ಬೆಂಗಳೂರು: ಕಳವು ಮಾಡಿದ ಬ್ಲ್ಯಾಕ್ ಪಲ್ಸರ್ ಬೈಕ್‌ಗಳಲ್ಲಿ ಬಂದು ಸರ ಕಳವು ಮಾಡಿ ಪರಾರಿಯಾಗುತ್ತಿದ್ದ ಸರಗಳ್ಳರು ಇದೀಗ ಹೈಟೆಕ್ ಆಗಿದ್ದು, ಕಾರುಗಳಲ್ಲಿ ಬಂದು ಕೃತ್ಯವೆಸಗಲು ಆರಂಭಿಸಿದ್ದಾರೆ. ಹೌದು, ರಿಡ್ಜ್ ಕಾರಿನಲ್ಲಿ ಬಂದು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರ ಕಳವು ಮಾಡುತ್ತಿದ್ದ ನಿವೃತ್ತ ಐಎಎಸ್ ಅಧಿಕಾರಿಯ ಕಾರು ಚಾಲಕ ಸೇರಿದಂತೆ ಮೂವರು ಕಾರು ಚಾಲಕರನ್ನು ಉತ್ತರ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಕೆಂಗೇರಿ ನಿವಾಸಿಗಳಾದ ಪ್ರದೀಪ್, ಪುರುಷೋತ್ತಮ್ ಹಾಗೂ ಪ್ರಜ್ವಲ್‌ನನ್ನು ಮಹಾಲಕ್ಷಿ ಲೇಔಟ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ಬಂಧನದಿಂದ ನಗರದ ಹತ್ತು ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ 18 ಸರ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಇವರಿಂದ 27,34 ಲಕ್ಷ ರೂ. ಮೌಲ್ಯದ 700 ಗ್ರಾಂ ಚಿನ್ನಾಭರಣ, ಒಂದು ಮಾರುತಿ ರಿಡ್ಜ್ ಕಾರು, ಪಲ್ಸರ್ ಬೈಕ್, 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಪೈಕಿ ಪುರುಷೋತ್ತಮ್ ಈ ಮೊದಲು ಯವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಐಎಎಸ್ ಅಧಿಕಾರಿಯೊಬ್ಬರ ಕಾರು ಚಾಲಕನಾಗಿದ್ದು, ಅಧಿಕಾರಿ ನಿವೃತ್ತರಾದ ಬಳಿಕವೂ ತಮ್ಮ ಖಾಸಗಿ ಕಾರಿಗೆ ಈತನನ್ನೇ ಚಾಲಕನಾಗಿ ನೇಮಕ ಮಾಡಿಕೊಂಡಿದ್ದರು. ಈ ಮಧ್ಯೆ ಆರೋಪಿ ಪ್ರದೀಪ್ ಮತ್ತು ಪ್ರಜ್ವಲ್ ಜತೆ ಸೇರಿಕೊಂಡು ರಾತ್ರಿ ಮತ್ತು ಹಗಲು ವೇಳೆ ಕೃತ್ಯವೆಸಗುತ್ತಿದ್ದರು.
ಕಳೆದ ವರ್ಷವಷ್ಟೇ ಪ್ರದೀಪ್ ರಿಡ್ಜ್ ಕಾರನ್ನು ಖರೀದಿಸಿದ್ದು, ಬಾಡಿಗೆಗೆ ಓಡಿಸುತ್ತಿದ್ದ. ನಂತರ ತನ್ನ ಸ್ನೇಹಿತರಾದ ಪುರುಷೋತ್ತಮ್ ಮತ್ತು ಪ್ರಜ್ವಲ್ ಜತೆ ಸೇರಿಕೊಂಡು ಬಹುಬೇಗ ಹಣ ಸಂಪಾದಿಸಲು ನಿರ್ಧರಿಸಿದ್ದರು. ಅದರಂತೆ ಆರೋಪಿಗಳು ರಿಡ್ಜ್ ಕಾರಿನಲ್ಲಿ ನಿರ್ಜನ ಪ್ರದೇಶದಲ್ಲಿ ಓಡಾಡುವ ಒಂಟಿ ಮಹಿಳೆಯರ ಮೇಲೆ ದಾಳಿ ನಡೆಸಿ ಸರಗಳನ್ನು ಕಳವು ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಐಷಾರಾಮಿ ಜೀವನಕ್ಕಾಗಿ ಸರಗಳ್ಳತನ: ಮೂವರು ಆರೋಪಿಗಳು ರಿಡ್ಜ್ ಕಾರಿನಲ್ಲಿ ಬಂದು ನಗರದಲ್ಲಿ ಒಂಟಿಯಾಗಿ ಓಡಾಡುವ ಮಹಿಳೆಯರನ್ನು ಗುರುತ್ತಿಸುತ್ತಿದ್ದರು. ಬಳಿಕ ಆರೋಪಿ ಪ್ರಜ್ವಲ್ ಮಹಿಳೆಯನ್ನು ಹಿಂಬಾಲಿಸಿಕೊಂಡು ಸರ ಕಸಿದುಕೊಂಡು ಕಾರಿನೊಳಗೆ ಕುಳಿತುಕೊಳ್ಳುತ್ತಿದ್ದ, ಪ್ರದೀಪ್ ಕ್ಷಣಮಾತ್ರದಲ್ಲಿ ಬೇರೆ ಪ್ರದೇಶಕ್ಕೆ ಕಾರು ಕೊಂಡೊಯ್ಯುತ್ತಿದ್ದ. ಪುರುಷೋತ್ತಮ್ ಯಾರಾದರೂ ಬಂದರೆ ಸನ್ನೆ ಮೂಲಕ ಎಚ್ಚರಿಸುತ್ತಿದ್ದ. ನಂತರ ಕಳವು ಮಾಡಿದ್ದ ಚಿನ್ನಾಭರಣವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ಮಾಲಿನಿ ಕೃಷ್ಣಮೂರ್ತಿ ತಿಳಿಸಿದರು.
ಜೈಲು ಸೇರಿದ್ದ ಪ್ರದೀಪ್: ಪ್ರದೀಪ್‌ನನ್ನು ಜುಲೈನಲ್ಲಿ ಅಮೃತಹಳ್ಳಿ ಪೊಲೀಸರು ದರೋಡೆ ಪ್ರಕರಣದಲ್ಲಿ ಈತನನ್ನು ಬಂಧಿಸಿದ್ದರು. ಪ್ರಕರಣವೊಂದರಲ್ಲಿ ಮಹಾಲಕ್ಷಿಲೇಔಟ್ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯಗಳ ಬಗ್ಗೆ ಬಾಯಿಬಿಟ್ಟಿದ್ದಾನೆ. ಈತನ ಮಾಹಿತಿ ಮೇರೆಗೆ ಪುರುಷೋತ್ತಮ್ ಮತ್ತು ಪ್ರಜ್ವಲ್‌ನನ್ನು ಬಂಧಿಸಲಾಗಿದೆ ಎಂದರು.