Advertisement

ಅಂತಿಮ ವಿದಾಯ ಕೆಲವರಿಗಷ್ಟೇ ಶುಭದಾಯಕ!

03:36 PM Sep 15, 2018 | |

ನಿವೃತ್ತಿ ಘೋಷಿಸಿದ ಆಟಗಾರನ ಕೊನೆಯ ಇನಿಂಗ್ಸ್‌ನಲ್ಲಿ ಶತಕ, ಹ್ಯಾಟ್ರಿಕ್‌, ಪಂದ್ಯ ಪುರುಷೋತ್ತಮ ಪ್ರಶಸ್ತಿ ತೀರಾ ಕನಸೇನಲ್ಲ. ತಮ್ಮ 12 ವರ್ಷಗಳ ಕ್ರಿಕೆಟ್‌ ಕ್ಯಾರಿಯರ್‌ನ ಮೊದಲ ಟೆಸ್ಟ್‌ನಲ್ಲಿ ಭಾರತದ ವಿರುದ್ಧ ಮೂರಂಕಿಯ ಸಾಧನೆಯಿಂದ ಬ್ಯಾಟಿಂಗ್‌ ಪ್ರಾರಂಭಿಸಿದ್ದ ಇಂಗ್ಲೆಂಡ್‌ನ‌ ಆರಂಭಿಕ ಆಲಿಸ್ಟರ್‌ ಕುಕ್‌ ತಮ್ಮ ಕೊಟ್ಟ ಕೊನೆಯ ಇನಿಂಗ್ಸ್‌ನಲ್ಲಿ ಅಡುಗೆ ಮಾಡಿ ಬಡಿಸಿದ್ದು ಕೂಡ ಶತಕವನ್ನೇ, ಅದೂ ಅದೇ ಭಾರತದ ವಿರುದ್ಧ! ತಂಡಕ್ಕೆ ಸರಣಿ ಜಯ, ಕಿಂಗ್‌ಸ್ಟನ್‌ ಓವಲ್‌ನ ಆ ಪಂದ್ಯದ ಜಯ, ಎರಡನೇ ಸರದಿಯ 147ರ ಜೊತೆ ಮೊದಲ ಇನಿಂಗ್ಸ್‌ನ 71 ರನ್‌ ಆಟಕ್ಕೆ ಒಲಿದ ಪಂದ್ಯದ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ…. ಬಹುಶಃ ಇಂತಹ ವಿದಾಯ ಬಹಳಷ್ಟು ಆಟಗಾರರಿಗೆ ಸಿಗುವುದಿಲ್ಲ. 

Advertisement

ಆಟ ಕಷ್ಟ, ಸೋಲಿನ ಸಂಕಷ್ಟ!
ಇಂತಹ ಪಟ್ಟಿಯಲ್ಲಿ ಭಾರತದ ಸುನಿಲ್‌ ಗಾವಸ್ಕರ್‌ ಅವರದ್ದು ವಿಚಿತ್ರ ನೆನಪು. ಪಾಕಿಸ್ತಾನದ ವಿರುದ್ಧ ಸರಣಿ ನಿರ್ಧರಿಸುವ ಬೆಂಗಳೂರಿನ ಕೊನೆಯ ಟೆಸ್ಟ್‌ನಲ್ಲಿ ಅಕ್ಷರಶಃ 90 ಡಿಗ್ರಿ ಪ್ರಮಾಣದಲ್ಲಿ ಚೆಂಡು ತಿರುವ ಕಾಣುತ್ತಿದ್ದ ಪಿಚ್‌ನಲ್ಲಿ ಗಾವಸ್ಕರ್‌ ಅಭಿಮನ್ಯುವಿನಂತೆ ಹೋರಾಡಿ ಬೆಲೆ ಕಟ್ಟಲಾಗದ 96 ರನ್‌ ಗಳಿಸಿದರು. ಆದರೆ ಅವರ ನಿರ್ಗಮನದ ನಂತರ ಭಾರತ ಟೊಂಕ ಬಗ್ಗಿಸಿ 16 ರನ್‌ಗಳಿಂದ ಪಂದ್ಯ ಸೋತಿತು, ಜೊತೆಗೆ ಸರಣಿಯನ್ನೂ! ಇದೇ ಗಾವಸ್ಕರ್‌ಒಂದು ವಿಶ್ವಕಪ್‌ ಏಕದಿನ ಪಂದ್ಯದಲ್ಲಿನ 60 ಓವರ್‌ಗಳಲ್ಲಿ 36 ರನ್‌ ಸಂಪಾದಿಸಿ ಪಡೆದ ಕುಖ್ಯಾತಿಯನ್ನು ತಮ್ಮ ಕೊನೆಯ ಏಕದಿನ ಪಂದ್ಯದಲ್ಲಿ ತಮ್ಮ ಚೊಚ್ಚಲ ಹಾಗೂ ಏಕೈಕ ಶತಕದ ಮೂಲಕ ಆಚರಿಸಿದ್ದು ಕೂಡ ಫ್ಲಾಶ್‌ಬ್ಯಾಕ್‌ನಲ್ಲಿದೆ.

