ಕುಷ್ಟಗಿ: ಪಿಂಚಣಿಯಲ್ಲಿ ಪ್ರತಿ ತಿಂಗಳು 6 ಸಾವಿರ ರೂ. ದಿಂದ 10ಸಾವಿರ ರೂ. ಟಿಡಿಎಸ್ ಟ್ಯಾಕ್ಸ್ ಕಡಿತ ಖಂಡಿಸಿ ನಿವೃತ್ತಿ ನೌಕರರು ಇಲ್ಲಿನ ಕೆನರಾ ಬ್ಯಾಂಕ್ ಮುಂಭಾಗದಲ್ಲಿ ಪ್ರತಿಭಟಿಸಿ ಆಕ್ರೋಶ ವ್ಯಕ್ತ ಪಡಿಸಿದರು.
ಕುಷ್ಟಗಿಯ ಕೆನರಾ ಬ್ಯಾಂಕ್ ಶಾಖೆಯ ಮುಂದೆ ಅನಿರ್ದಿಷ್ಟವಾಧಿ ಧರಣಿ ನಿರತರಾದ ನಿವೃತ್ತ ನೌಕರರು, ಯಾವುದೇ ಮಾಹಿತಿ ಇಲ್ಲದೇ ಪ್ರತಿ ತಿಂಗಳ ನಿವೃತ್ತ ವೇತನದಲ್ಲಿ ನಿವೃತ್ತ ನೌಕರರ ವಿರೋಧದ ಹೊರತಾಗಿಯೂ ಟಿಡಿಎಸ್ ರೂಪದಲ್ಲಿ ಕಡಿತ ಮಾಡುತ್ತಿರುವುದನ್ನು ಮುಂದುವರಿಸಿರುವುದನ್ನು ಪ್ರಶ್ನಿಸಿದರು. ಇದಕ್ಕೆ ಸ್ಪಂದಿಸದೇ ಇದ್ದಲ್ಲಿ ಅನಿರ್ದಿಷ್ಟವಾಧಿ ಧರಣಿ ಮುಂದುವರಿಸುವುದಾಗಿ ಎಚ್ಚರಿಸಿದರು. ಇದೇ ವೇಳೆ ಬ್ಯಾಂಕ್ ವ್ಯವಸ್ಥಾಪಕ ಮೂಕಪ್ಪ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದರು.
ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಸ್.ಎಚ್. ಹಿರೇಮಠ ಮಾತನಾಡಿ, ಕಳೆದ ಸೆಪ್ಟೆಂಬರ್ 2020 ರಿಂದ ನಿವೃತ್ತಿ ನೌಕರರ ವೇತನದಲ್ಲಿ ಟಿಡಿಎಸ್ ಎಂದು ಕಡಿತ ಮಾಡುತ್ತಿದ್ದು, ಇದಕ್ಕೆ ವಿಚಾರಿಸಿದರೆ ಸಮರ್ಪಕ ಉತ್ತರ ನೀಡದೇ ಇಳಿ ವಯಸ್ಸಿನ ನೌಕರರನ್ನು ಸತಾಯಿಸುತ್ತಿದ್ದಾರೆ. ಸಿಂಡಿಕೇಟ್ ಮತ್ತು ಕೆನರಾ ಬ್ಯಾಂಕ್ ವಿಲೀನದಿಂದ ಈ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಬೆಂಗಳೂರಿನ ಸೆಂಟ್ರಲ್ ಪೆನ್ಷನ್ ಪ್ರೋಸೆಸಿಂಗ್ ಯುನಿಟ್ ( CPPC) ಗೆ ದೂರು ನೀಡಲಾಗಿದ್ದು ಸಿಂಡಿಕೇಟ್ ಯಾವ ರೀತಿ ಮಾಹಿತಿ ನೀಡಿದೆಯೇ ಅದೇ ಪ್ರಕಾರ ಮುಂದುವರಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿವೃತ್ತಿದಾರರ ವೇತನ ವಾರ್ಷಿಕ 5 ಲಕ್ಷ ರೂ. ಮೀರಿದರೆ ತೆರಿಗೆ ವಿಧಿಸಲು ಸಾದ್ಯವಿದೆ. ನಿವೃತ್ತಿ ನೌಕರರ ವೇತನ 35ಸಾವಿರ ರೂ. 40 ಸಾವಿರ ರೂ. ಇದ್ದರೂ 6 ರಿಂದ 8 ಸಾವಿರ ರೂ. ಕಡಿತ ಮಾಡುತ್ತಿದ್ದಾರೆ. ಅಲ್ಲದೇ ಈ ಬ್ಯಾಂಕಿನಲ್ಲಿ ಹಿರಿಯ ನಾಗರೀಕರಿಗೆ ಕಿಮ್ಮತ್ತು ಇಲ್ಲ ಕಳೆದ ಮೂರು ವರ್ಷಗಳಿಂದ ಪಾಸಬುಕ್ ಎಂಟ್ರೀ ಬಂದ್ ಆಗಿದ್ದು, ನಿವೃತ್ತಿ ವೇತನದಲ್ಲಿ ಕಡಿತದಲ್ಲಿ ವ್ಯತ್ಯಾಸ ಗೊತ್ತಾಗುವುದಿಲ್ಲ. ಈ ಇಳಿವಯಸ್ಸಿನಲ್ಲಿ ಬ್ಯಾಂಕ್ ಸತಾಯಿಸುತ್ತಿರುವುದಕ್ಕೆ ಪ್ರತಿಭಟನೆಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ನಿವೃತ್ತ ನೌಕರ ಸಂಘದ ಜೆ.ಶರಣಪ್ಪ, ಬಿ.ಎಚ್. ಕಟ್ಟಿಮನಿ, ಶರಣಪ್ಪ ಬ್ಯಾಲಿಹಾಳ, ವೀರಪ್ಪ ಬಳಿಗಾರ, ಹ.ಯ.ಈಟಿಯವರ್, ತಿಮ್ಮಣ್ ವಡಿಗೇರಿ, ತಿಪ್ಪಣ್ಣ ಪಂಚಮ್ ಮತ್ತೀತರಿದ್ದರು.