Advertisement

ಯಕ್ಷಗಾನದಲ್ಲಿ ಪುಂಗಿಯ ಪುನರಾಗಮನ

04:13 PM Jul 07, 2017 | |

ಸುಮಾರು ಆರೇಳು ದಶಕಗಳ ಹಿಂದೆ ಕರಾವಳಿ ಕನ್ನಡ ಜಿಲ್ಲೆಗಳ ಯಕ್ಷಗಾನದ ಹಿಮ್ಮೇಳ ದಲ್ಲಿ ಆಧಾರ ಶ್ರುತಿಯಾಗಿ ಪುಂಗಿ (ಸೋರೆ ಬುರುಡೆ)ಯನ್ನು ಬಳಸುತ್ತಿದ್ದರು. ಪುಂಗಿಯನ್ನು ಕಾಡು ಸೋರೆಕಾಯಿಯಿಂದ ತಯಾರಿಸುತ್ತಾರೆ. ಇದು ಮಲೆನಾಡಿನಲ್ಲಿ ಮಾತ್ರ ಬೆಳೆಯುತ್ತದೆ. ಇದು ಊರಸೋರೆಯಿಂದ ಗಾತ್ರದಲ್ಲಿ ಕಿರಿದು. ಇದರ ಸಿಪ್ಪೆ ತುಂಬ ಗಟ್ಟಿ. ಈ ಕಾಯಿಯನ್ನು ಹಿಂದಿನಿಂದಲೂ ವಾದ್ಯೋಪಕರಣ ತಯಾರಿಗೆ ಬಳಸುತ್ತಿದ್ದರು.

Advertisement

ಯಕ್ಷಗಾನದಲ್ಲಿ ಬಳಕೆಯಾಗುವುದು ಒಂಟಿ ನಳಿಗೆಯ ಪುಂಗಿ. ಇದರ ಸ್ವರ ತಾರ ಸಪ್ತಕದ ಷಡ್ಜ ಸ್ವರವಾಗಿರುತ್ತದೆ. ತಾರ ಷಡ್ಜದ ಪುಂಗಿಯ ಸ್ವರ ಮತ್ತು ಮಧ್ಯ ಸಪ್ತಕದ ಮದ್ದಳೆಯ ಚಾಪುಗಳು ಮೇಳನಗೊಳ್ಳುವುದಿದ್ದು, ಅವೆರಡರ ನಡುವೆ ಭಾಗವತನ ದನಿ ಸಂಚರಿಸುತ್ತದೆ. ಇದರಿಂದ ಹಾರ್ಮೋನಿಯಮ್‌ನ ಎರಡು (ಮಧ್ಯ ಮತ್ತು ತಾರ) ಷಡ್ಜಗಳನ್ನು ಇರಸಿದಂತಾಗುತ್ತದೆ. ಮದ್ದಳೆಯ ದೀರ್ಘ‌ ನಾದ ನಡು ನಡುವೆ ಮಾತ್ರ ಸಿಗುವುದರಿಂದ ಹಾರ್ಮೋನಿಯಮ್‌ನ ಸಂದರ್ಭದಲ್ಲಾಗುವಂತೆ ಭಾಗವತನ ದನಿ ಶ್ರುತಿಯಲ್ಲಿ ಕರಗಿ ಸ್ಪಷ್ಟತೆ ಕುಂಠಿತ ವಾಗುವ ಅವಕಾಶವಿಲ್ಲ. ಸೋರೆ ಬುರುಡೆಯ ನಾದ ಹಾರ್ಮೋನಿಯಂನ ನಾದದಂತೆ ಅಲೆ ಅಲೆ ಯಾಗಿ ಬರುವಂಥದ್ದಲ್ಲ. ಸೋರೆಯ ನಾದ ಧಾರೆ ಕಡೆಯದೆ ಸಿಗುವಂಥದ್ದು. ಭಾಗವತರ ಪದ ಹೆಚ್ಚು ದೂರ ಕೇಳಲು ಸಾಧ್ಯ. ಈ ಕುರಿತಾದ ವಿಸ್ತೃತ ವಿವರ ಡಾ| ಕೆ. ಎಂ. ರಾಘವ ನಂಬಿಯಾರ್‌ ಅವರ “ಹಿಮ್ಮೇಳ’ ಗ್ರಂಥದಲ್ಲಿದೆ. 