ಇತಿಹಾಸಕ್ಕೂ ನಿಟ್ಟುಸಿರು!
ಶ್ರೀಲಂಕಾದ ಮುತ್ತಯ್ಯ ಮುರುಳೀಧರನ್‌ 2010ರ ಗಾಲ್ಲೆ ಟೆಸ್ಟ್‌ನಲ್ಲಿ ನಿವೃತ್ತಿ ಎನ್ನುವಾಗ ಅವರಿಗೆ 800 ವಿಕೆಟ್‌ ಸಾಧನೆಗೆ ಇನ್ನೂ 8 ವಿಕೆಟ್‌ ಬೇಕಿತ್ತು. ಇದೇ ಪಿಚ್‌ನಲ್ಲಿ ಆಡಿದ 14 ಪಂದ್ಯದಲ್ಲಿ 103 ಬಲಿ ತೆಗೆದುಕೊಂಡಿದ್ದ ಮುತ್ತಯ್ಯಗೆ ಎಂತದೋ ಭರವಸೆ, ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನ 520 ರನ್‌ಗಳ ಸಮಯದಲ್ಲಿ ಮಳೆ. ಒಂದಿಡೀ ಎರಡನೇ ದಿನ ನಷ್ಟ. ಮೊದಲ ಇನ್ನಿಂಗ್ಸ್‌ನ 5 ವಿಕೆಟ್‌ನ ಸ್ಪಿನ್‌ ಬಲಿಯಿಂದ ಭಾರತ ಫಾಲೋಆನ್‌. ಮತ್ತೆರಡು ವಿಕೆಟ್‌ ಪಡೆದ ಮುತ್ತಯ್ಯ ಮುಂದಿನ 23 ಓವರ್‌ಗಳಲ್ಲಿ ವಿಕೆಟ್‌ ಲೆಸ್‌! ವಿವಿಎಸ್‌ ಲಕ್ಷ್ಮಣ್‌ ಒಂಬತ್ತನೆಯವರಾಗಿ ಔಟ್‌ ಆದ ನಂತರ ಕೊನೆಯ ಆಟಗಾರ ಸ್ವಲ್ಪದರಲ್ಲಿ ಎರಡು ಬಾರಿ ರನ್‌ಔಟ್‌ನಿಂದ ಬಚಾವ್‌. ಅಂತೂ ಪ್ರಗ್ಯಾನ್‌ ಓಜಾ ಮುರುಳೀಧರನ್‌ರಿಗೇ ವಿಕೆಟ್‌ ಒಪ್ಪಿಸಿದಾಗ ಇತಿಹಾಸವೂ ನಿಟ್ಟುಸಿರು ಬಿಟ್ಟಿರಬೇಕು!

ಕೊನೆಯ ಟೆಸ್ಟ್‌, ವೇಗದ ಶತಕ!
2015-16, ಕ್ರೆçಸ್ಟ್‌ಚರ್ಚ್‌, ಸ್ಟೀವ್‌ ಸ್ಮಿತ್‌ರ ಕಾಂಗರೂ ಎದುರು ಹಸಿರು ಪಿಚ್‌ನಲ್ಲಿ ಅದಾಗಲೇ ಕಿವೀಸ್‌ 3 ವಿಕೆಟ್‌ ನಷ್ಟಕ್ಕೆ 32. 101 ಟೆಸ್ಟ ಅನುಭವದ ಬ್ರೆಂಡನ್‌ ಮೆಕಲಮ್‌ರ ಮೊದಲ ಹೊಡೆತ ಸ್ಲಿಪ್‌ ಮೇಲೆ ಹಾರಿ ಬೌಂಡರಿ ದಾಟಿತು. ಆ ಕ್ಷಣಕ್ಕೆ ಯಾರಿಗೂ ವಿವಿಯನ್‌ ರಿಚಡ್ಸ್‌ನ 56 ಚೆಂಡುಗಳ ವೇಗದ ಟೆಸ್ಟ್‌ ಶತಕವಾಗಲಿ ಅಥವಾ ಅದನ್ನು 2014ರಲ್ಲಿ ಸಮಗೊಳಿಸಿದ ಪಕಿ ಮಿಸ್ಬಾ ಉಲ್‌ ಹಕ್‌ರ ಆಸೀಸ್‌ ಎದುರಿನ ಇನ್ನಿಂಗ್ಸ್‌ ಆಗಲಿ ನೆನಪಾಗಲಿಲ್ಲ. ಟಾಪ್‌ ಎಡ್ಜ್ ಸಿಕ್ಸ್‌, ಮಿಡ್‌ವಿಕೆಟ್‌ ತಲೆಯ ಮೇಲೆ ಬೌಂಡರಿ, ಇನ್ನೊಂದು ಟಾಪ್‌ ಎಡ್ಜ್ ಫೋರ್‌, ಕವರ್‌ನ್ನು ಬೇಧಿಸಿದ ಮಿಂಚಿನ ನಾಲ್ಕು ರನ್‌….. ಅರೆರೆ, ಬ್ರೆಂಡನ್‌ ಶತಕ ಪೂರೈಸಿದ್ದಾರೆ ಮತ್ತು ಈ ಹಿಂದಿನ ದಾಖಲೆಗಿಂತ ಎರಡು ಎಸೆತ ಕಡಿಮೆಯ ಲೆಕ್ಕದಲ್ಲಿ! 

