Advertisement
ಕೋಲಾರ ನಗರಸಭೆ ಆಡಳಿತದಲ್ಲಿ ತಮ್ಮದೇ ಛಾಪು ಒತ್ತಿದ್ದ ಎಸ್.ಹನುಮಂತಪ್ಪ, ಸೇವೆಯಿಂದ ನಿವೃತ್ತರಾಗುತ್ತಿದ್ದಂತೆ ಮಾಡಿದ ಮೊದಲ ಕೆಲಸ ಏನು ಗೊತ್ತಾ? ಮಾಲೂರು ಸಮೀಪ ಕಣಿವೇನಹಳ್ಳಿಯಲ್ಲಿದ್ದ ತಮ್ಮ 9 ಎಕರೆ ಜಮೀನನ್ನು ಸಂಪೂರ್ಣ ಸಾವಯವ ಕೃಷಿ ಪ್ರಯೋಗ ಶಾಲೆಯಾಗಿ ಮಾಡಿಕೊಂಡದ್ದು. ಈಗ ಅವರು, ವೈವಿಧ್ಯಮಯ ಬೆಳೆಗಳ ಅತ್ಯುತ್ತಮ ಫಸಲು ಪಡೆದು ಸಾವಿರಾರು ರೂಪಾಯಿ ಲಾಭಗಳಿಸುತ್ತಾ ಎಲ್ಲರ ಗಮನ ಸೆಳೆದಿದ್ದಾರೆ.
Related Articles
ಕೋಲಾರದಲ್ಲಿ ಪೌರಾಯುಕ್ತರಾಗಿದ್ದ ಎಸ್.ಹನುಮಂತಪ್ಪ, ರಾಜ್ಯದ ಕೃಷಿ ಮಂತ್ರಿಯಾಗಿದ್ದ ಸಿ.ಬೈರೇಗೌಡರಿಗೆ ಅಚ್ಚುಮೆಚ್ಚು. ಹಾಗೇ ಒಂದು ದಿನ ಬೈರೇಗೌಡರು, ಹನುಮಂತಪ್ಪರನ್ನುದ್ದೇಶಿಸಿ-“ರೈತರ ಕಷ್ಟ ನಿಮ್ಮಂಥ ಅಧಿಕಾರಿಗಳಿಗೆ ಹೇಗೆ ಅರ್ಥವಾಗಬೇಕು?’ ಎಂಬ ಪ್ರಶ್ನೆ ಹಾಕಿದರು. ಇದು ಹನುಮಂತಪ್ಪರನ್ನು ಕಾಡುತ್ತಿತ್ತಲ್ಲದೆ ತಾವು ಪ್ರಗತಿಪರ ಕೃಷಿಕರಾಗಬೇಕೆಂಬ ಛಲ ಮೊಳಕೆಯೊಡೆಯುವಂತೆ ಮಾಡಿತ್ತು. ಈ ಕಾರಣದಿಂದಲೇ ಕಣಿವೇನಹಳ್ಳಿ ಬಳಿ 9 ಎಕರೆ ತೋಟ ಖರೀದಿ ಮಾಡಿ ಕೃಷಿ ತೋಟಗಾರಿಕೆ ಚಟುವಟಿಕೆ ನಡೆಸಲು ನಿರ್ಧರಿಸಿದರು.
ತೋಟದಲ್ಲಿ ಯಾವುದೇ ಬೆಳೆ ಹಾಕುವ ಮುನ್ನ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರು.
Advertisement
ಅತ್ಯುತ್ತಮ ಬೀಜಗಳು ಎಲ್ಲಿ ದೊರೆಯುತ್ತದೆಯೋ ಅದನ್ನು ಹುಡುಕಿ ನಾಟಿ ಮಾಡುತ್ತಿದ್ದರು. ಅವುಗಳ ನಿರ್ವಹಣೆ ಕುರಿತಂತೆ ಹನುಮಂತಪ್ಪರಿಗೆ ನೆರವಾಗಿದ್ದು ಹುಳಿಮಾವು ಸಮೀಪವಿರುವ ರಾಷ್ಟ್ರೀಯ ತೋಟಗಾರಿಕೆ ಅಭಿವೃದ್ಧಿ ನಿಗಮ.
