Advertisement

ನಿವೃತ್ತಿಪರ ಸ್ಕೀಮ್‌

10:05 AM Feb 04, 2020 | Sriram |

ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿಯ ಮೇಲಿನ ಬಡ್ಡಿದರ ಸರಾಸರಿ ಐದೂವರೆಯಿಂದ ಆರೂವರೆಯಷ್ಟು ಮಾತ್ರ. ಈ ಸಂದರ್ಭದಲ್ಲೇ, 60 ವರ್ಷಕ್ಕೆ ಮೇಲ್ಪಟ್ಟ ನಿವೃತ್ತ ಹಿರಿಯ ನಾಗರಿಕರು, ಹೆಚ್ಚಿನ ಬಡ್ಡಿದರ ಇರುವ ಮತ್ತು ಸುರಕ್ಷಿತ ಹೂಡಿಕೆ ಮಾಡಲು ಎದುರುನೋಡುತ್ತಿದ್ದಾರೆ, ಅಂಥವರೂ ಅತ್ಯುತ್ತಮ ಸರ್ಕಾರಿ ಯೋಜನೆ ಎಂಬ ಹೆಗ್ಗಳಿಕೆಯ, ಸದ್ಯದ ಮಾರುಕಟ್ಟೆಯಲ್ಲಿ 8% ಬಡ್ಡಿದರ ನೀಡುವ “ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’ಯಲ್ಲಿ ಹಣ ಹೂಡಬಹುದು…

Advertisement

ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿಯ ಏರುಪೇರಿನ ಹಿನ್ನಲೆಯಲ್ಲಿ, ಬ್ಯಾಂಕುಗಳ ಠೇವಣಿಯ ಬಡ್ಡಿದರಗಳ ಏರುಪೇರು ಸಹ ಸಹಜ ಬೆಳವಣಿಗೆ. ಇತ್ತೀಚಿಗಂತೂ ಪ್ರತಿ ಮೂರು ತಿಂಗಳಿಗೊಮ್ಮೆ ಬ್ಯಾಂಕುಗಳ,ು ತಮ್ಮ ಬಡ್ಡಿದರ ಇಳಿಸುತ್ತಿರುವುದನ್ನು ನೀವು ಗಮನಿಸುತ್ತಿರಬಹುದು. ಬಹುತೇಕ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ನಿಶ್ಚಿತ ಠೇವಣಿಯ ಮೇಲಿನ ಬಡ್ಡಿದರ ಸರಾಸರಿ ಐದೂವರೆಯಿಂದ ಆರೂವರೆಯಷ್ಟು ಮಾತ್ರ ಎನ್ನುವುದು ಗಮನಾರ್ಹ. ಹಿರಿಯ ನಾಗರಿಕರಿಗಾದರೆ ಇನ್ನೊಂದು ಅರ್ಧ ಪ್ರತಿಶತದಷ್ಟು ಹೆಚ್ಚಿನ ಬಡ್ಡಿದರ ನೀಡುವುದು ಬ್ಯಾಂಕುಗಳ ವಾಡಿಕೆ.

ಸಹಕಾರಿ ಬ್ಯಾಂಕುಗಳಲ್ಲಿನ ಠೇವಣಿಗೆ ಸ್ವಲ್ಪ ಹೆಚ್ಚಿನ ಬಡ್ಡಿದರ ಸಿಗಬಹುದಾದರೂ, ಸರಕಾರದ ಯಾವುದೇ ಆರ್ಥಿಕ ಭದ್ರತೆಗಳಿಲ್ಲದ ಇಂಥ ಸಂಸ್ಥೆಗಳಲ್ಲಿನ ಹೂಡಿಕೆ ಅಪಾಯಕಾರಿಯಾಗಬಹುದಾದ ಸಾಧ್ಯತೆಗಳು ಇಲ್ಲದಿಲ್ಲ. ವಸ್ತುಸ್ಥಿತಿ ಹೀಗಿರುವಾಗ, ನಿವೃತ್ತಿ ಹೊಂದಿರುವ ಹಿರಿಯ ನಾಗರಿಕರು ಹೆಚ್ಚಿನ ಬಡ್ಡಿದರದ ಮತ್ತು ಸುರಕ್ಷಿತ ಹೂಡಿಕೆಗಾಗಿ ನೋಡಬಹುದಾದ ಯೋಜನೆ ಯಾವುದೆನ್ನುವ ಪ್ರಶ್ನೆ ಮೂಡುವುದು ಸಹಜ. ಅಂಥಲ್ಲೊಂದು ಪ್ರಶ್ನೆಗೆ ಉತ್ತರವಾಗಿ ನಿಲ್ಲುವ ಒಂದು ಸರ್ಕಾರಿ ಯೋಜನೆಯ ಹೆಸರು “ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’.

