Advertisement
ಎಂ. ಎ., ಎಲ್‌ಎಲ್‌ಬಿ ಪದವೀಧರ ಮಜೂರು ಗ್ರಾಮದ ಉಳಿಯಾರಿನ ಪ್ರಗತಿಪರ ಕೃಷಿಕರಾಗಿರುವ ಗೋಪಾಲ್ ಕುಂದರ್ ಮೂಲತಃ ಪಾಂಗಾಳ ಗುಡ್ಡೆ ಗರಡಿ ಮನೆಯ ಕೃಷಿಕ ಕುಟುಂಬಕ್ಕೆ ಸೇರಿದವರು. ಉದ್ಯೋಗವನ್ನು ಅರಸಿ ಕರಾವಳಿಯಿಂದ ಮುಂಬಯಿಗೆ ತೆರಳಿ ಹಗಲು ಕೆಲಸ ಮಾಡಿ ರಾತ್ರಿ ಶಾಲೆಗೆ ತೆರಳಿ ವಿದ್ಯೆ ಕಲಿತ ಇವರು ಎಂ. ಎ. / ಎಲ್.ಎಲ್.ಬಿ. ಪದವಿಯನ್ನು ಪಡೆದಿರುವರು. ಮುಂದೆ ಎಲ್‌ಐಸಿಯಲ್ಲಿ ಉದ್ಯೋಗಿಯಾಗಿ ವೃತ್ತಿ ಜೀವನವನ್ನು ಪ್ರಾರಂಭಿಸಿದ್ದರು.
ಬಾಲ್ಯದಿಂದಲೂ ಕೃಷಿಯತ್ತ ಒಲವು ಹೊಂದಿದ್ದ ಗೋಪಾಲ್ ಕುಂದರ್ ಅವರು ಎಲ್‌ಐಸಿ ಉದ್ಯೋಗದೊಂದಿಗೆ ಮುಂಬಯಿಯಿಂದ ಊರಿಗೆ ಮರಳಿದ ಬಳಿಕ ವೃತ್ತಿಯ ಜತೆಗೆ ಕೃಷಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡರು. ಮನೆ ಪದಾರ್ಥಕ್ಕಾಗಿ ಬೆಳೆಸಿದ ತರಕಾರಿ ರುಚಿಯನ್ನು ತನ್ನ ಸಹೋದ್ಯೋಗಿಗಳಿಗೂ ನೀಡಲಾರಂಭಿಸಿದ್ದರು. ಗೋಪಾಲಣ್ಣನ ಮನೆಯಲ್ಲಿ ಬೆಳೆದ ಬೆಂಡೆಯ ರುಚಿ ಸವಿದ ಅವರ ಸಹೋದ್ಯೋಗಿಗಳು ಎಲ್‌ಐಸಿ ಬೆಂಡೆಯೆಂದೇ ಕರೆಯಲಾರಂಭಿಸಿದರು. ಇದನ್ನೇ ಪ್ರೇರಣೆಯಾಗಿಸಿಕೊಂಡ ಅವರು ನಿವೃತ್ತಿಯ ಬಳಿಕ ಕೃಷಿಯನ್ನೇ ತಮ್ಮ ಜೀವಾಳವನ್ನಾಗಿಸಿಕೊಂಡಿದ್ದಾರೆ. ಬೆಂಡೆ ಕೃಷಿಯಿಂದ ಗೊಂಡೆ ಕೃಷಿಯವರೆಗೆ ಪಯಣ
ಆರಂಭದಲ್ಲಿ ಬೆಂಡೆ ಕೃಷಿಯ ಮೂಲಕ ತರಕಾರಿ ಕೃಷಿ ಬದುಕನ್ನು ಪ್ರಾರಂಭಿಸಿದ ಗೋಪಾಲ್ ಕುಂದರ್ ಅವರು ಬಳಿಕ ತನ್ನ ಪತ್ನಿ ರೋಹಿಣಿ ಅವರ ಸಹಕಾರದೊಂದಿಗೆ ತರಕಾರಿ ಬೆಳೆಗಳನ್ನು ಬೆಳೆಸತೊಡಗಿದರು. ಜೋಳ, ಪಡುವಳ ಕಾಯಿ, ಸೋರೆ ಕಾಯಿ ಬೆಳೆಯತ್ತಲೂ ಗಮನ ಹರಿಸಿದ ಅವರು ಕರಾವಳಿಯ ಮಣ್ಣಿನಲ್ಲಿ ಗೊಂಡೆ ಹೂವಿನ ಬೆಳೆಯನ್ನು ಬೆಳೆಸುವ ಮೂಲಕ ಎಲ್ಲರ ಗಮನ ಸೆಳೆದರು. ಇತರೆಲ್ಲಾ ತರಕಾರಿ ಕೃಷಿಗಳಿಗೂ ಕ್ರಿಮಿನಾಶಕವೆಂದೇ ಹೇಳಲಾಗುತ್ತಿರುವ ಗೊಂಡೆ ಬೆಳೆ ಉತ್ತಮ ಇಳುವರಿಯನ್ನು ನೀಡುವ ಮೂಲಕ ಇವರ ಕೈ ಹಿಡಿಯಿತು.
