Advertisement

Haryana: ಹರ್ಯಾಣದ ಕೆಲವೆಡೆ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ!

07:48 PM Aug 09, 2023 | Team Udayavani |

ಚಂಡೀಗಢ: ಹರ್ಯಾಣದ ನೂಹ್‌ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಮುಗಲಭೆ ಬೆನ್ನಲ್ಲೇ, ಗ್ರಾಮಗಳಿಗೆ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶ ನಿಷೇಧಿಸಿ ರಾಜ್ಯದ ಮೂರು ಜಿಲ್ಲೆಗಳ 50ಕ್ಕೂ ಹೆಚ್ಚು ಪಂಚಾಯತಿಗಳು ಆದೇಶ ಹೊರಡಿಸಿವೆ. ಆನ್‌ಲೈನ್‌ನಲ್ಲಿ ಈ ಕುರಿತ ಪತ್ರಗಳು ಜೋರಾಗಿ ಹರಿದಾಡುತ್ತಿರುವುದರಿಂದ ಪೊಲೀಸರೂ ತನಿಖೆ ಆರಂಭಿಸಿದ್ದಾರೆ.

Advertisement

ರೆವಾರಿ, ಮಹೇಂದ್ರಗಢ ಮತ್ತು ಜಜ್ಜರ್‌ ಜಿಲ್ಲೆಯ 50ಕ್ಕೂ ಹೆಚ್ಚು ಪಂಚಾಯಿತಿಗಳು ಇದೇ ರೀತಿಯ ಪತ್ರಗಳನ್ನು ಬರೆದಿದ್ದು, ಇದಕ್ಕೂ ಅಲ್ಲಿನ ಸರಪಂಚ್‌ಗಳು ಸಹಿ ಮಾಡಿದ್ದಾರೆ. ಅಲ್ಲದೇ, ಗ್ರಾಮಗಳಲ್ಲಿ ವಾಸಿಸುತ್ತಿರುವ ಮುಸ್ಲಿಮರು ಪೊಲೀಸರಿಗೆ ದಾಖಲೆಗಳನ್ನು ಸಲ್ಲಿಸಬೇಕು ಎಂದು ಈ ಪತ್ರಗಳಲ್ಲಿ ಸೂಚಿಸಲಾಗಿದೆ. ಈ ಪತ್ರಗಳಿಗೆ ಸಂಬಂಧಿಸಿದಂತೆ ಎಲ್ಲಾ ಸಂಬಂಧಪಟ್ಟ ಪಂಚಾಯಿತಿಗಳಿಗೆ ಶೋಕಾಸ್‌ ನೋಟಿಸ್‌ ನೀಡುವಂತೆ ನರ್ನಾಲ್‌ ಉಪವಿಭಾಗೀಯ ಮ್ಯಾಜಿಸ್ಟ್ರೇಟ್‌ ವಿಭಾಗೀಯ ಕಚೇರಿಗಳಿಗೆ ಸೂಚಿಸಿದ್ದಾರೆ.

“ಎಲ್ಲಾ ಸಿಖ್‌, ಹಿಂದೂ ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಮುಸ್ಲಿಂ ಉದ್ಯೋಗಿಗಳನ್ನು ತೆಗೆದುಹಾಕಲು ಅವರಿಗೆ ಎರಡು ದಿನಗಳ ಗಡುವು ನೀಡಿದ್ದೇವೆ. ಒಂದು ವೇಳೆ ಹಾಗೆ ಮಾಡದಿದ್ದರೆ ಅಂತಹ ಅಂಗಡಿಗಳನ್ನು ಬಹಿಷ್ಕರಿಸುತ್ತೇವೆ” ಎಂದು ಹಿಸಾರ್‌ ಪಂಚಾಯಿತಿಯ ಕೆಲವು ಸದಸ್ಯರು ಹೇಳಿದ್ದಾರೆ.

ಇನ್ನೊಂದೆಡೆ, ಹರ್ಯಾಣ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮುಸ್ಲಿಮರ ಹತ್ಯೆಗೆ ಹಾಗೂ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಬಹಿಷ್ಕರಿಸುವಂತೆ ದ್ವೇಷ ಭಾಷಣಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದರ ವಿಚಾರಣೆ ವೇಳೆ, ಹಿರಿಯ ನ್ಯಾಯವಾದಿ ಕಪಿಲ್‌ ಸಿಬಾಲ್‌ ಅವರು ಗುರುಗ್ರಾಮ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next