ಚಿಕ್ಕಬಳ್ಳಾಪುರ: ರಾಜ್ಯದ ಭವಿಷ್ಯ ನಿಧಿ, ವಂತಿಗೆದಾರರ ಹಾಗೂ ಪಿಂಚಣಿದಾರರ ಸಂಘಟನೆ ವತಿಯಿಂದ ಮಾಸಿಕ ಕನಿಷ್ಠ 7500 ರಿಂದ 9500 ರೂ. ವರೆಗೂ ನಿವೃತ್ತ ಕಾರ್ಮಿಕರಿಗೆ ಪಿಂಚಣಿ ನೀಡುವಂತೆ ಕೇಂದ್ರ, ರಾಜ್ಯ ಸರ್ಕಾರಗಳನ್ನು ಆಗ್ರಹಿಸಿ 18ಕ್ಕೆ ಬೆಂಗಳೂರಿನ ಪುರ ಭವನದ ಎದುರು ಭವಿಷ್ಯ ನಿಧಿ, ವಂತಿಗೆದಾರರ ಹಾಗೂ ಪಿಂಚಣಿದಾರರ ಸಂಘಟನೆ ಸದಸ್ಯರಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸಂಘಟನೆ ರಾಜ್ಯ ಕಾರ್ಯಾಧ್ಯಕ್ಷ ಕೆ.ಎಂ.ಅಶ್ವತ್ಥನಾರಾಯಣ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಈ ಕುರಿತು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನಿಷ್ಠ ಪಿಂಚಣಿ ನೀಡಬೇಕೆಂಬ ಕಾಯ್ದೆಯನ್ನು ಕೇಂದ್ರದ ಬಿಜೆಪಿ ಸರ್ಕಾರ ಪಾಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಬರುವ ಡಿ. 5 ರಿಂದ 8ರ ವರೆಗೂ ನವದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆಯೋಜಿಸಿ ಪ್ರಧಾನಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬದುಕು ದುಸ್ಥರ: ರಾಜ್ಯದಲ್ಲಿ 1.50 ಸಾವಿರ ನಿವೃತ್ತ ಕಾರ್ಮಿಕರು ಇದ್ದಾರೆ. ಆದರೆ ಸದ್ಯಕ್ಕೆ ನಿವೃತ್ತರಿಗೆ 750 ರಿಂದ 2000 ರೂ.ವರೆಗೂ ಮಾತ್ರ ಪಿಂಚಣಿ ಬರುತ್ತಿದೆ. ಇದರಿಂದ ಬದುಕು ನಡೆಸುವುದು ಕಷ್ಟವಾಗಿದೆ. ವಯೋಮಿತಿ ಮೀರಿರುವ ನಿವೃತ್ತ ಕಾರ್ಮಿಕರು ಸಂಕಷ್ಟದಲ್ಲಿ ಬದುಕು ನಡೆಸುವಂತಾಗಿದೆ. ಸರ್ಕಾರ ಕೊಡುವ ಪಿಂಚಣಿ ಕನಿಷ್ಠ ಮಾಸಿಕ ಮಾತ್ರೆ ಖರೀದಿಗೂ ಸಾಲುತ್ತಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದರು.
ಕಾರ್ಮಿಕರ ಹಿತ ಕಾಪಾಡುತ್ತಿಲ್ಲ: ಬಹುತೇಕರು 60 ರಿಂದ 85, 90 ವರ್ಷ ಮೇಲ್ಟಟ್ಟ ನಿವೃತ್ತ ಕಾರ್ಮಿಕರು ಇದ್ದು, ಪಿಂಚಣಿ ಹಣದಿಂದಲೇ ಬದುಕು ನಡೆಸಬೇಕಿದೆ. ಆದರೆ ಬರುತ್ತಿರುವ ಪಿಂಚಣಿ ಅತ್ಯಂತ ಕಡಿಮೆ ಇದ್ದು, ಇಂದಿನ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿರುವ ಸಂದರ್ಭದಲ್ಲಿ ಮಾಸಿಕ ಕನಿಷ್ಠ 7500 ರಿಂದ 9500 ರೂ. ನೀಡಬೇಕೆಂದು ಅಶ್ವತ್ಥನಾರಾಯಣ ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆ ರಾಷ್ಟ್ರೀಯ ಅಧ್ಯಕ್ಷ ಅಶೋಕ್ ರಾವತ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆ ಸದಸ್ಯರಾದ ಸುದರ್ಶನಚಾರಿ, ಗಾಣಿಗಾರ್, ಆದಿನಾರಾಯಣ, ತಾತಾಚಾರಿ, ಎಂ.ನಾರಾಯಣಸ್ವಾಮಿ, ನಾಗರಾಜ್, ವೆಂಕಟೇಶ್, ರಾಮಾಂಜನೇಯ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರ ಭವಿಷ್ಯ ನಿಧಿ, ವಂತಿಗೆದಾರರ ಹಾಗೂ ಪಿಂಚಣಿದಾರರಿಗೆ ಕನಿಷ್ಠ ಮಾಸಿಕ 7,500 ರಿಂದ 9,500 ರೂ.ಪಿಂಚಣಿ ಕೊಡಬೇಕು. ಇಲ್ಲದಿದ್ದರೆ ಕೇಂದ್ರದ ವಿರುದ್ಧ ನಿವೃತ್ತ ಕಾರ್ಮಿಕರು ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ. 18ಕ್ಕೆ ನಡೆಯಲಿರುವ ಹೋರಾಟದಲ್ಲಿ ನಿವೃತ್ತ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು.
-ಕೆ.ಎಂ.ಅಶ್ವತ್ಥನಾರಾಯಣ, ರಾಜ್ಯ ಕಾರ್ಯಾಧ್ಯಕ್ಷ