ನೀರಿನ ಅಭಾವ ತಡೆದುಕೊಳ್ಳುವ ಸಲುವಾಗಿ ತಮ್ಮ ತೋಟದಲ್ಲಿದ್ದ ಮೂರು ಕೊಳವೆ ಬಾವಿಗಳ ಜೊತೆಗೆ 11 ಲಕ್ಷ ಗ್ಯಾಲನ್ ಮತ್ತು 26 ಲಕ್ಷ ಗ್ಯಾಲನ್ ನೀರು ಸಂಗ್ರಹಿಸುವ ಕೃಷಿ ಹೊಂಡಗಳನ್ನು ನಿರ್ಮಿಸಿಕೊಂಡರು. ತಮ್ಮ ತೋಟದಲ್ಲಿ ಸುರಿದ ಮಳೆ ನೀರಿನ ಪ್ರತಿ ಹನಿಯನ್ನೂ ಜತನದಿಂದ ಸಂಗ್ರಹಿಸಿದರು. ಒಮ್ಮೆ ಕೃಷಿ ಹೊಂಡಗಳು ತುಂಬಿತೆಂದರೆ ಅದೇ ನೀರನ್ನು ಸದ್ಬಳಕೆ ಮಾಡಿಕೊಂಡು ಒಂದು ಬೆಳೆ ತೆಗೆಯಬಹುದು ಎನ್ನುವುದನ್ನು ಅನುಭವದಿಂದಲೇ ಅರ್ಥ ಮಾಡಿಕೊಂಡರು.
ಹನುಮಂತಪ್ಪನವರು ಏನೇ ಬೆಳೆದರೂ ಅದಕ್ಕೆ ಸಾವಯವ ತಿಪ್ಪೇಗೊಬ್ಬರ, ಬೇವು, ಹೊಂಗೆ ಹಿಂಡಿಯನ್ನು ಹಾಕುತ್ತಾರೆ. ಹಸುವಿನ ಗಂಜಲ, ಬೇವಿನ ಸೊಪ್ಪು, ಎಕ್ಕದ ಎಲೆ, ಸಗಣಿಯನ್ನು ಮಿಶ್ರಣ ಮಾಡಿ ಹತ್ತು ದಿನಗಳ ನಂತರ ಡ್ರಂನಲ್ಲಿ ಸಂಗ್ರಹಿಸಿಟ್ಟು, ಆನಂತರ ಶೋಧಿಸಿ ಅದನ್ನು ಕೀಟ ನಾಶಕವಾಗಿ ಬೆಳೆಗೆ ಸಿಂಪಡಿಸುತ್ತಾರೆ. ವೈವಿಧ್ಯಮಯ ಬೆಳೆಗಳಿಗೆ ಲಘು ಪೋಷಕಾಂಶಗಳನ್ನು ಸಾವಯವ ಪದ್ಧತಿ ಮೂಲಕ ನೀಡುತ್ತಿದ್ದಾರೆ.
