Advertisement

‘ಪಡಿತರ ಕಳಪೆಯಾಗಿದ್ದಲ್ಲಿ ಮರಳಿಸಿ’

01:05 PM Jul 28, 2018 | |

ಕಾವು : ಆಹಾರ ಇಲಾಖೆಯಿಂದ ಪೂರೈಕೆಯಾಗುವ ಪಡಿತರ ಸಾಮಗ್ರಿ ಕಳಪೆಯಾಗಿದ್ದಲ್ಲಿ ಆ ಸಾಮಗ್ರಿಯನ್ನು ಇಲಾಖೆಗೆ ಮರಳಿಸುವಂತೆ ಪುತ್ತೂರು ಸಹಾಯಕ ಕಮಿಷನರ್‌ ಎಚ್‌. ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ. ಆಹಾರ ಇಲಾಖೆಯು ಕಳಪೆ ಗುಣಮಟ್ಟದ ಅಕ್ಕಿಯನ್ನು ವಿತರಣೆ ಮಾಡುತ್ತಿದೆ ಎಂಬ ಪಡಿತರ ಗ್ರಾಹಕರ ಆರೋಪದ ಮೇರೆಗೆ ಕುಂಬ್ರದಲ್ಲಿರುವ ಗೋದಾಮಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಈ ಸೂಚನೆ ನೀಡಿದ್ದಾರೆ.

Advertisement

ಪಡಿತರ ಸಾಮಗ್ರಿಯಲ್ಲಿ ಕಳಪೆ ಗುಣ ಮಟ್ಟವಿದೆ ಎಂದು ಒಳಮೊಗ್ರು ಗ್ರಾಮದ ಕುಂಬ್ರ ನ್ಯಾಯಬೆಲೆ ಅಂಗಡಿಯಲ್ಲಿ ಎರಡು ದಿನಗಳ ಹಿಂದೆ ಗ್ರಾಹಕರು ಪ್ರತಿಭಟನೆ ನಡೆಸಿ ಇಲಾಖೆಯ ಕಾರ್ಯವೈಖರಿಯ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ವಿಚಾರ ತಿಳಿದ ಎ.ಸಿ. ಅವರು ಬುಧವಾರ ಬೆಳಗ್ಗೆ ಕುಂಬ್ರದಲ್ಲಿರುವ ಪಡಿತರ ಗೋಡೌನ್‌ ಗೆ ಭೇಟಿ ನೀಡಿ ಅಕ್ಕಿ ಹಾಗೂ ಇತರೆ ಸಾಮಗ್ರಿ ಮತ್ತು ಕಟ್ಟಡವನ್ನು ಪರಿಶೀಲನೆ ನಡೆಸಿದ್ದಾರೆ.

ಈ ವೇಳೆ ಪಡಿತರ ಅಂಗಡಿಯಲ್ಲಿದ್ದ ಗ್ರಾಹಕರಲ್ಲಿ ಅಕ್ಕಿಯ ಗುಣಮಟ್ಟವನ್ನು ಕೇಳಿ ತಿಳಿದುಕೊಂಡರು. ಈ ವೇಳೆ ಪ್ರತಿಕ್ರಿಯಿಸಿದ ಕೆಲ ಗ್ರಾಹಕರು ಕೆಲವೊಮ್ಮೆ ಕಳಪೆ ಗುಣಮಟ್ಟದ ಅಕ್ಕಿಯನ್ನು ಇಲಾಖೆ ವಿತರಣೆ ಮಾಡುತ್ತಿದೆ, ಅಕ್ಕಿಯಲ್ಲಿ ಹುಳಗಳು ಮತ್ತು ಬಳಸಲು ಯೋಗ್ಯವಲ್ಲದ ಅಕ್ಕಿಗಳನ್ನು ನೀಡಲಾಗುತ್ತಿದೆ. ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿಕೊಂಡರು.

ಗೋದಾಮಿನಲ್ಲಿದ್ದ ಅಕ್ಕಿಯನ್ನು ಪರಿಶೀಲಿಸಿದ ಎಚ್‌.ಕೆ. ಕೃಷ್ಣಮೂರ್ತಿ, ಇರುವ ಅಕ್ಕಿಯಲ್ಲಿ ಕಳಪೆ ಗುಣಮಟ್ಟದ್ದು ಅಥವಾ ಬಳಸಲು ಯೋಗ್ಯವಲ್ಲದ ಅಕ್ಕಿ ಇದ್ದಲ್ಲಿ ಅದನ್ನು ಪರಿಶೀಲಿಸಿ ಇಲಾಖೆಗೆ ಮರಳಿಸುವಂತೆ ಸೂಚನೆ ನೀಡಿದರು. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಗೀತಾ ಬಿ.ಎಸ್‌, ಕುಂಬ್ರ ಸಿ.ಎ. ಬ್ಯಾಂಕ್‌ ಕಾರ್ಯನಿರ್ವಹಣಾಧಿ ಕಾರಿ ರಾಜೀವಿ ರೈ, ಗ್ರಾಮಕರಣಿಕ ಪೃಥ್ವಿರಾಜ್‌, ಒಳಮೊಗ್ರು ಗ್ರಾ.ಪಂ. ಅಧ್ಯಕ್ಷ ಯತಿರಾಜ್‌ ರೈ ನೀರ್ಪಾಡಿ, ಪಡಿತರ ವಿತರಕ ವೆಂಕಪ್ಪ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next