    ಆದರೆ ಯಕ್ಷಗಾನದಲ್ಲಿ ಪುಂಗಿಯ ಬಳಕೆ ನಿಂತು ದಶಕಗಳೇ ಕಳೆದುದರಿಂದ ಈಗ ಅದರ ತಯಾರಿಯೂ ದೊಡ್ಡ ಸವಾಲೇ! ಆ ತಜ್ಞತೆ ಮಂಜುನಾಥ ಪ್ರಭು ಚೇರ್ಕಾಡಿಯವರಲ್ಲಿ ಇರುವು ದನ್ನು ಗುರುತಿಸಿದ ಲೇಖಕ ಬೇಳೂರು ರಾಘವ ಶೆಟ್ಟಿಯವರು ಹರಿಹರ-ದಾವಣಗೆರೆ ಕಡೆಯಿಂದ ಸೋರೆಕಾಯಿಯನ್ನು ತರಿಸಿ ಕೊಟ್ಟು, ಪ್ರೋತ್ಸಾಹಿಸಿರುತ್ತಾರೆ. ಜೂನ್‌ 25, 2017ರಂದು ಸಾಲಿಗ್ರಾಮದ ಏಕದಂತ ಮಿನಿಹಾಲ್‌ನಲ್ಲಿ ಸೋಮಯಾಜಿ ಪ್ರಕಾಶನ (ರಿ.) ಚಿತ್ರಪಾಡಿ ಹಾಗೂ ಲೇಖಕರ ಹಿತರಕ್ಷಣಾ ವೇದಿಕೆ (ರಿ.), ಸಾಲಿಗ್ರಾಮ ಇವರ ಸಹಯೋಗದಲ್ಲಿ ಜರಗಿದ ಬೇಳೂರು ರಾಘವ ಶೆಟ್ಟಿಯವರ “ಒಳಸುತ್ತಿನೊಳಗೊಂದು ಹುಡುಕಾಟ’ ಕೃತಿ ಲೋಕಾರ್ಪಣೆಯಂದು ಈ ಪುಂಗಿಯ ಪ್ರಯೋಗ ಮಂಜುನಾಥ ಪ್ರಭು ಬಳಗದವರಿಂದ ಸಂಪನ್ನಗೊಂಡಿದೆ.

ಭಾಗವತರಾಗಿ ಶಶಿಕಲಾ ಎಂ. ಪ್ರಭು ಹಾಗೂ ಅನಂತ ಪದ್ಮನಾಭ ಭಟ್‌, ಮದ್ದಳೆವಾದಕರಾಗಿ ಮಂಜುನಾಥ ಪ್ರಭು ಸಹಕರಿಸಿದ್ದರು. ಕಾರ್ಯಕ್ರಮದ ಕೇಂದ್ರ ಬಿಂದುವಾದ ಪುಂಗಿಯನ್ನು ಊದಿದವರು ಸಂಜೀವ ದೇವಾಡಿಗ ಮತ್ತು ಸೂರ್ಯ ದೇವಾಡಿಗ. ಈ ಸಂದರ್ಭದಲ್ಲಿ ವಿಶಿಷ್ಟ ಪದಬಂಧಗಳುಳ್ಳ ಪದಗಳ ಸಹಿತ ಹಲವು ಯಕ್ಷಗಾನದ ಹಾಡುಗಳನ್ನು ಭಾಗವತರು ಹಾಡಿದರು. ಪುಂಗಿಯ ಶ್ರುತಿಯೊಂದಿಗೆ ಹಾಡಿದ ಈ ಪದಗಳು ಸ್ಪಷ್ಟವಾಗಿ ಕೇಳಿಬಂದು, ಎಲ್ಲರ ಗಮನ ಸೆಳೆದವು. ಬಹಳ ಕಾಲದ ಅನಂತರ ಈ ಶ್ರುತಿ ಸಂಗೀತೋಪಕರಣದ ಬಳಕೆಯಾಗಿದ್ದು, ಪರಿಷ್ಕರಣೆಯೊಂದಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಪರಿಣಾಮಕಾರಿ ನಿರ್ವಹಣೆ ತೋರಬಹುದೆಂಬ ಆಶಯ ವ್ಯಕ್ತವಾಯಿತು.  

ಪ್ರೊ| ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

Advertisement
Advertisement

Udayavani is now on Telegram. Click here to join our channel and stay updated with the latest news.

Next