Advertisement

ನಿವೃತ್ತ ಶಿಕ್ಷಕಿ ಜಾನಕಿ ಕೊಲೆ: ಶಿಷ್ಯ ಸಹಿತ ಇಬ್ಬರ ಬಂಧನ

08:46 AM Feb 23, 2018 | |

ಕಾಸರಗೋಡು: ಚೀಮೇನಿ ಪುಲಿಯನ್ನೂರಿನ ನಿವೃತ್ತ ಮುಖ್ಯೋ ಪಾಧ್ಯಾಯ ಕಿಳಕ್ಕೇಕರ ಕೃಷ್ಣನ್‌ ಅವರ ಪತ್ನಿ, ನಿವೃತ್ತ  ಶಿಕ್ಷಕಿ ಪಿ.ವಿ.ಜಾನಕಿ (65) ಅವರನ್ನು ಕೊಲೆ ಮಾಡಿ ನಗ, ನಗದು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಹೊಸದುರ್ಗ ಡಿವೈಎಸ್‌ಪಿ ಕೆ. ದಾಮೋದರನ್‌ ನೇತೃತ್ವದ ಪೊಲೀಸ್‌ ತಂಡ ಬಂಧಿಸಿದೆ. ಪ್ರಕರಣದ ಸೂತ್ರಧಾರ ಕೊಲ್ಲಿಗೆ ಪರಾರಿಯಾಗಿದ್ದಾನೆ.

Advertisement

ಚೀಮೇನಿ ಪುಲಿಯನ್ನೂರು ಚೇರ್ಕುಳಂ ನಿವಾಸಿಗಳಾದ ಪುದಿಯ ವೀಟಿಲ್‌ ವಿಶಾಕ್‌ (27) ಮತ್ತು ಚೆರ್ವಂಕೋಡ್‌ ರಿನೀಶ್‌ (20) ಬಂಧಿತರು. ಪ್ರಕರಣದ ಸೂತ್ರಧಾರ ಬೇರ್ತಳಂ ನಿವಾಸಿ, ಕೊಲ್ಲಿ ಉದ್ಯೋಗಿ ಮುಕ್ಲಿಕೋಡ್‌ ಅಳ್ಳರಾಡ್‌ ವೀಟಿಲ್‌ ಅರುಣಿ ಅಲಿಯಾಸ್‌ ಅರುಣ್‌ (26)  ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ  ಪ್ರಯತ್ನ ಮುಂದುವರಿದಿದೆ.

ವಿವರ

2017 ಡಿ. 13ರಂದು ರಾತ್ರಿ ಜಾನಕಿ ಅವರನ್ನು ಮನೆಯೊಳಗೆ  ಕೊಲೆ ಮಾಡಿ, ಅವರ ಪತಿ  ಕೃಷ್ಣನ್‌ (70) ಅವರನ್ನು ಗಂಭೀರವಾಗಿ ಗಾಯ ಗೊಳಿಸಲಾಗಿತ್ತು.  ಮನೆಯಿಂದ 18 ಪವನ್‌ ಚಿನ್ನದೊಡವೆ ಮತ್ತು 64 ಸಾ.ರೂ. ದರೋಡೆ ಮಾಡಲಾಗಿತ್ತು.  ಆರೋಪಿಗಳ ಪೈಕಿ ರಿನೀಶ್‌ ಪ್ರಾಥಮಿಕ ಶಾಲೆಯಲ್ಲಿ ಜಾನಕಿಯ ಶಿಷ್ಯನಾಗಿದ್ದ. ಇತರ ಇಬ್ಬರು  ಕೃಷ್ಣನ್‌   ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದ ಶಾಲೆಯ ವಿದ್ಯಾರ್ಥಿಗಳಾಗಿದ್ದರು.

