ಬೆಂಗಳೂರು: ನಿವೃತ್ತಿ ಹೊಂದಿದ ಬಳಿಕ ಪೊಲೀಸ್ ಅಧಿಕಾರಿಗಳು ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹೇಳಿದರು.
ಬೆಂಗಳೂರು ಮಹಾನಗರ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಮಂಗಳವಾರ ಆಡುಗೋಡಿಯ ದಕ್ಷಿಣ ಸಿಎಆರ್ ಆವರಣದಲ್ಲಿರುವ ಮಂಗಳ ಕಲ್ಯಾಣ ಮಂಟಪದಲ್ಲಿ ನಡೆದ ಸಂಘದ ಐದನೇ ವಾರ್ಷಿಕ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕಕ್ಕೆ ಒಂದೇ ಪೊಲೀಸರ ಸಂಘ ಇರಬೇಕು. ನಿವೃತ್ತರು ಒಗ್ಗಟ್ಟಿನಿಂದ ಇರಬೇಕು. ನಿವೃತ್ತರಿಗೆ ಆರೋಗ್ಯ ಭಾಗ್ಯ ಯೋಜನೆ ಪ್ರಾರಂಭವಾಗಿದ್ದು, ಅದರ ಸದುಪಯೋಗವನ್ನು ಎಲ್ಲರ ಪಡೆದುಕೊಳ್ಳಬೇಕು.
ಬೇರೆ ಬೇರೆ ರಾಜ್ಯಗಳಲ್ಲಿ ಕ್ಷೇಮಾಭಿವೃದ್ಧಿಗಾಗಿ ಪೊಲೀಸ್ ವೆಲ್‌ಫೇರ್ ಬೋರ್ಡ್‌ಗಳಿವೆ. ಅದೇ ರೀತಿ ಕರ್ನಾಟಕದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಅವಶ್ಯಕತೆ ಇದ್ದು, ಸಂಘದ ಮೂಲಕ ಹಲವು ಸೌಲಭ್ಯ ಪಡೆಯಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
ನಿವೃತ್ತ ಎಸಿಪಿ, ವಿಧಾನಪರಿಷತ್ ಮಾಜಿಸದಸ್ಯ ಅಬ್ದುಲ್ ಆಜೀಂ ಮಾತನಾಡಿದರು. ಇದೇ ವೇಳೆಯಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಸಿಬ್ಬಂದಿ ಮಕ್ಕಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಗೌರಾವಾಧ್ಯಕ್ಷ ಟಿ. ದಾಸಪ್ಪ, ಸಂಘದ ಅಧ್ಯಕ್ಷ ಯು.ಟಿ ವೆಂಕಟರಾಮು, ಉಪಾಧ್ಯಕ್ಷ ಕೆ.ಆರ್ ಪುಟ್ಟಸ್ವಾಮಿಗೌಡ, ಪ್ರಧಾನ ಕಾರ್ಯದರ್ಶಿ ಎಚ್.ಕೆ. ಕೃಷ್ಣ, ಗೌರವ ಕಾರ್ಯಾಧ್ಯಕ್ಷ ಬಸಪ್ಪ ಅಪ್ಪಯಪ್ಪ ಹೊಲಿ ಉಪಸ್ಥಿತರಿದ್ದರು.