ಕಾಪು: ಮಣಿಪಾಲ ಶಿವಳ್ಳಿಯಿಂದ ಇನ್ನಂಜೆಯ ತಂಗಿಯ ಮನೆಗೆ ಬಂದಿದ್ದ ನಿವೃತ್ತ ಮುಖ್ಯ ಶಿಕ್ಷಕರೋರ್ವರು ಪಕ್ಕದ ತೋಡಿಗೆ ಬಿದ್ದು ಮೃತಪಟ್ಟ ಘಟನೆ ನ. 8 ರಂದು ಬೆಳಕಿಗೆ ಬಂದಿದೆ.
ಉಡುಪಿಯ ಶಿವಳ್ಳಿ ಗ್ರಾಮದ ಮೂಡುಪೆರಂಪಳ್ಳಿಯ ಖಾಸಗಿ ಅನುದಾನಿತ ಹಿ.ಪ್ರಾ. ಶಾಲೆಯ (ಶಿವತ್ತಾಯರ ಶಾಲೆ) ನಿವೃತ್ತ ಮುಖ್ಯ ಶಿಕ್ಷಕ ರಾಮದಾಸ ಶಿವತ್ತಾಯ (75) ಮೃತ ವ್ಯಕ್ತಿ. ನ. 6ರಂದು ಮಧ್ಯಾಹ್ನ ಮನೆಗೆ ಬೀಗ ಹಾಕಿ ಎಲ್ಲಿಗೋ ಹೋಗಿದ್ದ ರಾಮದಾಸ್ ಶಿವತ್ತಾಯ ಅವರು ನಾಪತ್ತೆಯಾಗಿರುವ ಬಗ್ಗೆ ಸಹೋದರನ ಮಗ ನ. 7ರಂದು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ರಾಮದಾಸ ಶಿವತ್ತಾಯ ಅವರು ಇನ್ನಂಜೆಯಲ್ಲಿರುವ ತಂಗಿ ಮನೆಗೆ ಬಂದಿರಬಹುದೆಂಬ ಅನುಮಾನದಲ್ಲಿ ಇನ್ನಂಜೆಗೆ ಬಂದು ಉಂಡಾರು ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಸಿಸಿ ಕೆಮರಾವನ್ನು ಪರಿಶೀಲಿಸಿದಾಗ ದೇವಸ್ಥಾನದ ಪ್ರಾಂಗಣದಲ್ಲಿ ತಿರುಗಾಡುತ್ತಿರುವ ದೃಶ್ಯ ಕಂಡು ಬಂದಿದ್ದು ಮಂಗಳವಾರ ಬೆಳಗ್ಗೆ ಇನ್ನಂಜೆಗೆ ಬಂದು ಹುಡುಕಾಡಿದಾಗ ಉಂಡಾರು ದೇಗುಲದ ಬಳಿಯ ಸಣ್ಣದಾದ ತೋಡಿನಲ್ಲಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದು ಕಂಡುಬಂದಿದೆ.
ತಂಗಿಯ ಮನೆಗೆ ಬಂದವರು ದಾರಿ ತಪ್ಪಿ ತೋಡಿನ ಕಡೆಗೆ ಹೋಗಿ ಆಕಸ್ಮಿಕವಾಗಿ ತೋಡಿನ ನೀರಿಗೆ ಬಿದ್ದು ಮೃತಪಟ್ಟಿರುವುದಾಗಿ ಶಶಾಂಕ್ ಶಿವತ್ತಾಯ ಕಾಪು ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಕಾಪು ಪೊಲೀಸರು ಪ್ರಕರಣ ದಾಖಲಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮೃತರು ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಪ್ರೀತಿ ಅಭಿಮಾನ ಹೊಂದಿದ್ದ ಅವರು ತಮ್ಮ ಮನೆಯ ಆವರಣದಲ್ಲೇ ಕಟೀಲು, ಧರ್ಮಸ್ಥಳ, ಮಂದಾರ್ತಿ, ಕರ್ನಾಟಕ ಮೇಳ ಸೇರಿದಂತೆ ಒಟ್ಟು 7 ಮೇಳಗಳ ಯಕ್ಷಗಾನ ಬಯಲಾಟ ಸೇವೆಯನ್ನೂ ನಡೆಸಿದ್ದರು.