ಅರುಣ್‌ ನೇತೃತ್ವದಲ್ಲಿ  ಮನೆಯಿಂದ ದರೋಡೆಗೆ ಸ್ಕೆಚ್‌ ಹಾಕಲಾಗಿತ್ತು. ಬಹ್ರೈನ್‌ನಲ್ಲಿ ಕೆಲಸದಲ್ಲಿರುವ ಅರುಣ್‌ ಪ್ರಕರಣ ನಡೆಯುವ ಕೆಲವು ದಿನಗಳ ಹಿಂದೆಯಷ್ಟೇ  ಊರಿಗೆ ಬಂದಿದ್ದ. ಕೊಲೆ, ದರೋಡೆ  ಬಳಿಕ ಫೆ.4ರಂದು  ಬಹ್ರೈನ್‌ಗೆ ಪರಾರಿಯಾಗಿದ್ದಾನೆಂದು ತನಿಖಾ ತಂಡ ತಿಳಿಸಿದೆ.  ವಿಶಾಕ್‌ ಸಿ.ಸಿ.ಟಿ.ವಿ.  ಕೆಮರಾ ಇತ್ಯಾದಿಗಳನ್ನು  ಅಳವಡಿಸುವ ಮೆಕ್ಯಾನಿಕ್‌ ಆಗಿದ್ದು, ರಿನೀಶ್‌  ಕೂಲಿ ಕೆಲಸ ಮಾಡುತ್ತಿದ್ದ.  

Advertisement

ಕೊಲೆ ಮಾಡಲು ಬಳಸಿದ ಚಾಕುವನ್ನು ಪಕ್ಕದ ಹೊಳೆಗೆ ಎಸೆದಿದ್ದು, ಮೊಬೈಲ್‌ ಫೋನನ್ನು  ಪಕ್ಕದ ಕೆಂಪುಕಲ್ಲು ಕೋರೆಗೆ ಎಸೆದಿರುವುದಾಗಿ ಪೊಲೀಸರು ತಿಳಿಸಿದ್ದು, ಅದನ್ನು ಪತ್ತೆಹಚ್ಚುವ  ಪ್ರಯತ್ನ ನಡೆಯುತ್ತಿದೆ.

ಪೊಲೀಸರಿಗೆ ಸಹಕರಿಸಿದ್ದರು!
ಪ್ರಕರಣದಲ್ಲಿ ತಮ್ಮ ಪಾತ್ರದ ಬಗ್ಗೆ ಯಾವುದೇ ಶಂಕೆಗೆ ಕಾರಣವಾಗದಂತೆ ಪೊಲೀಸರೊಂದಿಗೆ  ಆರೋಪಿಗಳು ಸಹಕರಿಸಿದ್ದರು. ಹಂತಕರು ಬಳಸಿದ ಮೊಬೈಲ್‌ ಅನ್ನು ಜಾನಕಿ ಅವರ ಬಾವಿಗೆ ಎಸೆದಿರಬಹುದೆಂಬ ಶಂಕೆ ಯಿಂದ  ನೀರನ್ನು ಖಾಲಿ ಮಾಡುವ ಕೆಲಸದಲ್ಲೂ  ಆರೋಪಿಗಳು  ಸಹಾಯ ಒದಗಿಸಿದ್ದರು. ಮೊಬೈಲ್‌ ಹುಡು ಕಾಡಲು  ಅರುಣ್‌ ಬಾವಿಗಿಳಿದಿದ್ದ. ಕೊಲೆಗೆ ಸಂಬಂಧಿಸಿ  ಈ ಪ್ರದೇಶದ ಹೆಚ್ಚಿನ ಎಲ್ಲರ ಬೆರಳ ಗುರುತುಗಳನ್ನು ಸಂಗ್ರಹಿಸಿದ್ದರು. ತನಿಖೆ ಸಂದರ್ಭ ಸಹಾಯ ನೀಡುತ್ತಿದ್ದ  ಹಿನ್ನೆಲೆಯಲ್ಲಿ  ಸೆರೆಯಾಗಿರುವ ಆರೋಪಿಗಳು ಸಹಿತ 9 ಮಂದಿಯ ಬೆರಳ ಗುರುತುಗಳನ್ನು  ಸಂಗ್ರಹಿಸಿರಲಿಲ್ಲ.

