಗುಂದ ಮತ್ತಿತರೆಡೆ ದಾಖಲಿಸಿದ ಪ್ರಕರಣಗಳು, ಕಾವೇರಿ ಹೋರಾಟಕ್ಕೆ ಸಂಬಂಧಿತ ಕೆಲವು ಪ್ರಕರಣಗಳನ್ನು ಅಭಿಯೋಜನೆಯಿಂದ ಹಿಂದಕ್ಕೆ ಪಡೆಯಲಾಗಿದೆ.
ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಅಭಿಯೋಜನೆಯಿಂದ ಹಿಂದಕ್ಕೆ ಪಡೆದ ಪ್ರಕರಣಗಳಲ್ಲಿ 60 ರೈತರ ಹೋರಾಟಕ್ಕೆ ಸಂಬಂಧಿಸಿದ್ದಾದರೆ 29 ಪ್ರಕರಣಗಳು ಗುಂಪು ಘರ್ಷಣೆ ಕುರಿತಾಗಿರುವುದು. ಅದೇ ರೀತಿ ಮಲ್ಲಿಕಾರ್ಜುನ ಬಂಡೆ ವಿರುದ್ಧ ದಾಖಲಿಸಿದ ಒಂದು ಪ್ರಕರಣವೂ ಸೇರಿದೆ. ಕೋಮು ಘರ್ಷಣೆಗೆ ಸಂಬಂಧಿಸಿದ ಕೆಲವು ಪ್ರಕರಣಗಳನ್ನು ವಾಪಸ್ ಪಡೆಯಲಾಗಿದೆ. ಆದರೆ, ಇದರಲ್ಲಿ ಪಿಎಫ್ಐ, ಎಸ್‌ಡಿಪಿಐ ಮತ್ತಿತರ ಸಂಘಟನೆಗಳಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಶೂ, ಸಾಕ್ಸ್ ಖರೀದಿಗೆ 130 ಕೋಟಿ:
2018-19ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಓದುತ್ತಿರುವ 48 ಲಕ್ಷ ಮಕ್ಕಳಿಗೆ 130 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಂದು ಜತೆ ಶೂ ಮತ್ತು ಸಾಕ್ಸ್ ವಿತರಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ.