ಸಾಗರ: ರಾಜ್ಯದ ಬುಡಕಟ್ಟು ಜನಾಂಗವಾದ ಹಸಲರು ಸಮುದಾಯಕ್ಕೆ ನೀಡುತ್ತಿರುವ ಪೌಷ್ಟಿಕ ಆಹಾರವನ್ನು ಪುನರ್ ಪ್ರಾರಂಭಿಸುವಂತೆ ಒತ್ತಾಯಿಸಿ ಆ.22ರ ಮಂಗಳವಾರ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಒಕ್ಕೂಟದ ವತಿಯಿಂದ ಉಪವಿಭಾಗಾಧಿಕಾರಿಗಳ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ರಾಮಣ್ಣ ಹಸಲರು ಮಾತನಾಡಿ, ಹಸಲರು ಜನಾಂಗಕ್ಕೆ ರಾಜ್ಯ ಸರ್ಕಾರ ನೀಡುತ್ತಿದ್ದ ಪೌಷ್ಟಿಕ ಆಹಾರದ ಕಿಟ್ ಈ ಸಾಲಿನ ಜೂನ್‌ನಿಂದ ನಿಲ್ಲಿಸಲಾಗಿದೆ. ಎಸ್‌ಟಿ ಜನಾಂಗಕ್ಕೆ ಸೇರಿರುವ ಹಸಲರು ಸಮುದಾಯಕ್ಕೆ ಜೂನ್‌ನಿಂದ ಡಿಸೆಂಬರ್ ತಿಂಗಳವರೆಗೆ ಆರು ತಿಂಗಳಿಗೆ ಆಗುವಷ್ಟು ಪೌಷ್ಟಿಕ ಆಹಾರದ ಕಿಟ್ ವಿತರಣೆ ಮಾಡಲಾಗುತ್ತಿತ್ತು ಎಂದರು.
ಮುಂದುವರೆದು ಮಾತನಾಡಿ, ಕೇಂದ್ರ ಸರ್ಕಾರ ಸಮುದಾಯಕ್ಕೆ ವರ್ಷಪೂರ್ತಿ ಆಹಾರ ಕಿಟ್ ನೀಡಬೇಕು ಎಂದು ಆದೇಶ ಮಾಡಿದೆ. ಆದರೆ ರಾಜ್ಯ ಸರ್ಕಾರ ಜೂನ್‌ನಿಂದ ಸಂಪೂರ್ಣವಾಗಿ ಕಿಟ್ ಕೊಡುವುದನ್ನೇ ನಿಲ್ಲಿಸಿಬಿಟ್ಟಿದೆ. 10 ಕೆಜಿ ಕೊಡುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಆದೇಶದಂತೆ ಎಲ್ಲ ಧಾನ್ಯಗಳನ್ನು ನೀಡಬೇಕು. ಜೊತೆಗೆ ಆರು ತಿಂಗಳ ಬದಲು 12 ತಿಂಗಳು ಆಹಾರ ಕಿಟ್ ನೀಡಬೇಕು ಎಂದು ಒತ್ತಾಯಿಸಿದ ಅವರು ಅರಣ್ಯ ಮೂಲ ಬುಡಕಟ್ಟು ನಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆಯಡಿ ಹೆಚ್ಚಿನ ಭೂಮಿ ಮಂಜೂರು ಮಾಡುವಂತೆ ಒತ್ತಾಯಿಸಿ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಸಾಗರದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ಹಸಲರು ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು ಕಾಡಿನ ನಡುವೆ ವಾಸ ಮಾಡುತ್ತಿವೆ. ಸರ್ಕಾರ ಅವರಿಗೆ ನೀಡಿರುವ ಆಹಾರದ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡಬಾರದು. ಪೌಷ್ಟಿಕ ಆಹಾರ ಪಡೆಯಲು ಒಕ್ಕೂಟ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದೆ. ಪಶ್ಚಿಮಘಟ್ಟ ಪ್ರದೇಶದಲ್ಲಿ ವಾಸಿಸುವ 12 ಬುಡಕಟ್ಟು ಸಮುದಾಯದ ಹೋರಾಟದಿಂದ ಆಹಾರ ಕಿಟ್ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾಗಿತ್ತು. ಇದೀಗ ಅದನ್ನು ನಿಲ್ಲಿಸುವ ಕ್ರಮ ಖಂಡನೀಯ. ತಕ್ಷಣ ಎಂದಿನಂತೆ ಆಹಾರ ಕಿಟ್ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಕೈಗೆತ್ತಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಮಹಿಳಾ ಪ್ರಮುಖರಾದ ಲಕ್ಷ್ಮಮ್ಮ ಹಿರೇಮನೆ ಮಾತನಾಡಿದರು. ಪ್ರತಿಭಟನೆಯಲ್ಲಿ ಮಂಜುಳಾ, ಶೋಭಾ, ಕಮಲಾಕ್ಷಿ ಕಡಕೋಡು, ಈಶ್ವರ, ಕೃಷ್ಣಮೂರ್ತಿ, ನಾಗರತ್ನ, ರವೀಂದ್ರ, ಎಂ.ಸಿ. ಸುಂದರಪ್ಪ, ಈಶ್ವರ, ನಾರಾಯಣಪ್ಪ, ಗೌರಿ, ಗಂಗಾಧರ, ಎಂ.ಬಿ.ಮಂಜಪ್ಪ ಹಿರೇನೆಲ್ಲೂರು, ಸೋಮಾವತಿ, ಸುಂದರಪ್ಪ ಇನ್ನಿತರರು ಹಾಜರಿದ್ದರು.