ವೈವಿಧ್ಯಮಯ ಬೆಳೆ ಇಡೀ ತೋಟಕ್ಕೆ ಮಾವು ಹಾಕಿ ವರ್ಷಕ್ಕೊಂದು ಬೆಳೆ ತೆಗೆದು ಸುಮ್ಮನಿರಬಹುದಿತ್ತು. ಆದರೆ, ಸದಾ ಕ್ರಿಯಾಶೀಲವಾಗಿರುವಬೇಕೆಂಬ ತುಡಿತ ವೈವಿಧ್ಯಮಯ ಬೆಳೆಯ ಕೃಷಿ ಚಟುವಟಿಕೆಗೆ ನಾಂದಿಯಾಡಿತು. ಆರಂಭದಲ್ಲಿ ಮುಸುಕಿನ ಜೋಳದಿಂದ ಆರಂಭವಾದ ಕೃಷಿ ಪ್ರಯೋಗ, ಆನಂತರ ಬಾಳೆ, ರಾಗಿ, ಹಿಪ್ಪು ನೇರಳೆ ಜೊತೆಗೆ ಈಗ ಶುಂಠಿ ಬೇಸಾಯದ ವರೆವಿಗೂ ಬಂದು ನಿಂತಿದೆ. ಪ್ರತಿ ಎಕರೆಗೆ 36 ಕ್ವಿಂಟಾಲ್ ಸಾವಯವ ರಾಗಿ ಬೆಳೆದು 2011 ರಲ್ಲಿ ಅತ್ಯುತ್ತಮ ಪ್ರಗತಿ ಪರ ಕೃಷಿಕ ಎಂಬ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಅತಿ ವಿರಳವಾಗಿರುವ ವರ್ಷದ ಬೆಳೆಯಾದ ಶುಂಠಿ ಬೇಸಾಯವನ್ನು ಆರಂಭಿಸಿ ಗಮನ ಸೆಳೆದಿದ್ದಾರೆ. ಕೇವಲ 2.50 ಲಕ್ಷ ರೂಪಾಯಿ ಬಂಡವಾಳ ಹಾಕಿ ಬೆಳೆದ ಶುಂಠಿಯಿಂದ 28 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾಗಿ ಹನುಮಂತಪ್ಪ ಹೆಮ್ಮೆಯಿಂದ ವಿವರಿಸುತ್ತಾರೆ. ಈ ಕೃಷಿ ಚಟುವಟಿಕೆಗಳ ಜೊತೆಗೆ ಮಲಗೋವಾ, ರಸಪೂರಿ, ಬಾದಾಮಿ, ತೋಕಾಪುರಿ, ನೀಲಂ, ಮಲ್ಲಿಕಾ ಸೇರಿದಂತೆ 22 ವಿವಿಧ ಜಾತಿಯ ಮಾವಿನ ಮರಗಳು, 2 ಹಲಸು ಮರಗಳು, ತೋಟದ ಗಡಿಗೆ ಕಾಂಪೊಂಡು ಮಾದರಿಯಲ್ಲಿ 200ಕ್ಕೂ ಹೆಚ್ಚು ಟೀಕ್, ಹೆಬ್ಬೇವು ಮತ್ತು ಸಿಲ್ವರ್ ಓಕ್ ಹಾಗೂ 160 ಶ್ರೀಗಂಧ ಮರಗಳನ್ನು ಬೆಳೆಸಿದ್ದಾರೆ. ಇದು ಸಾಲದೆಂಬಂತೆ ಅತ್ಯುತ್ತಮ ಜಾವಾ ಜಾತಿಯ ಐದು ನೂರಕ್ಕೂ ಹೆಚ್ಚು ಕೋಳಿಗಳನ್ನು ಸಾಕುತ್ತಿದ್ದಾರೆ. ಪ್ರತಿ ಕೋಳಿಯು 2 ಸಾವಿರ ರೂಗಳಿಂದ 5 ಸಾವಿರ ರೂಗಳವರೆವಿಗೂ ಮಾರಾಟವಾಗುತ್ತವೆ. ನೀರಿನ ಲಭ್ಯತೆಯ ಅನುಸಾರವಾಗಿ ಯಾವುದೇ ಬೆಳೆ ಬೆಳೆದರೂ ನಷ್ಟವಾಗುವುದಿಲ್ಲ. ಏಕ ಬೆಳೆಗೆ ಜೋತು ಬೀಳದೆ ವೈವಿಧ್ಯಮಯ ಬೆಳೆ ತೆಗೆದರೆ ಒಂದು ನಷ್ಟವಾದರೂ ಮತ್ತೂಂದು ಕೈ ಹಿಡಿಯುತ್ತದೆ ಅನ್ನೋದಕ್ಕೆ ಹನುಮಂತಪ್ಪ ಉದಾಹರಣೆ. – ಕೆ.ಎಸ್.ಗಣೇಶ್