ಹೆಚ್ಚಿನ ಬಡ್ಡಿ ದರ
ಮೂಲತಃ ಇದೊಂದು ಪಿಂಚಣಿ ಯೋಜನೆ. ಕನಿಷ್ಠ 60 ವರ್ಷ ವಯಸ್ಸಾಗಿರುವ ಹಿರಿಯ ನಾಗರಿಕರನ್ನು ದೃಷ್ಟಿ.ಯಲ್ಲಿ ಇಟ್ಟುಕೊಂಡು ಕೇಂದ್ರ ಸರಕಾರ 2017ರಲ್ಲಿ ಜಾರಿಗೆ ತಂದ ಯೋಜನೆಯಿದು. ಕನಿಷ್ಠ ಒಂದೂವರೆ ಲಕ್ಷದಿಂದ ಗರಿಷ್ಠ 15 ಲಕ್ಷ ರೂಪಾಯಿಗಳಷ್ಟು ಮೊತ್ತವನ್ನು ಪ್ರತಿಯೊಬ್ಬ ಹಿರಿಯ ನಾಗರಿಕನೂ ಈ ಯೋಜನೆಯಡಿ ಹೂಡಬಹುದು. ಹತ್ತು ವರ್ಷಗಳ ದೀರ್ಘಾವಧಿಯ ಕಾಲಕ್ಕೆ ಇರುವ ಈ ಯೋಜನೆಯಡಿ, ಮಾಸಿಕ ಪಿಂಚಣಿಯ ದರ 8%ರಷ್ಟು ಮತ್ತು ವಾರ್ಷಿಕ ಪಿಂಚಣಿಯ ದರ 8.3% ಎನ್ನುವುದು ವಿಶೇಷ. ಬ್ಯಾಂಕುಗಳ ಸಮಕಾಲೀನ ಬಡ್ಡಿದರಗಳೊಂದಿಗೆ ತುಲನೆ ಮಾಡುವುದಾದರೆ, ಸದ್ಯಕ್ಕೆ ಈ ಬಡ್ಡಿದರ ಅತ್ಯುತ್ತಮ ಎನ್ನಬಹುದು.

ಒಂದು ವೇಳೆ ಹೂಡಿಕೆಯ ಅವಧಿ ಮುಗಿಯುವ ಮುನ್ನವೇ ಅಂದರೆ ಹತ್ತು ವರ್ಷಗಳ ಅವಧಿ ಪೂರ್ಣವಾಗುವ ಮುನ್ನವೇ ಹೂಡಿಕೆದಾರರು ನಿಧನ ಹೊಂದಿದರೆ ಯೋಜನೆಯಡಿ ಹೂಡಿದ್ದ ಸಂಪೂರ್ಣ ಮೊತ್ತವನ್ನು ಹೂಡಿಕೆದಾರರ ನಾಮಿನಿಗೆ ಪಾವತಿಸಲಾಗುವುದು.

