Advertisement

ದ.ಕ.: ಈ ಬಾರಿ ಜಿಲ್ಲೆಯಲ್ಲಿ ಸಾರ್ವಜನಿಕ ನಾಗಾರಾಧನೆಗೆ ನಿರ್ಬಂಧ – ಇಲ್ಲಿದೆ ಮಾಹಿತಿ

08:21 PM Jul 20, 2020 | Hari Prasad |

ಮಂಗಳೂರು: ಹಿಂದೂ ‍ಧಾರ್ಮಿಕ ಆಚರಣೆಯಲ್ಲಿ ವರ್ಷದ ಹಬ್ಬಗಳಿಗೆ ಮುನ್ನುಡಿ ಎಂದೇ ಕರೆಯಲ್ಪಡುವ ನಾಗರ ಪಂಚಮಿ ಆಚರಣೆಗೆ ಈ ವರ್ಷ ಕೋವಿಡ್ 19 ಸೋಂಕಿನ ಬಿಸಿ ತಟ್ಟಿದೆ.

Advertisement

ಜುಲೈ 25ರ ಶನಿವಾರ ನಾಗರ ಪಂಚಮಿ ಹಬ್ಬವಾಗಿದ್ದು ಈ ದಿನದಂದು ಜಿಲ್ಲೆಯ ಎಲ್ಲಾ ಪ್ರಮುಖ ನಾಗಾರಾಧನಾ ಸ್ಥಳಗಳಲ್ಲಿ ಸಾರ್ವಜನಿಕ ನಾಗಾರಾಧನೆಗೆ ಜಿಲ್ಲಾಡಳಿತ ನಿರ್ಬಂಧ ಹೇರಿದೆ.

ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕೋವಿಡ್ 19 ಸೋಂಕು ಇನ್ನೂ ಕೂಡ ಸಂಪೂರ್ಣ ಹತೋಟಿಗೆ ಬಾರದೇ ಇರುವುದರಿಂದ ಸಾರ್ವಜನಿಕರ ಪಾಲ್ಗೊಂಡು ಧಾರ್ಮಿಕ ಆಚರಣೆ ಮತ್ತು ಕಾರ್ಯಕ್ರಮಗಳನ್ನು ಆಚರಿಸಲು ಅವಕಾಶ ನೀಡಿದಲ್ಲಿ, ಸಾರ್ವಜನಿಕರು ದೊಡ್ಡ ಸಂಖ್ಯೆಯಲ್ಲಿ ಒಂದೆಡೆ ಸೇರಿ ಸೋಂಕು ಹರಡುವಿಕೆ ಹೆಚ್ಚುವ ಸಂಭವವಿದೆ.

ಹಾಗಾಗಿ, ಮುಂಜಾಗ್ರತಾ ಕ್ರಮವಾಗಿ ಮುಂಬರುವ ನಾಗರ ಪಂಚಮಿ ದಿನದಂದು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಾಗಾರಾಧನೆ ನಡೆಯುವ ದೇವಸ್ಥಾನಗಳಲ್ಲಿ ಕೇವಲ ಅರ್ಚಕರು ಮತ್ತು ದೇವಾಲಯದ ಸಿಬ್ಬಂದಿಗಳು ಮಾತ್ರ ಸಾಂಪ್ರದಾಯಿಕ ಪೂಜೆಗಳನ್ನು ಸಾಂಕೇತಿಕವಾಗಿ ಮಾಡಲು ಈ ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

ಮಾತ್ರವಲ್ದೇ ಆ ದಿನದಂದು ಸಾರ್ವಜನಿಕರಿಗೆ ಹಾಗೂ ಭಕ್ತಾದಿಗಳಿಗೆ ದೇವಳದ ಆವರಣಕ್ಕೆ ನಿಷೇಧವನ್ನು ಹೇರಲು ಹಾಗೂ ಪ್ರಮುಖ ನಾಗ ಬನಗಳಲ್ಲಿಯೂ ಸಹ ಅರ್ಚಕರು ಮಾತ್ರವೇ ಸಾಂಪ್ರದಾಯಿಕ ಪೂಜೆಗಳನ್ನು ಸಾಂಕೇತಿಕವಾಗಿ ಮಾಡುವ ತೀರ್ಮಾನವನ್ನು ಈ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.

ಇಷ್ಟು ಮಾತ್ರವಲ್ಲದೇ ಈ ಬಾರಿ ಕೋವಿಡ್ 19 ಸೋಂಕಿನ ಕಾರಣದಿಂದ ನಾಗರ ಪಂಚಮಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ವರ ಮಹಾಲಕ್ಷ್ಮೀ ಹಬ್ಬ ಸೇರಿದಂತೆ ಎಲ್ಲಾ ಪ್ರಮುಖ ಹಬ್ಬಗಳ ಸಂದರ್ಭಗಳಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ನಿಷೇಧಿಸಲಾಗಿದೆ.

ಸಾರ್ವಜನಿಕರು ತಮ್ಮ ತಮ್ಮ ಮನೆಗಳಿಗೆ ಸೀಮಿತಗೊಳಿಸಿ ಹಬ್ಬಗಳನ್ನು ಆಚರಿಸಿಕೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ತಿಳಿಸಿದ್ದಾರೆ.

ಇಂದಿನ ಈ ಸಭೆಯಲ್ಲಿ ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಧಾರ್ಮಿಕ ದತ್ತಿ ಸಹಾಯಕ ಆಯುಕ್ತ ವೆಂಕಟೇಶ್, ಧಾರ್ಮಿಕ ಪರಿಷತ್‌ ರಾಜ್ಯ ಸದಸ್ಯರಾದ ಸೂರ್ಯ ನಾರಾಯಣ ಭಟ್, ಸೂರ್ಯ ಕಷೆಕೋಡಿ, ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next