ನಿವೃತ್ತಿ ಹ್ಯಾಟ್ರಿಕ್‌!
ನಿವೃತ್ತಿ ಕತೆಯ ಸ್ವಾರಸ್ಯಗಳು ಸಾಕಷ್ಟಿವೆ. ಡೆನಿಸ್‌ ಲಿಲ್ಲಿ ವಿದಾಯ ಹೇಳುವುದನ್ನು ತನ್ನೊಂದಿಗೆ ಗುಟ್ಟಾಗಿ ಪಿಸುಗುಟ್ಟಿದ್ದು ಕೇಳಿಸಿಕೊಂಡ ಗ್ರೆಗ್‌ ಚಾಪೆಲ್‌ 1984ರಲ್ಲಿ ಪಾಕ್‌ ಎದುರಿನ ಪಂದ್ಯದಲ್ಲಿ ಏಕಾಏಕಿ ನಿವೃತ್ತಿ ಘೋಷಿಸುತ್ತಾರೆ. ಚೊಚ್ಚಲ ಟೆಸ್ಟ್‌ ಶತಕದಂತೆ ಇಲ್ಲೂ ಶತಕ ಮತ್ತು ಕ್ಯಾಚ್‌ಗಳ ವಿಶ್ವದಾಖಲೆ ಜೊತೆಗಿರುತ್ತದೆ. ಈ ಸರಣಿಯ ನಂತರದ ವೆಸ್ಟ್‌ ಇಂಡೀಸ್‌ ಸರಣಿ ಆರಂಭಕ್ಕೆ ಮುನ್ನ ರಾಡ್ನಿ ಮಾರ್ಷ್‌ ನಿವೃತ್ತಿಯಲ್ಲಿ ಕಾರಣ ನೀಡಿ ಜೊತೆಯಾಗುತ್ತಾರೆ, ಪ್ರವಾಸದಲ್ಲಿ ಹಳೆ ಸ್ನೇಹಿತರೇ ಇಲ್ಲ! 2007ರಲ್ಲಿ ಸಿಡ್ನಿ ಟೆಸ್ಟ್‌ನಲ್ಲಿ ಮತ್ತೂಮ್ಮೆ ಕಾಂಗರೂ ತ್ರಿವಳಿಗಳು ಒಂದೇ ಟೆಸ್ಟ್‌ನಲ್ಲಿ ವಿದಾಯ ಘೋಷಿಸಿದ್ದನ್ನು ಕಾಣುತ್ತೇವೆ. ಆ ಪಂದ್ಯದ ಜಯದಿಂದ 5-0 ವೈಟ್‌ ವಾಶ್‌, ಕೊನೆಯ ಇನಿಂಗ್ಸ್‌ನಲ್ಲಿ ಅಜೇಯವಾಗಿ ತಂಡ ಗೆಲ್ಲಿಸಿದ ಜಸ್ಟಿನ್‌ ಲ್ಯಾಂಗರ್‌, ಶೇನ್‌ ವಾರ್ನ್ ಹಾಗೂ ತಮ್ಮ ಕಟ್ಟಕಡೆಯ ಚೆಂಡಿನಲ್ಲಿ ವಿಕೆಟ್‌ ಪಡೆದ ಗ್ಲೆನ್‌ ಮೆಗ್ರಾತ್‌ ನಿವೃತ್ತರಾದರು.ಇಂತಹ ಸವಿನೆನಪುಗಳು ಆಟಗಾರರಿಗೆ ಸಿಗಬೇಕು!

Advertisement

ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next