Advertisement

ಕೃಷಿ ಕಾಯಕದಲ್ಲಿ ನಿರತ ನಿವೃತ್ತ ಬ್ರಿಗೇಡಿಯರ್‌ ನಾಞಪ್ಪ ರೈ

07:10 AM Aug 22, 2017 | Team Udayavani |

ಕುಂಬಳೆ: ಕೃಷಿಯೆಂದರೆ ಅಲರ್ಜಿ ಎಂಬ ಇಂದಿನ ವಿದ್ಯಾವಂತ ಯುವಪೀಳಿಗೆಗೆ ಸವಾಲು ಎಂಬಂತೆ ಭೂ ಸೇನೆಯಲ್ಲಿ ಉನ್ನತ  ಬ್ರಿಗೇಡಿಯರ್‌ ಪದವಿ ಹೊಂದಿ ಅನೇಕ ಸೈನಿಕರಿಗೆ ನಿರ್ದೇಶನ  ನೀಡಿ ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡ ನಿವೃತ್ತ ಸೈನಿಕ ಇಂದು ಒಬ್ಬ ಸಾಮಾನ್ಯ ಕೃಷಿಕನಾಗಿ ದೇಶದ 71ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ನಾಡಿನ  ಗಮನ ಸೆಳೆಯುತ್ತಿದ್ದಾರೆ.

Advertisement

ನೂರಿನ್ನೂರು ವರ್ಷಗಳ ಹಿಂದೆ ಮೂರು ಸಾವಿರ ಮುಡಿ ಅಕ್ಕಿ ಗೇಣಿಗೆ ಬರುತ್ತಿದ್ದ ಕಾಸರಗೋಡು ಜಿಲ್ಲೆಯ ಪ್ರತಿಷ್ಠಿತ ಇಚ್ಲಂಪಾಡಿ ಬಂಟ ಮನೆತನದ ಮಾಜಿ ಲೋಕಸಭಾ ಸದಸ್ಯ ಐ. ರಾಮ ರೈ ಅವರ ಅಳಿಯ ನಿವೃತ್ತ ಬ್ರಿಗೇಡಿಯರ್‌ ಐ. ನಾಞಪ್ಪ ರೈ ಅವರು ಪ್ರಕೃತ ಹಳ್ಳಿಯ ಒಬ್ಬ ಸಾಮಾನ್ಯ ಕೃಷಿಕನಾಗಿ ವಿಶ್ರಾಂತ ಜೀವನವನ್ನು ನಡೆಸುತ್ತಿದ್ದು, ಅನೇಕ ಮಂದಿಗೆ ದೇಶ ರಕ್ಷಣೆಯ ಅನುಭವವನ್ನು ಹಂಚಿಕೊಳ್ಳುವ ಮಧ್ಯೆ ಕೃಷಿ ಕಾಯಕದಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾರೆ. ಇವರು ನಿವೃತ್ತಿಯ ಬಳಿಕ ತಮ್ಮ ಮಾವನ ನಿಧನದ ಅನಂತರ ಅನೇಕ ವರ್ಷಗಳಿಂದ ಪಾಳು ಬಿದ್ದಿದ್ದ  ಪೆರ್ಮಾರು ಎಂಬ 4 ಎಕರೆ ಭೂ ಪ್ರದೇಶವಿರುವ ಒಂದೇ ವಿಶಾಲ ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯೇ ದೇಶದ ಬೆನ್ನೆಲುಬು ಎಂಬ ವಚನವನ್ನು ಪಾಲಿಸುತ್ತಿದ್ದಾರೆ.

ಅವಿಭಕ್ತ ಕುಟುಂಬದ ಒಡೆತನದ 1960ರ ದಶಕದಲ್ಲಿ ಸುಮಾರು 20 ಜೋಡಿ ಎತ್ತು ಕೋಣಗಳ ಮೂಲಕ ಈ ಬಯಲು ಗದ್ದೆಯನ್ನು ಉಳಲಾಗುತಿತ್ತು. ಶಾಲಾ ಕಾಲೇಜುಗಳ ರಜಾ ದಿನಗಳಲ್ಲಿ ನಾಞಪ್ಪ ರೈ ಅವರು ತಾವೇ ಸ್ವತಃ ಗದ್ದೆಗಿಳಿದು ನೇಗಿಲು ಹಿಡಿದು ಉಳುತ್ತಿದ್ದರು. ಇವರು ಕೆಸರಿನೊಂದಿಗೆ ಸದಾ ಬೆಸುಗೆಯಿಂದಿದ್ದು, ಹಳ್ಳಿ ಜೀವನವನ್ನು ಉತ್ಸಾಹದಿಂದ ಕಳೆಯಲು ಅಸಾಧ್ಯವೆನಿಸಿದ ಇಂದಿನ ದಿನದಲ್ಲಿ ಭತ್ತದ ಬೆಳೆಯನ್ನು ಬೆಳೆಯಲು ಮನಸ್ಸು ಮಾಡಿದೆ ಎಂಬುದಾಗಿ ಸಂತೋಷ ವ್ಯಕ್ತಪಡಿಸುತ್ತಾರೆ. ಜತೆಗೆ ಕೃಷಿಯಲ್ಲಿ ಹೆಚ್ಚಿನ ಪ್ರೋತ್ಸಾಹಕ್ಕೆ ಕಾರಣ ದಿಲ್ಲಿಯಲ್ಲಿ ಎಂಜಿನಿಯರ್‌ ಆಗಿದ್ದ ಗಂಡನ ನಿವೃತ್ತಿ ಜೀವನವನ್ನು ಪಟ್ಟಣ ಸೇರದೆ ಹಳ್ಳಿಯಲ್ಲಿ ಕಳೆಯಲು ಮನಸ್ಸು ಮಾಡಿದ ಚಿಕ್ಕಮ್ಮ ರತಿ ಭಂಡಾರಿಯನ್ನು ನಾಞಪ್ಪ ರೈ ಸ್ಮರಿಸಿಕೊಳ್ಳುತ್ತಾರೆ.