Related Articles
ಬೆಂಡೆ ಮತ್ತು ಗೊಂಡೆಯ ಯಶಸ್ಸಿನ ಬಳಿಕ ಮತ್ತೂಂದು ರೀತಿಯ ಕೃಷಿಯತ್ತ ಒಲವು ತೋರಿಸಿದ ಅವರು ಪೇಟೆಯಿಂದ ಪದಾರ್ಥಕ್ಕಾಗಿ ತಂದ ಬಸಳೆ ತುಂಡುಗಳನ್ನು ದರ ತೆಗೆದು ನೆಟ್ಟು ಬಸಳೆ ಕೃಷಿಯತ್ತಲೂ ಮನ ಹಾಯಿಸಿದರು. ಬಸಳೆ ಗಿಡಗಳು ಬೆಳೆಯುತ್ತಾ ಬಂದಂತೆ ಅದರಲ್ಲಿ ಕಾಯಿ ಆಗುವುದನ್ನೂ ವೀಕ್ಷಿಸಿದ ಅವರು ಕುತೂಹಲಕ್ಕಾಗಿ ಈ ಕಾಯಿಗಳನ್ನೇ ಒಣಗಿಸಿ, ಬೀಜದಿಂದಲೂ ಬಸಳೆ ಕೃಷಿ ಮಾಡಬಹುದೆನ್ನುವುದನ್ನು ಆವಿಷ್ಕರಿಸಿದರು. ಆ ಮೂಲಕ ಬಸಳೆ ಕೃಷಿಯೂ ಅವರ ಕೈ ಹಿಡಿಯಿತು.
Advertisement
ಸಾವಯವ ಗೊಬ್ಬರವೇ ಬಳಕೆಹಟ್ಟಿಗೊಬ್ಬರ ಮತ್ತು ಸುಡುಮಣ್ಣಿನ ಮಿಶ್ರಣವನ್ನೇ ಹದ ಮಾಡಿ ತನ್ನೆಲ್ಲ ತರಕಾರಿ ಕೃಷಿಗಳಿಗೆ ಬಳಸುತ್ತಾ ಬರುತ್ತಿರುವುದರಿಂದ ಗೋಪಾಲ ಕುಂದರ್ ಅವರು ಬೆಳೆದ ತರಕಾರಿಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಬೆಳಗ್ಗೆದ್ದು ಎರಡು ಕ್ಯಾನ್‌ಗಳಲ್ಲಿ ಗೋಮೂತ್ರ, ಸೆಗಣಿ, ಸುಡುಮಣ್ಣಿನ ಮಿಶ್ರಣವನ್ನು ತಾನೇ ಹದ ಮಾಡಿ ಗದ್ದೆಗೆ ಸುರಿಯುತ್ತಾರೆ. ಸಾವಯವ ಗೊಬ್ಬರ ಆರೋಗ್ಯಕ್ಕೆ ಉತ್ತಮ ಮತ್ತು ಉತ್ತಮ ಇಳುವರಿ ನೀಡುವಲ್ಲಿಯೂ ಸಹಕಾರಿ ಎಂಬ ಭಾವನೆ ಅವರದ್ದು. ಬಸಳೆ ಬೀಜದಿಂದ ಗಿಡ ಮಾಡುವ ವಿಧಾನ