ಗುರುತು ಸಿಕ್ಕಿದ್ದರಿಂದ ಕೊಲೆ  
ಆರೋಪಿಗಳು  ಮುಖವಾಡ ಧರಿಸಿ  ಮನೆಗೆ  ಬಂದು ಕಳವು ನಡೆಸಲೆತ್ನಿಸಿದಾಗ  ಶಿಷ್ಯ ರಿನೀಶ್‌ನನ್ನು ಜಾನಕಿ ಗುರುತು ಹಚ್ಚಿದ್ದರು.  ತಾವು ಸಿಕ್ಕಿ ಬೀಳಬಹುದೆಂಬ ಭಯವೇ  ಜಾನಕಿ ಅವರನ್ನು ಕೊಲೆಗೈಯಲು ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುತು ಚೀಟಿಯಿಂದ ಸೆರೆ ಸಿಕ್ಕರು!
ಆರೋಪಿಗಳ ಬಂಧನಕ್ಕೆ ನೆರವಾದದ್ದು ಅವರ ಗುರುತು ಚೀಟಿಗಳು. ಕದ್ದ ಚಿನ್ನವನ್ನು ಮಾರಾಟ ಮಾಡುವಾಗ ಚಿನ್ನದಂಗಡಿಗೆ ನೀಡಿದ ಗುರುತು ಪತ್ರ ಪೊಲೀಸರಿಗೆ ಸಹಾಯವಾಯಿತು. ಚಿನ್ನವನ್ನು ಅದೇ ದಿನ ರಾತ್ರಿ ಮೂವರು ಸಮಾನವಾಗಿ ಹಂಚಿಕೊಂಡಿದ್ದರು.  ಕದ್ದ ಚಿನ್ನವನ್ನು ಚಿನ್ನದಂಗಡಿಗೆ ಮಾರಾಟ ಮಾಡಿರಬಹುದೆಂಬ ಶಂಕೆಯಿಂದ ಪೊಲೀಸರು ಎಲ್ಲ ಚಿನ್ನದಂಗಡಿಗಳನ್ನು ಕೇಂದ್ರೀಕರಿಸಿ ತನಿಖೆ ನಡೆಸಿದ್ದರು. ವಿಶಾಕ್‌ ಫೆ.15ರಂದು  ಚಿನ್ನವನ್ನು ಕಣ್ಣೂರಿನ ಚಿನ್ನದಂಗಡಿಗೆ ಮಾರಾಟ ಮಾಡಿದ್ದು,  ಆಗ  ಗುರುತುಪತ್ರದ ಪ್ರತಿ ಮತ್ತು  ವಿಳಾಸ ನೀಡಿದ್ದ. ಪೊಲೀಸರು ಅಲ್ಲಿ ಪರಿಶೀಲಿಸಿದಾಗ ಚೀಮೇನಿ ಪುಲಿಯನ್ನೂರಿನ ವಿಶಾಕ್‌ ಚಿನ್ನ ಮಾರಾಟ ಮಾಡಿರುವುದು ತಿಳಿದು ಬಂತು. ಅದರ ಜಾಡು ಹಿಡಿದು ನಡೆಸಿದ ಶೋಧದಲ್ಲಿ ವಿಶಾಕ್‌ ಮತ್ತು ರಿನೀಶ್‌ನನ್ನು ಬಂಧಿಸಲು ಸಾಧ್ಯವಾಯಿತು.  ಚಿನ್ನವನ್ನು ಕಣ್ಣೂರು,ಪಯ್ಯನ್ನೂರು ಹಾಗೂ ಮಂಗಳೂರಿನ ಕೆಲವು ಚಿನ್ನದಂಗಡಿಗಳಿಗೆ ಮಾರಾಟ ಮಾಡಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next