ಕೃಷಿಗೆ ವ್ಯಯಿಸಿದ ಆರ್ಥಿಕ ಲೆಕ್ಕಾಚಾರವನ್ನು ನೋಡದೆ ಪಾಳು ಬಿದ್ದ ಬಂಜರು ಕೃಷಿ ಭೂಮಿಯನ್ನು ಫಲವತ್ತಾಗಿ ಬೆಳೆಸಬೇಕೆಂಬುದು ಇವರ ಸಾಧನೆಯಾಗಿದೆ. ಸುಮಾರು ಮೂವತ್ತು ವರ್ಷ ಗಳ ಕಾಲ ದೇಶದ ವಿವಿಧೆಡೆಗಳಲ್ಲಿ ಸೈನಿಕ ಅಧಿಕಾರಿಯಾಗಿ ದೇಶ ಕಾಯುವ  ಸೇವೆ ಮಾಡಿ ಸದ್ಯ ನಿವೃತ್ತರಾಗಿ ಇದೀಗ ಕೃಷಿಯ ರಕ್ಷಣೆಗೆ ಕೃಷಿ ಕಾಯಕದಲ್ಲಿ ನಿರತರಾಗಿರುವ ಹಿರಿಯ ಸೇನಾನಿಗೊಂದು ಬಿಗ್‌ ಸೆಲ್ಯೂಟ್‌.

ಕರಾವಳಿಯಲ್ಲಿ ಬಂಟ ಸಮುದಾಯಗಳ ಹೆಚ್ಚಿನ ಕುಟುಂಬವು ಕೃಷಿ ಆಧಾರಿತ ಶ್ರೀಮಂತಿಕೆಯ ಜೀವನ ನಡೆಸಿದ್ದವು. ಆದರೆ ಸರಕಾರದ ಕೃಷಿಗೆ ಪೂರಕವಲ್ಲದ ನಿಲುವು, ಕೂಲಿಯಾಳುಗಳ ಕೊರತೆ ಇನ್ನಿತರ ಹಲವಾರು ಕಾರಣಗಳಿಂದ ಇಂದು ಕೃಷಿ ಸಹಿತ ಭತ್ತದ ಬೇಸಾಯಕ್ಕೆ ಮುಂದಾಗುತ್ತಿಲ್ಲ. ಉನ್ನತ ಶಿಕ್ಷಣದ ಬಳಿಕ  ಕೃಷಿಯತ್ತ ಮನಸು ಮಾಡದೆ ವೈಟ್‌ ಕಾಲರ್‌ ಉದ್ಯೋಗವನ್ನರಸಿ ಪೇಟೆಯತ್ತ ಮುಖ ಮಾಡುವ ಕೃಷಿಕರ ಮಕ್ಕಳ ಆಡಂಬರದ ಜೀವನದ ಪರಿಣಾಮವೋ ಎಂಬಂತೆ ಹಳ್ಳಿಯ ಸಾವಿರಾರು ಹೆಕ್ಟೇರ್‌ ಕೃಷಿ ಪ್ರದೇಶಗಳು ಇಂದು ಪಾಳು ಬಿದ್ದಿವೆ. 

Advertisement

ಆದುದರಿಂದ ತಮ್ಮ ಹಡಿಲು ಬಿದ್ದ ಕೃಷಿ ಭೂಮಿಯನ್ನು ಅಲ್ಪಸ್ವಲ್ಪವಾದರೂ ಬೆಳೆ ಬೆಳೆಯು ವಂತೆ ಮಾಡಿ ಸುಂದರ ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು. ಕೇವಲ ಹೆಸರಿಗೋಸ್ಕರ ಕೃಷಿ ಮಾಡದೆ ಉತ್ತಮ ಫಲಭರಿತ ಕೃಷಿಯ ಮೂಲಕ ಇತರರಿಗೆ ಉಪಕಾರ ವಾಗಬೇಕು. ಇದುವೇ ನಾವು ನಮ್ಮ ದೇಶಕ್ಕೆ ನೀಡುವ ಬಹು ದೊಡ್ಡ ಕಾಣಿಕೆ ಎಂಬ ದೃಢ ನಿಲುವು ರೈ ಯವರದು.

Advertisement

Udayavani is now on Telegram. Click here to join our channel and stay updated with the latest news.

Next