ನವದೆಹಲಿ: ಹತ್ಯೆಗೀಡಾದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರ ಅಂತ್ಯಕ್ರಿಯೆ ಮುಗಿದ ಬೆನ್ನಲ್ಲೇ ಇನ್ನು ಎರಡು ದಿನಗಳಲ್ಲಿ ಮೂಸೆವಾಲಾ ಹತ್ಯೆಗೆ ಸೇಡು ತೀರಿಸಿಕೊಳ್ಳುವುದಾಗಿ ದೆಹಲಿ ಮೂಲದ ನೀರಜ್ ಬಾವ್ನಾ ಗ್ಯಾಂಗ್ ಸಾಮಾಜಿಕ ಜಾಲತಾಣದ ಮೂಲಕ ಶಪಥಗೈದಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಪಠ್ಯ ಪರಿಷ್ಕರಣೆ: ಕಾಂಗ್ರೆಸ್ ಪ್ರೇರಿತ ಈ ಟೂಲ್ ಕಿಟ್ ಗೆ ಬಗ್ಗಬೇಕಿಲ್ಲ: ಬಿಜೆಪಿ ಹೈಕಮಾಂಡ್
“ಸಿಧು ಮೂಸೆವಾಲಾ ನಮ್ಮ ಅಂತರಾಳ, ಸಹೋದರರಾಗಿದ್ದು, ನಾವು ಇನ್ನು ಎರಡು ದಿನಗಳಲ್ಲಿ ತಕ್ಕ ಪಾಠ” ಕಲಿಸುತ್ತೇವೆ ಎಂಬ ಪೋಸ್ಟ್ ಅನ್ನು ನೀರಜ್ ಬಾವ್ನಾ ಗ್ಯಾಂಗ್ ಫೇಸ್ ಬುಕ್ ನಲ್ಲಿ ಬೆದರಿಕೆಯೊಡ್ಡಿದೆ.
ನೀರಜ್ ಬಾವ್ನಾ ದೆಹಲಿಯ ಕುಖ್ಯಾತ ಗ್ಯಾಂಗ್ ಸ್ಟರ್, ಈತ ತಿಹಾರ್ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ. ಈತನ ವಿರುದ್ಧ ಹಲವಾರು ಕೊಲೆ ಹಾಗೂ ಸುಲಿಗೆ ಪ್ರಕರಣ ದಾಖಲಾಗಿತ್ತು. ಈತನ ಸಹಚರರಾದ ಟಿಲ್ಲು ತಾಜ್ ಪುರಿಯಾ ಮತ್ತು ಗ್ಯಾಂಗ್ ಸ್ಟರ್ ದಾವಿಂದರ್ ಬಾಂಬಿಯಾ ಕೂಡಾ ತಿಹಾರ್ ಜೈಲಿನಲ್ಲಿದ್ದಿರುವುದಾಗಿ ವರದಿ ತಿಳಿಸಿದೆ.
ಈ ಪೋಸ್ಟ್ ಅನ್ನು ಫೇಸ್ ಬುಕ್ ನಲ್ಲಿ ಯಾರು ಬರೆದಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ನೀರಜ್ ಬಾವ್ನಾ ಗ್ಯಾಂಗ್ ನ ಸಹಚರರು ದೆಹಲಿ, ಹರ್ಯಾಣ, ಪಂಜಾಬ್ ಮತ್ತು ರಾಜಸ್ಥಾನ್ ಗಳಲ್ಲಿ ಕಾರ್ಯಾಚರಿಸುತ್ತಿರುವುದಾಗಿ ವರದಿ ವಿವರಿಸಿದೆ.
ಮೇ 29ರಂದು ಮಾನ್ಸಾ ಪ್ರದೇಶದತ್ತ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿಧು ಮೂಸೆವಾಲಾ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಮೂಸೆವಾಲಾ ಅವರ ದೇಹದೊಳಕ್ಕೆ 30 ಗುಂಡುಗಳು ಹೊಕ್ಕಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮೂಸೆವಾಲಾ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.
“ಮೂಸೆವಾಲಾ ಹತ್ಯೆ ಘಟನೆ ಹೃದಯವಿದ್ರಾವಕ ಘಟನೆಯಾಗಿದೆ. ಈ ಪ್ರಕರಣದ ಪ್ರಮುಖ ರೂವಾರಿಗಳೆಂದು ಶಂಕಿಸಲಾದ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಮತ್ತು ಆತನ ಸಹಚರ ಗೋಲ್ಡಿ ಬ್ರಾರ್ ವಿರುದ್ಧ ನೀರಜ್ ಗ್ಯಾಂಗ್ ಆಕ್ರೋಶ ವ್ಯಕ್ತಪಡಿಸಿದೆ.