Advertisement

ನರೇಗಾ ಕೆಲಸದ ಅವಧಿ ಹೆಚ್ಚಳ ಹಿಂಪಡೆಯಿರಿ

01:32 PM Apr 07, 2022 | Team Udayavani |

ಬಳ್ಳಾರಿ: ನರೇಗಾ ಕೆಲಸದ ಅವಧಿ ಹೆಚ್ಚಳ ಹಿಂಪಡೆಯಬೇಕು. ಕೆಲಸವನ್ನು 200 ದಿನಗಳಿಗೆ ಹೆಚ್ಚಿಸಿ ಕೂಲಿಯನ್ನು 600 ರೂಗೆ ನಿಗದಿಪಡಿಸಬೇಕೆಂದು ಆಗ್ರಹಿಸಿ ನಗರದ ಜಿಪಂ ಕಚೇರಿ ಆವರಣದಲ್ಲಿ ಅಖೀಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು.

Advertisement

ಬೇಸಿಗೆ ದಿನಗಳಲ್ಲಿ ವ್ಯವಸಾಯ ಚಟುವಟಿಕೆ ಸ್ಥಗಿತಗೊಳ್ಳುವುದರಿಂದ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಹತ್ತಾರು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ಯೋಜನೆಯಡಿ ಜನತೆಗೆ ಉಪಯುಕ್ತವಾಗುವ ಶ್ರಮಾಧಾರಿತ ಕಾಮಗಾರಿಗಳನ್ನು ಹಾಗೂ ಗ್ರಾಮಕ್ಕೆ ಉಪಯುಕ್ತವಾಗುವ ಕಾಮಗಾರಿಗಳಾದ ಹೊಲಗಳಿಗೆ ಹೋಗಲು ರಸ್ತೆ ಇಲ್ಲದಕಡೆ ರಸ್ತೆ ನಿರ್ಮಾಣ, ಕೆರೆ ನಿರ್ಮಾಣ, ಕೃಷಿ ಹೊಂಡಗಳ ನಿರ್ಮಾಣ, ಕಾಲುವೆ ದುರಸ್ತಿ ಕಾಮಗಾರಿಗಳು, ಮರ-ಗಿಡಗಳನ್ನು ನೆಡುವ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗುತ್ತದೆ. ಆದರೆ, ಅಗತ್ಯ ವಸ್ತುಗಳ ಬೆಲೆಗಳು ದುಬಾರಿಯಾಗಿರುವುದರಿಂದ ನರೇಗಾ ಕೂಲಿಯನ್ನು ಅದಕ್ಕನುಗುಣವಾಗಿ ಹೆಚ್ಚಿಸುವ ಅಗತ್ಯವಿದ್ದು, ಬಳ್ಳಾರಿ ಜಿಲ್ಲೆಯಲ್ಲಿ ಬೇಸಿಗೆ ಬಿಸಿಲಿನ ತಾಪ ಹೆಚ್ಚಿರುವುದರಿಂದ ಬೆಳಗಿನ ಅವ ಧಿಯಲ್ಲಿ ಮಾತ್ರ ಕೆಲಸ ಮಾಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಿರುವುದರಿಂದ ನರೇಗಾ ದಿನಗೂಲಿಯನ್ನು 600 ರೂಗಳಿಗೆ ಹೆಚ್ಚಿಸಬೇಕು. ಗ್ರಾಮೀಣ ಭಾಗದಲ್ಲಿ ಉದ್ಯೋಗಾವಕಾಶಗಳು ಅಲ್ಪವಾಗಿರುವುದರಿಂದ ವರ್ಷಕ್ಕೆ 200 ದಿನಗಳ ಕಾಲ ಉದ್ಯೋಗ ನೀಡಬೇಕು. ಶ್ರಮಾಧಾರಿತ ಹಾಗೂ ಗ್ರಾಮಕ್ಕೆ ಉಪಯುಕ್ತವಾಗುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ಬಳ್ಳಾರಿ ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿರುವುದರಿಂದ ಈ ಮೊದಲಿನಂತೆ ಕೆಲಸ ಅವಧಿಯನ್ನು ಬೆಳಗಿನ ಅವಧಿಗೆ ಸೀಮಿತಿಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಬಳಿಕ ಜಿಲ್ಲಾ ಪಂಚಾಯತ್‌ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎ.ದೇವದಾಸ್‌, ಜಿಲ್ಲಾ ಕಾರ್ಯದರ್ಶಿ ಹನುಮಂತಪ್ಪ, ಜಿಲ್ಲಾ ಮುಖಂಡ ಗೋವಿಂದ್‌, ಬಸಣ್ಣ ಕೋಳೂರು, ಕೋಳೂರು ಪಂಪಾಪತಿ, ಕೋಳೂರು ಕೆ.ಲಿಂಗಪ್ಪ, ಬಾಬು, ಶೇಖರ್‌, ಹೇಮಣ್ಣ, ಹನುಮಂತ, ಕಲ್ಲುಕಂಭ ಪಂಪಣ್ಣ, ಶಿವಗಂಗಮ್ಮ, ಚನ್ನಮ್ಮ, ನೂರಾರು ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next