Advertisement

ಗಮನಿಸಬೇಕಾದ ಮುಖ್ಯ ಸಂಗತಿ
ಮುಖ್ಯವಾಗಿ ತೆರಿಗೆ ವಿನಾಯಿತಿಯನ್ನು ಗಮನದಲ್ಲಿಟ್ಟುಕೊಂಡು ಹೂಡಿಕೆಯ ಲೆಕ್ಕಾಚಾರದಲ್ಲಿರುವ ಹಿರಿಯ ನಾಗರಿಕರಿಗೆ ಈ ಯೋಜನೆಯಿಂದ ಯಾವುದೇ ಲಾಭವಿಲ್ಲ ಎನ್ನುವುದು ಹೂಡಿಕೆಗೂ ಮುನ್ನ ಗಮನಿಸಬೇಕಾದ ಮುಖ್ಯವಾದ ಸಂಗತಿ. ಈ ಯೋಜನೆಯಡಿ ಹೂಡುವ ಮೊತ್ತಕ್ಕೆ ಯಾವುದೇ ನಿಯಮಗಳ ಅಡಿಯಲ್ಲಿ ತೆರಿಗೆಯ ವಿನಾಯಿತಿ ಇಲ್ಲ ಮತ್ತು ಹೂಡಿಕೆದಾರ ತನ್ನ ಉಳಿದ ಆದಾಯಗಳಿಂದ ಆದಾಯ ತೆರಿಗೆಗೆ ಯೋಗ್ಯರಾಗಿದ್ದರೆ ಈ ಯೋಜನೆಯಲ್ಲಿನ ಹೂಡಿಕೆಯಿಂದ ಗಳಿಸಬಹುದಾದ ಪಿಂಚಣಿ ಸಹ ತೆರಿಗೆಗೆ ಅರ್ಹ ಎನ್ನುವುದನ್ನು ಸಹ ಹೂಡಿಕೆದಾರರು ಗಮನದಲ್ಲಿರಿಸಿಕೊಳ್ಳಬೇಕು.

ಇಷ್ಟಾಗಿಯೂ, ಒಂದು ಉತ್ತಮ ಬಡ್ಡಿದರದ ಮತ್ತು ಸುರಕ್ಷಿತ ಸರಕಾರಿ ಹೂಡಿಕೆ “ಪ್ರಧಾನಮಂತ್ರಿ ವಯಾ ವಂದನಾ ಯೋಜನೆ’ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಮೂರು ವರ್ಷಗಳಿಂದ ಮಾರುಕಟ್ಟೆಯಲ್ಲಿ ಲಭ್ಯವಿದ್ದ ಈ ಯೋಜನೆ ಇದೇ ವರ್ಷ ಮಾರ್ಚ್‌ 31ರಂದು ಕೊನೆಗೊಳ್ಳಲಿದೆ. ಆಸಕ್ತರು ಸಮೀಪದ ಭಾರತೀಯ ಜೀವ ವಿಮಾ ನಿಗಮದ ಶಾಖೆಗಳಿಗೆ ತೆರಳಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು.

ಜಿಎಸ್‌ಟಿ ಅನ್ವಯವಾಗುವುದಿಲ್ಲ
ಹಿರಿಯ ನಾಗರಿಕರ ಯೋಜನೆಯಾಗಿರುವುದರಿಂದ ಉಳಿದ ಅನೇಕ ಯೋಜನೆಗಳಿಗೆ ಅನ್ವಯವಾಗುವ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಇದಕ್ಕೆ ಅನ್ವಯವಾಗದು ಎನ್ನುವುದು ವಿಶೇಷ. ಹೂಡಿಕೆಯ ಒಂದು ವರ್ಷದ ನಂತರ ಅವಧಿಪೂರ್ವ ಹಿಂಪಡೆಯುವಿಕೆಯ ಸೌಲಭ್ಯವೂ ಈ ಯೋಜನೆಗಿದೆ. ಸಣ್ಣದೊಂದು ನಿರ್ವಹಣಾ ವೆಚ್ಚದ ಕಡಿತದೊಂದಿಗೆ ಹೂಡಿಕೆಯ ಸಂಪೂರ್ಣ ಮೊತ್ತವನ್ನು ವಾಪಸು ಪಡೆಯುವ ನಿಯಮವೂ ಈ ಯೋಜನೆಯಡಿ ಇದೆ.

– ಗುರುರಾಜ ಕೊಡ್ಕಣಿ, ಯಲ್ಲಾಪುರ

Advertisement

Udayavani is now on Telegram. Click here to join our channel and stay updated with the latest news.

Next