ಇದು ಮುಂದಿನ ದಿನಗಳಲ್ಲಿ ರಾಜ್ಯದ ರೇಷ್ಮೆ ಬೆಳೆಗಾರರಿಗೆ ವರವಾಗುವ ಸಾಧ್ಯತೆ ಇದೆ.
ಚೀನ ಆ್ಯಪ್ ಮತ್ತಿತರ ಉತ್ಪನ್ನ ಗಳಿಗೆ ನಿಷೇಧ ವಿಧಿಸಿದಂತೆ ರೇಷ್ಮೆ ಆಮದು ಕೂಡ ನಿಷೇಧಿಸಬೇಕು. ಇದರಿಂದ ಬೆಳೆಗಾರರು ಮತ್ತು ಸ್ಥಳೀಯ ರೇಷ್ಮೆ ಮಾರುಕಟ್ಟೆಗೆ ಅನುಕೂಲ ಆಗಲಿದೆ ಎಂದು ಕರ್ನಾಟಕವು ಕೇಂದ್ರಕ್ಕೆ ಈಚೆಗೆ ಪತ್ರ ಬರೆದಿದೆ.
ರೇಷ್ಮೆ ಬೆಳೆಯುವ ಇತರ ರಾಜ್ಯಗಳಿಂದಲೂ ಒತ್ತಡ ಬಂದಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.
ನಿಷೇಧ ಕಷ್ಟ ; ನಿರ್ಬಂಧ ಸಾಧ್ಯ
ವಿಶ್ವ ವ್ಯಾಪಾರ ಸಂಸ್ಥೆ (WTO) ನಿಯಮ ಪ್ರಕಾರ ಏಕಾಏಕಿ ಆಮದು ನಿಷೇಧಿಸಲಾಗದು. ಆದರೆ ಕೋವಿಡ್ 19ನಿಂದಾಗಿ ಎಲ್ಲ ವಹಿವಾಟು ಸ್ಥಗಿತಗೊಂಡಿದ್ದು, ರೇಷ್ಮೆ ಮಗ್ಗಗಳು ಮತ್ತು ಅವಲಂಬಿತ ಕೈಗಾರಿಕೆಗಳು ಸ್ಥಗಿತಗೊಂಡಿವೆ. ಹೀಗಾಗಿ ಮೂರ್‍ನಾಲ್ಕು ತಿಂಗಳಿಂದ ಕಚ್ಚಾ ರೇಷ್ಮೆ ದಾಸ್ತಾನು ಆಗಿದೆ.
ಈ ಹಿನ್ನೆಲೆಯಲ್ಲಿ ಚೀನ ರೇಷ್ಮೆ ಮೇಲೆ ನಿಗದಿತ ಅವಧಿಗೆ ನಿರ್ಬಂಧ ವಿಧಿಸುವುದು ಅಥವಾ ಆಮದು ಸುಂಕವನ್ನು ಗರಿಷ್ಠ ಶೇ. 25ರವರೆಗೆ ಹೆಚ್ಚಿಸಲು ಅವಕಾಶ ಇದೆ ಎನ್ನಲಾಗಿದೆ.
ಇದು ಸಾಧ್ಯವಾದರೆ ಸ್ಥಳೀಯ ರೇಷ್ಮೆಗೆ ಬೇಡಿಕೆ ಬರಲಿದೆ. ಆಗ ಪ್ರಸ್ತುತ ಸಂಕಷ್ಟಕ್ಕೆ ಸಿಲುಕಿರುವ ರೇಷ್ಮೆ ಬೆಳೆಗಾರರು ಮತ್ತು ನೂಲು ಬಿಚ್ಚಣಿಕೆದಾರರಿಗೆ ಸಾಕಷ್ಟು ಅನುಕೂಲ ಆಗಲಿದೆ.
Advertisement
3 ಸಾವಿರ ಮೆ. ಟನ್ ಆಮದುದೇಶಾದ್ಯಂತ ವಾರ್ಷಿಕ ಸರಿ ಸುಮಾರು 35 ಸಾವಿರ ಮೆ. ಟನ್ ರೇಷ್ಮೆ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ರಾಜ್ಯದ ಪಾಲು ಶೇ. 50ಕ್ಕಿಂತ ಹೆಚ್ಚು. 2ರಿಂದ 3 ಸಾವಿರ ಮೆ. ಟನ್ ಚೀನದಿಂದ ಆಮದು ಆಗುತ್ತಿದೆ. ಇದೇ ಗುಣಮಟ್ಟದ ಕಚ್ಚಾ ರೇಷ್ಮೆ ರಾಜ್ಯದಲ್ಲೂ ಉತ್ಪಾದನೆ ಆಗುತ್ತಿದೆ. ಆದರೆ ಬೇಡಿಕೆಯಷ್ಟು ಪೂರೈಕೆ ಆಗುತ್ತಿಲ್ಲ. ಇದಲ್ಲದೆ ದೇಶೀಯವಾಗಿ ಸ್ವಯಂಚಾಲಿತ ರೀಲಿಂಗ್ ಯಂತ್ರ ತಯಾರಿಸುವ ಪ್ರಯತ್ನವೂ ನಡೆದಿದೆ ಎಂದು ಕೇಂದ್ರೀಯ ರೇಷ್ಮೆ ಮಂಡಳಿ ಮೂಲಗಳು ‘ಉದಯವಾಣಿ’ಗೆ ಸ್ಪಷ್ಟಪಡಿಸಿವೆ.