ಬಸಳೆ ಗಿಡ ಬಿಡುವ ಬಿಳಿ ಬಣ್ಣದ ಹೂವುಗಳು ಮುಂದೆ ನೇರಳೆ ಬಣ್ಣದ ಕಾಯಿಗಳಾಗಿ ಪರಿವರ್ತನೆಗೊಳ್ಳುತ್ತವೆ. ಆ ನೇರಳೆ ಬಣ್ಣದ ಕಾಯಿಗಳನ್ನು ಮೂರರಿಂದ ನಾಲ್ಕು ದಿನ ಬಿಸಿಲಿನಲ್ಲಿ ಒಣಗಿಸಿದ ಬಳಿಕ ಹದ ಮಾಡಿದ ನೆಲದಲ್ಲಿ ಬಿತ್ತನೆ ಮಾಡಿ ನೀರುಣಿಸಿದರೆ ಬಸಳೆ ಗಿಡಗಳು ಮೊಳಕೆಯೊಡೆಯುತ್ತವೆ. ಮೊಳಕೆಯೊಡೆದ ಬಸಳೆ ಗಿಡಗಳನ್ನು ದರ ಅಗೆದು ಕೆಳಭಾಗದಲ್ಲಿ ಒಣಗೊಬ್ಬರ ಹಾಕಿ ಮಣ್ಣಿನ ಮಿಶ್ರಣದೊಂದಿಗೆ ನೆಡಬೇಕು. ಹೀಗೆ ನೆಟ್ಟ ಗಿಡಗಳು ಬೆಳವಣಿಗೆಗೆ ಅನುಗುಣವಾಗಿ ಸುಡು ಮಣ್ಣು, ಸಾವಯವ ಗೊಬ್ಬರ ಹಾಕಿ ಪೋಷಿಸಿಕೊಂಡು ಬರಬೇಕು. ಸಮರ್ಪಕ ರೀತಿಯಲ್ಲಿ ಬಸಳೆ ಗಿಡ ಬೆಳೆದರೆ 20-25 ದಿನಗಳೊಳಗಾಗಿ ಬಸಳೆಯನ್ನು ತುಂಡರಿಸಿ ಮಾರುಕಟ್ಟೆಗೆ ಕೊಂಡೊಯ್ಯಬಹುದಾಗಿದೆ. ಬದುಕು ಕಟ್ಟಲು ಪ್ರೇರಣೆ
ಸ್ವಂತ ಪರಿಶ್ರಮದೊಂದಿಗೆ ಮಕ್ಕಳನ್ನು ಸಾಕಿದಂತೆ ಕೃಷಿ ಕಾರ್ಯದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಬರುವ ಮೂಲಕ ದಿನದ ಕನಿಷ್ಠ 2-3 ಗಂಟೆಗಳನ್ನು ಕೃಷಿ ಗದ್ದೆಯಲ್ಲಿ ಕಳೆಯುತ್ತೇನೆ. ಬಹಳಷ್ಟು ಮಂದಿ ಕೃಷಿ ಲಾಭದಾಯಕವಲ್ಲ ಎಂದು ಹೇಳುತ್ತಾರೆ. ಆದರೆ ನಾನು ಕೃಷಿಯ ಮೇಲೆ ಪ್ರೀತಿಯಿಟ್ಟಿದ್ದು, ಕೃಷಿ ನಿರಂತರವಾಗಿ ನನ್ನ ಕೈ ಹಿಡಿದಿದೆ.
– ಗೋಪಾಲ ಕುಂದರ್ – ರಾಕೇಶ್ ಕುಂಜೂರು